ಪಬ್ಲಿಕ್ ಅಲರ್ಟ್ ನ್ಯೂಸ್:-ಶಾಲಾ ಪೂರ್ವ ಶಿಕ್ಷಣ ವಸ್ತುಪ್ರದರ್ಶನ ಕಾರ್ಯಕ್ರಮ ಉದ್ಘಾಟನೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಮೈಸೂರು ಗ್ರಾಮಾಂತರ, ಪಟ್ಟಣ ಪಂಚಾಯತ್, ರಮ್ಮನಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ
ಮೈಸೂರು ತಾಲೂಕು ವರುಣ ವೃತ್ತದ ವ್ಯಾಪ್ತಿಯಲ್ಲಿರುವ ಅಂಗನವಾಡಿ ಕೇಂದ್ರಗಳ ಮಕ್ಕಳಿಂದ ಕನ್ನಡ, ಇಂಗ್ಲಿಷ್, ಗಣಿತ ಹಾಗೂ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ವಸ್ತು ಪ್ರದರ್ಶನವನ್ನು ನಾಡನಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾಯಿತು. ಈ ಕಾರ್ಯಕ್ರಮವು ಮಕ್ಕಳಲ್ಲಿ ಸೃಜನಶೀಲತೆ, ಕಲಿಕಾ ಆಸಕ್ತಿ ಹಾಗೂ ಪ್ರಾಯೋಗಿಕ ಜ್ಞಾನವನ್ನು ವೃದ್ಧಿಸುವ ಉದ್ದೇಶದಿಂದ ನೆರವೇರಿಸಲಾಯಿತು.
ಕಾರ್ಯಕ್ರಮವನ್ನು ಜಿಲ್ಲಾ ಉಪ ನಿರ್ದೇಶಕರಾದ ಶ್ರೀ ಬಸವರಾಜು ರವರು ಉದ್ಘಾಟಿಸಿದರು. ವಿವಿಧ ಅಂಗನವಾಡಿ ಕೇಂದ್ರಗಳಿಂದ ಭಾಗವಹಿಸಿದ ಮಕ್ಕಳು ಶಾಲಾ ಪೂರ್ವ ಶಿಕ್ಷಣಕ್ಕೆ ಸಂಬಂಧಿಸಿದ ಅನೇಕ ಮಾದರಿಗಳನ್ನು ಸಿದ್ಧಪಡಿಸಿ ಪ್ರದರ್ಶಿಸಿದರು.
ಕನ್ನಡ ವಿಭಾಗದಲ್ಲಿ ಅಕ್ಷರ ಪರಿಚಯ, ಜ್ಞಾನಪೀಠ ಪ್ರಶಸ್ತಿ ವಿಜೇತರು, ಕರ್ನಾಟಕದ ಜಿಲ್ಲೆಗಳು ಮಾದರಿಗಳನ್ನು ಪ್ರದರ್ಶಿಸಲಾಯಿತು. ಇಂಗ್ಲಿಷ್ ವಿಭಾಗದಲ್ಲಿ ಅಲ್ಫಾಬೆಟ್‌ಗಳು, ಸರಳ ಪದಗಳು ಹಾಗೂ ಸಂಭಾಷಣೆಗಳನ್ನು ಆಕರ್ಷಕವಾಗಿ ತೋರಿಸಲಾಯಿತು. ಗಣಿತ ವಿಭಾಗದಲ್ಲಿ ಸಂಖ್ಯೆ ಗುರುತು, ಸೇರ್ಪಡೆ-ಕಳೆಯುವಿಕೆ, ಆಕಾರಗಳ ಪರಿಚಯ ಮುಂತಾದ ವಿಷಯಗಳ ಮಾದರಿಗಳನ್ನು ಮಕ್ಕಳು ಪ್ರದರ್ಶಿಸಿದರು. ವಿಜ್ಞಾನ ವಿಭಾಗದಲ್ಲಿ ಪ್ರಕೃತಿ, ಸಸ್ಯಜೀವನ, ಜಲಚಕ್ರ ಮತ್ತು ಸರಳ ಪ್ರಯೋಗಗಳನ್ನು ಒಳಗೊಂಡ ಮಾದರಿಗಳು ಎಲ್ಲರ ಗಮನ ಸೆಳೆಯುವಂತಾಗಿದ್ದವು.
ಈ ಪ್ರದರ್ಶನದಲ್ಲಿ ಮಕ್ಕಳ ಪಾಲ್ಗೊಳ್ಳುವಿಕೆ ಶ್ಲಾಘನೀಯವಾಗಿದ್ದು, ಅವರ ಆತ್ಮವಿಶ್ವಾಸ ಮತ್ತು ಕಲಿಕಾ ಸಾಮರ್ಥ್ಯ ಹೆಚ್ಚಲು ಸಹಾಯಕವಾಯಿತು. ಪೋಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಜಿಲ್ಲಾ ನಿರೂಪಣಾಧಿಕಾರಿಗಳಾದ ಶ್ರೀ ವಿಜಯ ಕುಮಾರ್, , ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀ ತಿಬ್ಬಯ್ಯ ಹಾಗೂ ರಮ್ಮನಹಳ್ಳಿಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳಾದ ಶ್ರೀ ಮಹೇಶ್ ರವರುಗಳು ಮಕ್ಕಳ ಪ್ರತಿಭೆಯನ್ನು ಮೆಚ್ಚಿದರು ಮತ್ತು ಇಂತಹ ಕಾರ್ಯಕ್ರಮಗಳು ಮಕ್ಕಳ ಸಮಗ್ರ ಅಭಿವೃದ್ಧಿಗೆ ಅತ್ಯಂತ ಉಪಯುಕ್ತವೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಂತ್ಯದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಶಂಸನಾ ಪತ್ರಗಳನ್ನು ವಿತರಿಸಲಾಯಿತು.. ಕಾರ್ಯಕ್ರಮದಲ್ಲಿ ವೃತ್ತದ ಮೇಲ್ವಿಚಾರಕಿ ಶ್ರೀಮತಿ ನಾಗರತ್ನ ಹಾಗೂ ಮೈಸೂರು ಗ್ರಾಮಾಂತರ ಯೋಜನೆಯ ಎಲ್ಲಾ ಮೇಲ್ವಿಚಾರಕರು ಹಾಜರಿದ್ದರು.
