ಒಂದೇ ಒಂದು ಕೈಗಾರಿಕೆಯೂ ಹೊರ ಹೋಗಿಲ್ಲ: ಎಂ.ಬಿ.ಪಾಟೀಲ್‌

Pratheek
3 Min Read

ಪಬ್ಲಿಕ್ ಅಲರ್ಟ್


ಮೈಸೂರು: ರಾಜ್ಯದಿಂದ ಒಂದೇ ಒಂದು ಕೈಗಾರಿಕೆಯೂ ಹೊರ ಹೋಗಿಲ್ಲ. ಈ ವಿಚಾರವಾಗಿ ಹಬ್ಬಿಸುತ್ತಿರುವ ತಪ್ಪು ಕಲ್ಪನೆಯಿಂದ ಎಲ್ಲರೂ ಹೊರಬರಬೇಕಾಗಿದೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಅತ್ಯಗತ್ಯವಾದ ಕೆಲಸದ ವಾತಾವರಣ ಅತ್ಯುತ್ತಮವಾಗಿದೆ. ಇಲ್ಲಿ ಅತ್ಯುತ್ತಮ ಪ್ರತಿಭಾ ಸಂಪನ್ಮೂಲವಿದೆ. ಸರ್ಕಾರದ ಕೈಗಾರಿಕಾ ನೀತಿಗಳು ಚೆನ್ನಾಗಿವೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕಳೆದ ಫೆಬ್ರವರಿಯಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಲಾಯಿತು. ಇದರ ಮೂಲಕ 10.27 ಲಕ್ಷ ಕೋಟಿ ರೂ. ಬಂಡವಾಳ ಹರಿದು ಬರುವ ಖಾತ್ರಿ ಸಿಕ್ಕಿತು. ಈ ಪೈಕಿ ಶೇ.60ಕ್ಕಿಂತ ಹೆಚ್ಚು ಬಂಡವಾಳ ಈಗಾಗಲೇ ನಮ್ಮಲ್ಲಿ ಹೂಡಿಕೆಯಾಗಿದೆ. ನಾವು ಬರೀ ಮಾತನಾಡುವುದಿಲ್ಲ, ನುಡಿದಂತೆ ನಡೆಯುತ್ತಿದ್ದೇವೆ. ಈ ಹೂಡಿಕೆಗಳಿಂದ ಸಾವಿರಾರು ಉದ್ಯೋಗಗಳೂ ಸೃಷ್ಟಿಯಾಗುತ್ತಿವೆ ಎಂದು ತಿಳಿಸಿದರು.
ನಾನು ಕೈಗಾರಿಕಾ ಸಚಿವನಾದ ಮೇಲೆ ಹಲವು ದೇಶಗಳಿಗೆ ಭೇಟಿ ಕೊಟ್ಟು, ಹೂಡಿಕೆದಾರರನ್ನು ರಾಜ್ಯಕ್ಕೆ ಕರೆತರುತ್ತಿದ್ದೇನೆ. ಫಾಕ್ಸ್‌ಕಾನ್ ತರಹದ ದೈತ್ಯ ಕಂಪನಿಯು ತೈವಾನ್ ನಂತರದ ತನ್ನ ಬೃಹತ್ ಘಟಕವನ್ನು ನಮ್ಮಲ್ಲಿ ಆರಂಭಿಸಿದೆ. ಇಲ್ಲಿಂದ ದುಬಾರಿ ಮೊಬೈಲ್ ಫೋನ್ಗಳು ರಫ್ತಾಗುತ್ತಿವೆ. ಜಪಾನ್ ತರಹದ ಸಂಪ್ರದಾಯವಾದಿ ದೇಶದಿಂದ ಕಳೆದ ಎರಡು ವರ್ಷಗಳಲ್ಲಿ ರಾಜ್ಯಕ್ಕೆ 10,500 ಕೋಟಿ ರೂ. ಬಂಡವಾಳ ಹೂಡಿಕೆಯ ಖಾತ್ರಿ ಸಿಕ್ಕಿದೆ. ಸಾಮಾನ್ಯವಾಗಿ ಅಲ್ಲಿ ಕುಟುಂಬ ಪರಿವಾರಗಳೇ ಕೈಗಾರಿಕೆ ನಡೆಸುವುದರಿಂದ, ನಿರ್ಧಾರ ತೆಗೆದುಕೊಳ್ಳುವುದು ನಿಧಾನವಾಗುತ್ತದೆ. ಆದರೂ ನಮ್ಮ ವಿಚಾರದಲ್ಲಿ ಎಲ್ಲವೂ ತ್ವರಿತ ಗತಿಯಲ್ಲಿ ನಡೆದಿದೆ. ಒಸಾಕಾವಾ ಕಂಪನಿ ಕೂಡ ಹೂಡಿಕೆ ಮಾಡಲು ಮುಂದೆ ಬಂದಿದೆ ಎಂದು ಹೇಳಿದರು.
ನಮ್ಮಲ್ಲಿ ಸೆಮಿಕಂಡಕ್ಟರ್ ಸೇರಿದಂತೆ ಹಲವು ಕ್ಷೇತ್ರಗಳಿಗೆ ಪ್ರೋತ್ಸಾಹವಿದೆ. ನಮ್ಮ ಕೈಗಾರಿಕಾ ನೀತಿ ಉದ್ಯಮಸ್ನೇಹಿಯಾಗಿದೆ. ಆದರೆ ಕೇಂದ್ರ ಸರ್ಕಾರ ಸೆಮಿಕಂಡಕ್ಟರ್ ಮಿಷನ್ ಅಡಿಯಲ್ಲಿ ವಿಶೇಷ ಪ್ರೋತ್ಸಾಹನಾ ಕ್ರಮಗಳನ್ನು ಹೊಂದಿದ್ದು, ಈ ಕಂಪನಿಗಳು ಬಿಜೆಪಿ ಆಡಳಿತವಿರುವ ಗುಜರಾತ್, ಮಹಾರಾಷ್ಟ್ರ ಮುಂತಾದ ರಾಜ್ಯಗಳಿಗೆ ಹೋಗುತ್ತಿವೆ. ಇದರಲ್ಲಿ ನಮ್ಮ ತಪ್ಪೇನೂ ಇಲ್ಲ. ಹಿಂದೆ ಒಂದು ಕಂಪನಿ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ರಾಜ್ಯದಲ್ಲೇ ಹೂಡಿಕೆ ಮಾಡಲು ತೀರ್ಮಾನಿಸಿತ್ತು. ಆದರೆ, ದೆಹಲಿಗೆ ಹೋದ ಮೇಲೆ ಅವರು ಮನಸ್ಸು ಬದಲಿಸಿದರು. ಕೇಂದ್ರ ಸರ್ಕಾರವು ಇಂತಹ ತಾರತಮ್ಯವನ್ನು ಬಿಡಬೇಕು ಎಂದು ಆಗ್ರಹಿಸಿದರು.
ಪಶ್ಚಿಮ ಮಹಾರಾಷ್ಟçದಲ್ಲಿ ಚುನಾವಣೆಗಾಗಿ ಪ್ರೀತಿಯ ಸಹೋದರಿ ಎಂಬ ಯೋಜನೆ ಮೂಲಕ ಚುನಾವಣೆ ಗೆದ್ದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಂಚ ಗ್ಯಾರಂಟಿಗಳನ್ನು ಚುನಾವಣೆಗಾಗಿ ಜಾರಿಗೆ ತಂದಿಲ್ಲ. ಆದರೆ ನಮ್ಮ ಬದ್ಧತೆಗಾಗಿ ಎಲ್ಲಾ ಜಾತಿಯವರಿಗಾಗಿ ಪಂಚ ಗ್ಯಾರಂಟಿಗಳನ್ನು ಜಾರಿಗೆ ತರಲಾಗಿದೆ. ಪ್ರತಿ ಸಮುದಾಯದವರಿಗೂ ಸಹ ಗ್ಯಾರಂಟಿ ಯೋಜನೆಗಳು ಸಿಗುತ್ತಿದೆ ಎಂದು ತಿಳಿಸಿದರು.

ಕಾಂಗ್ರೆಸ್‌ ಸಭೆಯಲ್ಲಿ ಮಾತನಾಡಿ, ಕಾವೇರಿ ತೀರ್ಪು ಬಂದಿದ್ದು ನಾನು ನೀರಾವರಿ ಮಂತ್ರಿಯಾಗಿದ್ದಾಗ. ೧೯೨ ಟಿಎಂಸಿ ನೀರನ್ನು ಹೊರಗಡೆ ಬಿಡಬೇಕಿತ್ತು. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಪಾಹ್ಲಿ ನಾರೀಮನ್ ಅವರನ್ನು ಒಪ್ಪಿಸಿ ಕೋರ್ಟಿಗೆ ಕರೆತಂದು ಒಂದು ತಿಂಗಳ ಕಾಲ ಚರ್ಚಿಸಿ ೧೯೨ ಟಿಎಂಸಿ ಇದ್ದದ್ದು ೧೭೭ ಟಿಎಂಗೆ ತಂದರು. ಇದರಿಂದ ೧೪.೫ ಟಿಎಂಸಿ ನೀರು ನಮಗೆ ಜಾಸ್ತಿಯಾಯಿತು. ಬೆಂಗಳೂರು ನಗರಕ್ಕೆ ನೀರು ಕೊಡಲು ಆಗುವುದಿಲ್ಲ ಎಂದು ತಿಳಿಸಿದ್ದರು. ಇಂದಿರಾಗಾಂಧಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಅಂದಿನ ಮದ್ರಾಸ್ (ಚೆನ್ನೆ)ಗೆ ತೆಲಗುಗುಂದ ಪ್ರಾಜೆಕ್ಟ್ನಲ್ಲಿ ಕರ್ನಾಟಕ, ಮಹಾರಾಷ್ಟ್ರ  ಹಾಗೂ ಆಂಧ್ರ ಪ್ರದೇಶಗಳು ತಲಾ ೫ ಟಿಎಂಸಿಯಂತೆ ೧೫ ಟಿಎಂಸಿ ನೀರನ್ನು ಮಾನವೀಯತೆ ಆಧಾರ ಮೇಲೆ ತಮಿಳುನಾಡಿಗೆ ಕೋಟ್ಟಿದ್ದೇವೆ ಎಂದು ತಿಳಿಸಿದಾಗ ಸಂಪೂರ್ಣ ಚಿತ್ರಣ ಬದಲಾಯಿತು ಎಂದು ತಿಳಿಸಿದರು.
ಶರಣರು ಅನುಭವ ಮಂಟಪದ ಮೂಲಕ ಜಾತಿ ರಹಿತವಾದ ಸಮಾಜ ನಿರ್ಮಾಣಕ್ಕೆ ಮುಂದಾದರು. ಅಸ್ಪಶ್ಯತೆ, ಮೂಢನಂಬಿಕೆ ಹೋಗಬೇಕು, ಅನಿಷ್ಟ ಪದ್ಧತಿ ತೊಲಗಬೇಕು. ಮನುಷ್ಯರನ್ನು ಮನುಷ್ಯರನ್ನಾಗಿ ಕಾಣಬೇಕಾದ ತತ್ವ ಸಿದ್ಧಾಂತದ ಇಟ್ಟುಕೊಂಡಿದ್ದರೋ ಆ ತತ್ವದ ಮೇಲೆ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್  ಸಂವಿಧಾನ ರಚಿಸಿದ್ದಾರೆಂದರು. ಶಾಸಕ ಹರೀಶ್ ಗೌಡ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಗ್ರಾಮಾಂತರ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ಕಾಡಾ ನಿಗಮದ ಅಧ್ಯಕ್ಷ ಮರಿಸ್ವಾಮಿ, ನಗರಪಾಲಿಕೆ ಮಾಜಿ ಸದಸ್ಯರಾದ ನಾಗಭೂಷಣ್, ಸಿದ್ದಪ್ಪ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ, ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಲತಾಸಿದ್ಧಶೆಟ್ಟಿ ಇತರರು ಹಾಜರಿದ್ದರು.


ಕೋಟ್…
ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಪ್ರಸ್ತಾವನೆ ಸಿದ್ದಪಡಿಸಿ ೬೫ ಟಿಎಂಸಿ ಮೇಕೆದಾಟು ಅಣೆಕಟ್ಟು ಕಟ್ಟಬೇಕೆಂದು ಹೇಳಿ ಕೇಂದ್ರ ಜಲ ಆಯೋಗಕ್ಕೆ ಹಾಗೂ ಸದರನ್ ರಾಜ್ಯ ಆಯೋಗಕ್ಕೆ ಮನವಿ ನೀಡಿದ್ದೇವೆ. ಉತ್ತರ ಕರ್ನಾಟಕ ದಕ್ಷಿಣ ಕರ್ನಾಟಕ ಬೇರೆಯಲ್ಲ. ಕೃಷ್ಣ ಮತ್ತು ಕಾವೇರಿ ನಮಗೆ ಎರಡು ಕಣ್ಣುಗಳಿಂದ್ದಂತೆ.
-ಎಂ.ಬಿ.ಪಾಟೀಲ್, ಸಚಿವ

Share This Article
Leave a Comment