ಪಬ್ಲಿಕ್ ಅಲರ್ಟ್
ಮೈಸೂರು: ಕೊಟ್ಟ ಮಾತು ತಪ್ಪಿ ನಡೆಯಲು ನಾನು ಪ್ರಧಾನಿ ಮೋದಿ ಅಲ್ಲ. ಮೋದಿಯವರು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ ಮಾತು ತಪ್ಪಿದರು. ಈ 11 ವರ್ಷದಲ್ಲಿ 22 ಕೋಟಿ ಉದ್ಯೋಗ ಸೃಷ್ಟಿಸಬೇಕಿದ್ದ ಮೋದಿಯವರು ಸುಳ್ಳು ಹೇಳಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ಮೈಸೂರಿನಲ್ಲಿ ಆಯೋಜಿಸಿದ್ದ ಯುವ ಸಮೃದ್ಧಿ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ನಾವು ಬಿಜೆಪಿಯವರಂತೆ ಸುಳ್ಳು ಹೇಳುವುದಿಲ್ಲ. ಕಳೆದ ಎರಡೂವರೆ ವರ್ಷಗಳಲ್ಲಿ ನಮ್ಮ ಸರ್ಕಾರ ಬೆಂಗಳೂರಿನಲ್ಲಿ ನಡೆಸಿದ ಉದ್ಯೋಗ ಮೇಳದಿಂದಾಗಿ 58892 ಮಂದಿ ಉದ್ಯೋಗಾಕಾಂಕ್ಷಿಗಳು ಉದ್ಯೋಗ ಮೇಳದಲ್ಲಿ ಭಾಗಿಯಾಗಿ ಅನುಕೂಲ, ಅರಿವು ಪಡೆದುಕೊಂಡಿದ್ದಾರೆ. ಇವರಲ್ಲಿ 11507 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲಾಗಿದೆ, 22819 ಅಭ್ಯರ್ಥಿಗಳ ಹೆಸರನ್ನು ಅಂತಿಮ ಮಾಡಲಾಗಿದೆ ಎಂದು ವಿವರಿಸಿದರು.
ಜಿಲ್ಲೆಗಳಲ್ಲಿ ನಡೆದ ಉದ್ಯೋಗ ಮೇಳದಲ್ಲಿ 120563 ಅಭ್ಯರ್ಥಿಗಳು ಭಾಗವಹಿಸಿ, 24391 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲಾಗಿದೆ, 48232 ಅಭ್ಯರ್ಥಿಗಳ ಹೆಸರನ್ನು ಅಂತಿಮ ಮಾಡಲಾಗಿದೆ ಎಂದು ಪಟ್ಟಿ ನೀಡಿದರು.ಹಿಂದಿನ ಸರ್ಕಾರ ಉದ್ಯೋಗಾಕಾಂಕ್ಷಿಗಳನ್ನು ಸಂಪೂರ್ಣ ನಿರ್ಲಕ್ಷಿಸಿತ್ತು. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಈ ಎರಡೂವರೆ ವರ್ಷಗಳಲ್ಲಿ ಸರ್ಕಾರದಲ್ಲಿ ಖಾಲಿ ಇದ್ದ 28000 ಉದ್ಯೋಗಗಳನ್ನು ಈಗಾಗಲೇ ಭರ್ತಿ ಮಾಡಿದೆ. 35 ಸಾವಿರ ಹುದ್ದೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.
ಉದ್ಯಮಗಳ ಬೇಡಿಕೆಗೆ ತಕ್ಕಂತೆ ಕೌಶಲ್ಯ ತರಬೇತಿ ನೀಡಿ ಉದ್ಯೋಗ ಸೃಷ್ಟಿಸುವ ಮಹತ್ತರ ಕಾರ್ಯದಲ್ಲಿ ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಪ್ರತಿ ಜಿಲ್ಲೆಗಳಲ್ಲಿಯೂ ಯಶಸ್ವಿಯಾಗಿ ಉದ್ಯೋಗ ಮೇಳ ನಡೆಸುತ್ತಾ ಯುವ ಸಮೂಹಕ್ಕೆ ಉದ್ಯೋಗ ನೀಡುವ ಕೆಲಸ ಮಾಡುತ್ತಿದೆ. ನಾವು ನುಡಿದಂತೆ ನಡೆದಿರುವ, ನಡೆಯುತ್ತಿರುವ ಸರ್ಕಾರ. ಕೌಶಲ್ಯ ತರಬೇತಿಗೆ ಬಂದರೆ ಯುವನಿಧಿ ಭತ್ಯೆ ನಿಲ್ಲಿಸ್ತಾರೆ ಎನ್ನುವ ಬಿಜೆಪಿಯ ಸುಳ್ಳುಗಳಿಗೆ ಕಿವಿಗೊಡಬೇಡಿ. ಉದ್ಯೋಗ ಸಿಕ್ಕ ಬಳಿಕ ಮಾತ್ರ ಉದ್ಯೋಗ ಪಡೆದವರ ಯುವನಿಧಿ ನಿಲ್ಲಿಸಲಾಗುವುದು ಮತ್ತೆ ಸ್ಪಷ್ಟಪಡಿಸಿದರು.
ಈಗಿನ ಸನ್ನಿವೇಶದಲ್ಲಿ ನಿರುದ್ಯೋಗ ಹೋಗಲಾಡಿಸುವುದೇ ಸರ್ಕಾರಕ್ಕೆ ದೊಡ್ಡ ಸವಾಲಾಗಿದ್ದು, ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವುದೇ ನಮ್ಮ ಸರ್ಕಾರದ ಮುಖ್ಯ ಗುರಿಯಾಗಿದೆ. ನಿರುದ್ಯೋಗ ಸಮಸ್ಯೆಯಿಂದ ನಿರುದ್ಯೋಗಿಗಳು ಕಷ್ಟಪಡುತ್ತಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲಿ ಉದ್ಯೋಗಮೇಳ ಆಯೋಜಿಸಿ ಸ್ಥಳದಲ್ಲೇ ಉದ್ಯೋಗ ಕೊಡಿಸುವ ಕಾರಣಕ್ಕೆ ನಮ್ಮ ಸರ್ಕಾರ ಈ ಕಾರ್ಯಕ್ರಮ ಮಾಡುತ್ತಿದೆ. ಅದರಂತೆ ಇಂದು ಮೈಸೂರಿನಲ್ಲಿ ನಡೆಯುತ್ತಿರುವ ಉದ್ಯೋಗ ಮೇಳದಲ್ಲಿ 40 ಸಾವಿರ ನಿರುದ್ಯೋಗಿಗಳು ನೊಂದಣಿ ಮಾಡಿಕೊಂಡಿದ್ದು, ಎಲ್ಲರಿಗೂ ಉದ್ಯೋಗ ದೊರಕಿಸಿ ಕೊಡುವುದು ನಮ್ಮ ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದರು.
ಕಳೆದ 2 ವರ್ಷಗಳಲ್ಲಿ ರಾಜ್ಯಮಟ್ಟದ ಉದ್ಯೋಗ ಮೇಳದಲ್ಲಿ 58,892 ಅಭ್ಯರ್ಥಿಗಳು ಭಾಗವಹಿಸಿದ್ದಾರೆ. 11,507 ಅಭ್ಯರ್ಥಿಗಳಿಗೆ ವಿವಿಧ ಕಂಪನಿಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾಗಿದೆ. ಜಿಲ್ಲಾ ಮಟ್ಟದಲ್ಲಿ ನಡೆದ ವಿವಿಧ ಉದ್ಯೋಗಮೇಳ ಗಳಲ್ಲಿ 1 ಲಕ್ಷಕ್ಕೂ ಹೆಚ್ಚಿನ ಅಭ್ಯರ್ಥಿಗಳು ಭಾಗವಹಿಸಿದ್ದು, 24,391 ಅಭ್ಯರ್ಥಿಗಳು ವಿವಿಧ ಕಂಪನಿಗಳಿಗೆ ನೇಮಕವಾಗಿದ್ದಾರೆ, ಇದು ನಮ್ಮ ಸರ್ಕಾರದ ಸಾಧನೆ. ರಾಜ್ಯ ಸರಕಾರದಲ್ಲಿ 7 ಲಕ್ಷ ಸರ್ಕಾರಿ ಹುದ್ದೆಗಳು ಮಾತ್ರ ಇರುವುದು ಉಳಿದವರಿಗೆಲ್ಲ ಕಂಪನಿಗಳು ಹಲವು ಸಂಸ್ಥೆಗಳಲ್ಲಿ ಉದ್ಯೋಗ ಕೊಡಿಸಲು ಉದ್ಯೋಗಮೇಳ ಅವಶ್ಯಕವಾಗಿದೆ ಇದನ್ನು ಎಲ್ಲರೂ ಉಪಯೋಗಿಸಿಕೊಳ್ಳಿ ಎಂದು ಹೇಳಿದರು.





ಉದ್ಯೋಗಮೇಳದಲ್ಲಿ ಸ್ಥಳದಲ್ಲೇ ನೇಮಕಗೊಂಡ ಹಲವು ಅಭ್ಯರ್ಥಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇಮಕಾತಿ ಪತ್ರ ವಿತರಿಸಿ ಶುಭಕೋರಿದರು. ಸಂಕಲ್ಪ ಟೂಲ್ ಕಿಟ್ ನಲ್ಲಿ ತರಬೇತಿ ಪಡೆದ ಮಹಿಳಾ ಅಭ್ಯರ್ಥಿಗಳಿಗೆ ಹೊಲಿಗೆ ಯಂತ್ರ ವಿತರಣೆ ಮಾಡಿದರು.
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಆರ್. ಪಾಟೀಲ್ ಮಾತನಾಡಿ ಯುವಕರಿಗೆ ಒಂದು ಉತ್ತಮವಾದಂತಹ ಭವಿಷ್ಯವನ್ನು ಕಟ್ಟಿಕೊಡಬೇಕು ಹಾಗೂ ಅವರಿಗೆ ಉದ್ಯೋಗಾವಕಾಶವನ್ನು ನೀಡಬೇಕು ಎಂಬ ಉದ್ದೇಶದಿಂದ ನಮ್ಮ ರಾಜ್ಯ ಸರ್ಕಾರ ಯುವನಿಧಿ, ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ನಡೆಸುತ್ತಾ ಬರಲಾಗುತ್ತಿದೆ ಎಂದು ಹೇಳಿದರು.
ನಿರುದ್ಯೋಗ ಎಂಬುದು ನಮ್ಮ ದೇಶದ ಒಂದು ದೊಡ್ಡ ಸಮಸ್ಯೆಯಾಗಿದ್ದು, ನಿರುದ್ಯೋಗ ಸಮಸ್ಯೆಯನ್ನು ತೊಡೆದು ಹಾಕುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ಪ್ರತಿಯೊಬ್ಬ ಉದ್ಯೋಗಕಾಂಕ್ಷಿಗಳು ಉದ್ಯೋಗವನ್ನು ಪಡೆದುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಹಲವಾರು ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಸಂಘಟಿಸಿ ಉದ್ಯೋಗ ಮೇಳ ನಡೆಸಲಾಗುತ್ತಿದೆ ಎಂದರು.
ಗಣ್ಯರನ್ನು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತನಾಯಕ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಪಶು ಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವ ಕೆ.ವೆಂಕಟೇಶ್, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪ ಅಮರನಾಥ್, ಶಾಸಕರಾದ ತನ್ವೀರ್ ಸೇಠ್, ರವಿಶಂಕರ್, ವಿಧಾನ ಪರಿಷತ್ ನ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಡಿ.ಕೆ.ಶಿವಕುಮಾರ್, ಕರ್ನಾಟಕ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್‌ಖಾನ್, ರಾಜ್ಯ ಮೃಗಾಲಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ , ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಯುಕೇಶ್ ಕುಮಾರ್, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಶೇಖ್ ತನ್ವೀರ್ ಅಸೀಫ್ ಸೇರಿ ಮತ್ತಿತರು ಉಪಸ್ಥಿತರಿದ್ದರು.
ಬಾಕ್ಸ್
ಗೊಂದಲ ತಂದ ನೊಂದಣಿ
ಜಿಲ್ಲಾಡಳಿತ ಸಕಲ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮಾಡಿತ್ತಾದರೂ ನೊಂದಣಿ ಹಾಗೂ ಸಂದರ್ಶನ ಪ್ರಕ್ರಿಯೆಯನ್ನು ವಿವರಿಸುವಲ್ಲಿ ಹಿಂದೆ ಉಳಿಯಿತು. ಬಂದ ಅನೇಕ ನಿರುದ್ಯೋಗಿಗಳು ಎದುರಿನ ಮಹಾರಾಜ ಕಾಲೇಜಿನಲ್ಲಿ ನೊಂದಣಿ ಮಾಡಿಕೊಂಡು ಬಳಿಕ ಅವರ ವಿದ್ಯೆಗೆ ಅನುಸಾರವಾದ ಕಂಪನಿಗಳ ಸಮೀಪ ಹೋಗುವಂತೆ ಮಾಹಿತಿಕೇಂದ್ರದಲ್ಲಿ ಹೇಳುವ ಪ್ರಯತ್ನ ಮಾಡಿದರು. ಆದರೆ, ಇದು ವಿದ್ಯಾರ್ಥಿಗಳಿಗೆ ತಲುಪುವುದು ವಿಳಂಬವಾಯಿತು. ಬಹುತೇಕ ಕಂಪನಿಗಳು ಆನ್‌ಲೈನ್ ನೊಂದಣಿ ಮಾಡಿಕೊಂಡು ಸಂದರ್ಶನಕ್ಕೆ ನಂತರ ಕರೆಯುವುದಾಗಿ ಹೇಳಿ ಕಳುಹಿಸುತ್ತಿದ್ದ ದೃಶ್ಯ ಕಂಡು ಬಂದಿದೆ.
ಬಾಕ್ಸ್
ಬರೋಬ್ಬರಿ ೧೩೨೮೯ಮಂದಿ ನಿರುದ್ಯೋಗಿಗಳು ಭಾಗವಹಿಸಿದ್ದರು. ೨೩೫ ಕಂಪನಿಗಳು ಪೈಕಿ ೩೩೦೩ ಮಂದಿ ಹೆಸರು ಅಂತಿಮವಾಗಿ ಸಂದರ್ಶನಕ್ಕೆ ಆಯ್ಕೆಯಾದವು. ಸ್ಥಳದಲ್ಲೇ ೧೩೪೬ಮಂದಿಗೆ ಅವಕಾಶ ಸಿಕ್ಕಿತು. ಆದರೆ, ನಿರೀಕ್ಷಿತ ಕಂಪನಿಗಳನ್ನು ಪತ್ತೆ ಹಚ್ಚುವಲ್ಲೇ ವಿದ್ಯಾರ್ಥಿಗಳು ಬಸವಳಿದರು.
