ಪಬ್ಲಿಕ್ ಅಲರ್ಟ್
ಮೈಸೂರು: ಪಂಚಕಾವ್ಯದೌತಣ ಕವಿಗೋಷ್ಠಿಯ 2ನೇ ದಿನದ ಪ್ರಚುರ ಕವಿಗೋಷ್ಠಿಯಲ್ಲಿ ಇಂದು, ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿದ ಸಾಹಿತಿ, ಕವಿ, ಕವಯತ್ರಿಗಳಿಂದ ಕನ್ನಡ ಕವತೆಗಳ ಧಾರೆಯೇ ಹರಿದಿದ್ದು ಮಾನಸಗಂಗೋತ್ರಿಯ ಬಿ.ಎಂ.ಶ್ರೀ ಸಭಾಂಗಣ ಇದಕ್ಕೆ ಸಾಕ್ಷಿಯಾಯಿತು.
ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ನಡೆಯುತ್ತಿರುವ ಪ್ರಚುರ ಕವಿಗೋಷ್ಠಿಯಲ್ಲಿ ಇಂದು ಅನಾಥಾಶ್ರಮ, ವೃದ್ಧಾಶ್ರಾಮ ಆಶ್ರಯಿತರು, ವಿಶೇಷಚೇತನರು, ಪೌರಕಾರ್ಮಿಕರು ಹಾಗೂ ಲಿಂಗತ್ವ ಅಲ್ಪ ಸಂಖ್ಯಾತರುಗಳಿಗೆ ಕವಿತೆ ವಾಚಿಸಲು ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ 43 ಕವಿಗಳು ಸಮೃದ್ಧ ಕನ್ನಡ, ನಾಡು-ನುಡಿ,ದೇಶಪ್ರೇಮ, ಅನ್ನದಾತ, ಮಹಿಳೆಯರ ಮೇಲಿನ ದೌರ್ಜನ್ಯ, ತಂದೆ-ತಾಯಿ, ಗ್ಯಾರೆಂಟಿ ಯೋಜನೆ, ಗಡಿಗಳಲ್ಲಿನ ಸಮರ ಸೇರಿದಂತೆ ಇತರೆ ವಿಷಯಗಳ ಕುರಿತು ತಮ್ಮದೇ ದಾಟಿಯಲ್ಲಿ ಪದಗುಚ್ಚಗಳನ್ನು ಪೋಣಿಸಿ ಬರೆದು ತಂದಿದ್ದ ಸುಂದರ ಕವಿತೆಗಳನ್ನು ವಾಚಿಸಿ ಕನ್ನಡ ಪ್ರೇಮ ಮೆರೆದರು.
ಮೈಸೂರು ಒಡನಾಡಿ ಸಂಸ್ಥೆಯ ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಚೈತ್ರ ಹೆತ್ತು-ಹೊತ್ತು ಸಾಕಿ ಸಲುಹಿದ ತಾಯಿಯ ಕುರಿತು ಕವಿತೆ ವಾಚಿಸಿದರೆ, ಶ್ರವಣದೋಷವುಳ್ಳ ಹಾವೇರಿ ಮೂಲದ ಸಂಶೋಧನಾ ವಿದ್ಯಾರ್ಥಿನಿ ಮಧು ಕಾರಗಿ ರವರು ಕನ್ನಡ , ನಾಡು,ನುಡಿ, ಪರಂಪರೆ ಕುರಿತ ಕವಿತೆ ವಾಚಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು. ನಂಜನಗೂಡು ಮೂಲದ ವೃತ್ತಿಯಲ್ಲಿ ಫಿಜಿಯೋಥೆರಪಿಸ್ಟ್ ಆಗಿರುವ ಡಾ.ಅಭಿಷೇಕ್ ನಂಜಪ್ಪ ಅವರು ಕನ್ನಡ ಮಾತೆ ಕುರಿತು ಕವಿತೆ ವಾಚಿಸಿದ್ದು, ಮೈಸೂರು ಮೂಲದ ಅತಿಥಿ ಉಪನ್ಯಾಸಕರಾದ ಡಾ.ಚಂದ್ರಗುಪ್ತ ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಖಂಡಿಸಿ ಬರೆದಿದ್ದ ‘ಇದೇನಾ ಸಂಸ್ಕೃತಿ’ , ದೀಪದ ಮಲ್ಲಿ ಎಂಬುವವರ ‘ನದಿ ಮೂಲ’, ನಂಜನಗೂಡು ಮೂಲದ ಚಾಮರಾಜನಗರ ಜಿಲ್ಲಾ ಪಂಚಾಯಿತಿಯಲ್ಲಿ ಲೆಕ್ಕ ಅಧೀಕ್ಷಕರಾಗಿರುವ ಕೆ.ಆರ್. ಪ್ರವೀಣ್ ಪಟೇಲ್ ರವರ ‘ಅಪ್ಪ ಮತ್ತು ಬೀಡಿ’ ಕವಿತೆ ವಾಚನ ನೆರೆದಿದ್ದ ಕನ್ನಡಾಭಿಮಾನಿಗಳ ಹೃದಯ ಮುಟ್ಟಿತು.
ಕಾರ್ಯಕ್ರಮ ಉದ್ಘಾಟಕರಾದ ಸಾಹಿತಿ, ಪತ್ರಕರ್ತರ ಸಂಘದ ಅಧ್ಯಕ್ಷ ಶಿವನಂದ ತಗಡೂರು ಮಾತನಾಡಿ, ಮನದ ಭಾವ ಕಲಕುವ, ಹೃದಯಕ್ಕೆ ತಾಕುವ ತಾಕತ್ತು ಕಾವ್ಯಕ್ಕಿದೆ. ನೊಂದ ಜೀವಕ್ಕೆ ಕವಿತೆಯ ಸಾಲುಗಳು ಸಮಾಧಾನ ನೀಡುತ್ತವೆ. ಸಾವಿನಂಚಿಲ್ಲಿದ್ದ ಕೆಲ ಕವಿಗಳು ತಾವೇ ರಚಿಸಿದ ಕವಿತೆಗಳನ್ನು ಹಾಡಿನ ರೂಪದಲ್ಲಿ ಪದೇ ಪದೇ ಕೇಳಲು ಭಯಸಿ ಕೊನೆಯುಸಿರೆಳೆದ ಉದಾಹರಣೆಗಳಿವೆ ಎಂದರು.
ಬರವಣಿಗೆಗಳೆಲ್ಲಾ ಕವಿತೆಯಾಗಲ್ಲ, ಕಲ್ಲನ್ನು ಕೆತ್ತಿ ಶಿಲೆ ಮಾಡಿದಂತೆ ಬರೆದು ಬರೆದು ಭಾವನೆಗಳಿಗೆ, ಘಟನೆಗಳಿಗೆ ಸ್ವರೂಪ ನೀಡುವ ಕಲೆಗಾರಿಗೆ ಕವಿಗಳಿಗಿರಬೇಕು ಎಂದು ಯುವ ಕವಿಗಳಿಗೆ ಸಲಹೆ ನೀಡಿದ ಅವರು ಇಸ್ರೆಲ್ ಯುದ್ದಭೂಮಿ ರಾಜಾ ಬಾರ್ಡರ್ ಗೆ ಭೇಟಿ ನೀಡಿದ್ದ ವೇಳೆ ರಚಿಸಿದ್ದ ‘ನೆತ್ತರು’ ಹಾಗೂ ಈ ಬಾರಿಯ ದಸರಾ ಉದ್ಘಾಟಿಸಿದ ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ರವರ ಕುರಿತ “ಬಾನು ಬೆಳಗಿತು” ಎಂಬ ಕವಿತೆ ವಾಚಿಸಿದರು.
ಕಾರ್ಯಕ್ರಮದಲ್ಲಿ ಪ್ರಚುರ ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದ ಕವಯತ್ರಿ ಸುಕನ್ಯ ಮಾರುತಿ, ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎನ್.ಕೆ.ಲೋಲಾಕ್ಷಿ, ಕವಿ ರಾಜೇಂದ್ರ ಪ್ರಸಾದ್, ಸುರೇಶ್, ಮಹೇಶ್ ಸೇರಿ ಇತರರು ಹಾಜರಿದ್ದರು.
