ನ.೨ಕ್ಕೆ ಆರ್‌ಎಸ್‌ ಎಸ್‌ ಪಥಸಂಚಲನಕ್ಕೆ ಅವಕಾಶ ನೀಡದಿರಲಿ ಆಗ್ರಹ 

Pratheek
2 Min Read

ಪಬ್ಲಿಕ್ ಅಲರ್ಟ್


ಮೈಸೂರು: ಕಲಬುರ್ಗಿಯ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ನ.೨ರಂದು ಕಾರ್ಯಕ್ರಮ ನಡೆಸಲು ಅನುವು ಮಾಡಿಕೊಡಬಾರದು. ಒಂದು ವೇಳೆ ಅನುಮತಿ ನೀಡಿದರೆ ನಾವೂ ಸಹಾ ಸಂವಿಧಾನ ಹಿಡಿದು, ಬಳಿ ಬಟ್ಟೆ, ನೀಲಿ ಟೊಪ್ಪಿಗೆ ಧರಿಸಿ ಎಲ್ಲೆಡೆ ಪಥ ಸಂಚಲನ ಮಾಡುತ್ತೇವೆ ಎಂದು ಮಾಜಿ ಮೇಯರ್ ಪುರುಷೋತ್ತಮ ಎಚ್ಚರಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಆರ್‌ಎಸ್‌ಎಸ್‌ನವರು ಲಾಠಿ ಹಿಡಿದು ಬೀದಿ ಬೀದಿಯಲ್ಲಿ ಪಥ ಸಂಚಲನ ಮಾಡುವುದಾದರೂ ಏತಕ್ಕಾಗಿ, ಹಿಂದೂ ನಾವೆಲ್ಲಾ ಒಂದು ಎನ್ನುವ ಇವರು ಇಂದಿಗೂ ಸಮಾಜದಲ್ಲಿ ಅಸ್ಪೃಶ್ಯತೆ, ಅಸಮಾನತೆ, ಸ್ತ್ರೀಯರ ಬಗೆಗಿನ ತಾರತಮ್ಯ ಮೊದಲಾದವನ್ನು ಹೋಗಲಾಡಿಸುವ ಬಗ್ಗೆ ಏಕೆ ಮಾತನಾಡುತ್ತಿಲ್ಲ. ಇಂದಿಗೂ ಆರ್‌ಎಸ್‌ಎಸ್‌ನ ಪ್ರಮುಖ ಹುದ್ದೆಗಳು ಒಂದೇ ಜಾತಿಗೆ ಸೀಮಿತವಾಗಿರುವುದು ಏಕೆ ಎಂದು ಪ್ರಶ್ನಿಸಿದರು.
ಸಚಿವ ಪ್ರಿಯಾಂಕ ಖರ್ಗೆ ಆರ್‌ಎಸ್‌ಎಸ್ ವಿರುದ್ಧ ಮಾತನಾಡಿದರೆ ಬಿಜೆಪಿ ನಾಯಕರು ಮುಗಿ ಬೀಳುವುದೇಕೆ, ಅಂದರೆ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳೆಂಬುದನ್ನು ಇವರು ಸಾಬೀತು ಪಡಿಸುತ್ತಿದ್ದಾರೆ. ಇವರಿಗೆ ಕಾನೂನಿನ ಬಗ್ಗೆ ಆಸಕ್ತಿ ಇದ್ದಲ್ಲಿ ಮೊದಲು ಇವರ ಸಂಘಟನೆ ಕಾನೂನಿನ ಅಡಿಯಲ್ಲಿ ನೋಂದಣಿ ಆಗಲಿ. ಕಳೆದ ನೂರು ವರ್ಷಗಳಲ್ಲಿ ಈ ಸಂಘಟನೆಗೆ ಹರಿದುಬಂದ ವಿದೇಶೀ ದೇಣಿಗೆ, ದೇಶೀಯ ಸಂಪನ್ಮೂಲ ಸಂಗ್ರಹಣೆ ಬಗ್ಗೆ ಸಾರ್ವಜನಿಕರಿಗೆ, ಸರ್ಕಾರಕ್ಕೆ ಲೆಕ್ಕ ಕೊಡಲಿ, ಇವರು ಯಾವ ಉದ್ದೇಶಕ್ಕಾಗಿ ಈ ದೇಣಿಗೆ ಬಳಸಿದ್ದಾರೆಂಬ ಮಾಹಿತಿ ನೀಡಲಿ ಎಂದು ಆಗ್ರಹಿಸಿದರು.
ಇನ್ನು, ಆರ್‌ಎಸ್‌ಎಸ್ ನಿಷೇಧಿಸಬೇಕೆಂದು ಪ್ರಿಯಾಂಕ ಖರ್ಗೆ ಹೇಳಿಯೇ ಇಲ್ಲ. ಆದರೆ ಆರ್‌ಎಸ್‌ಎಸ್ ಈ ದೇಶದ ಸಂವಿಧಾನಾತ್ಮಕ ಕಾನೂನುಗಳಿಗೆ ಬೆಲೆ, ಗೌರವ ಕೊಡಬೇಕೆಂದುಉ ಹೇಳಿದರೆ ಇಷ್ಟೊಂದು ಗಾಬರಿ ಬೀಳುವುದೇಕೆ, ಅವರಿಗೆ ಕೊಲೆ ಬೆದರಿಕೆ ಹಾಕುವಂತಹ ಧೂರ್ತತನ ತೋರಿದರೂ ಆರ್‌ಎಸ್‌ಎಸ್ ಮೌನ ವಹಿಸಿದೆ ಎಂದು ಕಿಡಿಕಾರಿದರು.
ದೇಶವನ್ನು ರಕ್ಷಿಸಲು ಬಲಾಢ್ಯವಾದ ಸಂವಿಧಾನವಿದೆ, ಸೇನೆಗಳೂ ಇವೆ. ಬಲಿಷ್ಠ ರಾಜ್ಯಾಡಳಿತವಿದೆ. ಹೀಗಿದ್ದರೂ ಈ ಆರ್‌ಎಸ್‌ಎಸ್ ದೇಶ ರಕ್ಷಣೆಗಾಗಿ ಇರುವ ಸಂಘಟನೆಯೆಂದು ಜಂಬ ಕೊಚ್ಚಿಕೊಳ್ಳುತ್ತಿದ್ದಾರೆ. ಇದಲ್ಲದೆ, ಪ್ರಿಯಾಂಕ ಖರ್ಗೆ ಆರ್‌ಎಸ್‌ಎಸ್ ಧ್ಯೇಯ, ಉದ್ದೇಶಗಳಿಗೆ ಕೇಳಿರುವಜ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯ ತೊರಬೇಕು. ಈಗಲೂ ಆರ್‌ಎಸ್‌ಎಸ್‌ನವರು ಶೂದ್ರ ವರ್ಗದ ಮಕ್ಕಳು ಲಾಠಿ ಹಿಡಿದು ಬೀದಿ ಸುತ್ತುವಂತೆ ಮಾಡಿದ್ದಾರೆ. ಆದರೆ ಬಿಜೆಪಿ ನಾಯಕರ ಮಕ್ಕಳು ವಿದೇಶಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದರು.
ಹರಕುಮಾರ್, ಸಿದ್ದಸ್ವಾಮಿ, ಮಣಿಯಯ್ಯ, ಸೋಮಯ್ಯ ಮಲೆಯೂರು, ಪುಟ್ಟರಾಜು, ಸುರೇಶ್, ಸಣ್ಣಸ್ವಾಮಿ ಹಾಗೂ ರವಿಕುಮಾರ್ ಇದ್ದರು.

Share This Article
Leave a Comment