ಪಬ್ಲಿಕ್ ಅಲರ್ಟ್ ನ್ಯೂಸ್:-ಪಿ.ಎಂ.ಇ.ಜಿ.ಪಿ, ಪಿ.ಎಂ.ಎಫ್.ಎಂ.ಇ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿ: ಲಕ್ಷ್ಮಿಕಾಂತ ರೆಡ್ಡಿ ಜಿ
ಮೈಸೂರು, ಏ.06(ಕರ್ನಾಟಕ ವಾರ್ತೆ):-
ರೈತರು ಬೆಳೆದ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುವಂತಾಗಲಿ ಎಂದು ಆಹಾರ ಸಂಸ್ಕರಣೆಗಾಗಿ ಕೃಷಿ ಇಲಾಖೆಯ ಮೂಲಕ ಜಾರಿಗೆ ತಂದಿರುವ ಪಿ.ಎಂ.ಎಫ್. ಎಂ.ಇ ಹಾಗೂ ಸ್ವಯಂ ಉದ್ಯೋಗವನ್ನು ಪ್ರೋತ್ಸಾಹಿಸಲು ಕೈಗಾರಿಕಾ ಇಲಾಖೆಯಿಂದ ಜಾರಿಗೆ ತಂದಿರುವ ಪಿ.ಎಂ.ಇ.ಜಿ.ಪಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವಂತೆ ಜಿಲ್ಲಾಧಿಕಾರಿ ಲಕ್ಷ್ಮಿ ಕಾಂತ ರೆಡ್ಡಿ ಜಿ ಅವರು ಅಧಿಕಾರಿಗಳಿಗೆ ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಸರ್ಕಾರದ ಬಹಳಷ್ಟು ಯೋಜನೆಗಳನ್ನು ಬಡವರು ಹಾಗೂ ಆರ್ಥಿಕವಾಗಿ ಹಿಂದುಳಿದವರನ್ನು ದೃಷ್ಠಿಯಲ್ಲಿ ಇಟ್ಟಿಕೊಂಡು ಯೋಜನೆ ರೂಪಿಸಲಾಗುತ್ತದೆ. ಇಲಾಖೆಗಳಿಂದ ಸಬ್ಸಿಡಿಯೊಂದಿಗೆ ಸಾಲ ನೀಡಲು ಅರ್ಜಿಗಳನ್ನು ಬ್ಯಾಂಕ್ ಗಳಿಗೆ ಕಳುಹಿಸಿದಾಗ ಅವುಗಳನ್ನು ಆದ್ಯತೆ ಮೇಲೆ ಪರಿಗಣಿಸಿ ವಿಲೇವಾರಿ ಮಾಡಿ ಎಂದರು.
ಪಿ.ಎಂ.ಇ.ಜಿ.ಪಿ ಯೋಜನೆಯಡಿ 660 ಅರ್ಜಿಗಳ ಪೈಕಿ 92 ಅರ್ಜಿಗಳಿಗೆ ಸಾಲ ಮಂಜೂರಾತಿಯಾಗಿದೆ. 376 ಅರ್ಜಿಗಳು ವಿವಿಧ ಬ್ಯಾಂಕ್ ಗಳ ಲಾಗಿನ್ ನಲ್ಲಿ ಇದೆ. 192 ಅರ್ಜಿಗಳು ತಿರಸ್ಕೃತವಾಗಿರುತ್ತದೆ. ಯಾವುದಾದರೂ ದಾಖಲೆಗಳ ಕೊರತೆಯಿಂದ ತಿರಸ್ಕೃತವಾಗಿದ್ದಲ್ಲಿ ಅಭ್ಯರ್ಥಿಗಳನ್ನು ಕರೆದು ದಾಖಲಾತಿ ಲಭ್ಯವಿದ್ದಲ್ಲಿ ದಾಖಲೆ ಪಡೆದು ಅರ್ಜಿಯನ್ನು ಪುನ: ಪರಿಗಣಿಸುವಂತೆ ತಿಳಿಸಿದರು.
ಬಾಂಕ್ ಗಳ ಲಾಗಿನ್ ನಲ್ಲಿರುವ 376 ಅರ್ಜಿಗಳನ್ನು ಒಂದು ತಿಂಗಳೊಳಗಾಗಿ ಸಕಾರಣದೊಂದಿಗೆ ವಿಲೇವಾರಿ ಮಾಡಿ ಮುಂದಿನ ಸಭೆಗೆ ವರದಿ ನೀಡುವಂತೆ ತಿಳಿಸಿದರು.
ಪಿ.ಎಂ.ಎಫ್.ಎಂ.ಇ ಯೋಜನೆಯಡಿ ವಿವಿಧ ಬ್ಯಾಂಕ್ ಗಳಿಂದ 248 ಅರ್ಜಿಗಳು ತಿರಸ್ಕೃತವಾಗಿರುತ್ತದೆ. ಈ ಯೋಜನೆಯಡಿ 3 ಲಕ್ಷದೊಳಗಿನ ಸಣ್ಣ ಪ್ರಮಾಣದ ಸಾಲವನ್ನು ನೀಡುವ ಅರ್ಜಿಗಳು ಬಹಳಷ್ಟು ಇರುತ್ತದೆ ಸಿಬಿಲ್ ಸ್ಕೋರ್ ಪ್ರಾರಂಭಿಸಿರುವುದಿಲ್ಲ ಎಂದು ತಿರಸ್ಕರಿಸುವುದು ಬೇಡ ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕರು ಈಗಾಗಲೇ ತಿರಸ್ಕೃತಗೊಂಡಿರುವ ಅರ್ಜಿಗಳ ಅರ್ಜಿದಾರರು ಹಾಗೂ ಬ್ಯಾಂಕರ್ ಗಳ ಸಹಯೋಗದೊಂದಿಗೆ ಸಭೆ ನಡೆಸಿ ಅರ್ಜಿದಾರರಿಗೆ ಮಾಹಿತಿ ನೀಡಿ ಅರ್ಜಿಯೊಂದಿಗೆ ದಾಖಲೆಗಳು ಬಿಟ್ಟು ಹೋಗಿದ್ದಲ್ಲಿ ಸರಿಪಡಿಸಿ ಅರ್ಜಿಯನ್ನು ಪುನ: ಸಲ್ಲಿಸಿ ಶೇ 100 ರಷ್ಟು ಸಾಧನೆ ಮಾಡಿ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಲೀಡ್ ಬ್ಯಾಂಕ್ ಮ್ಯಾನೇಜರ್ ಕೃಷ್ಣ ಮೂರ್ತಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರವಿ, ಕೈಗಾರಿಕೆ ಇಲಾಖೆ ಉಪನಿರ್ದೇಶಕ ಸೈಯದ್ ನಸೀರ್ ಅಹಮದ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
