ಸಮಾಜದಲ್ಲಿ ಅಶಾಂತಿ ಮೂಡಿಸಲು ಬಿಜೆಪಿ ಕುತಂತ್ರ: ಸಿಎಂ ಡಿ ಕೆ ಶಿವಕುಮಾರ್ ಆರೋಪ

latha prabhukumar
2 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಸಮಾಜದಲ್ಲಿ ಅಶಾಂತಿ ಮೂಡಿಸಲು ಬಿಜೆಪಿ ಕುತಂತ್ರ: ಸಿಎಂ ಡಿ ಕೆ ಶಿವಕುಮಾರ್ ಆರೋಪ

ಬಿಜೆಪಿಯಿಂದ ಕೋಮು ಭಾವನೆ ಪ್ರಚೋದನೆ: ಸಮಾಜಘಾತುಕ ಶಕ್ತಿಗಳ ಬಳಕೆ

ಶಾಂತಿಯುತ ಗಣೇಶ ಹಬ್ಬ ಆಚರಣೆ ಖಾತರಿಗೆ ಪೊಲೀಸರಿಗೆ ಸೂಚನೆ

ಅಧಿಕಾರ ದುರುಪಯೋಗ ಮಾಡಲ್ಲ, ಯಾರಿಗೂ ನಿರ್ಬಂಧ ಹೇರಲ್ಲ

ಬೆಂಗಳೂರು, ಸೆ. 13:

“ಸಮಾಜದಲ್ಲಿ ಅಶಾಂತಿ ಮೂಡಿಸಲು ಕುತಂತ್ರ ನಡೆಯುತ್ತಿದ್ದು, ಬಿಜೆಪಿ ಸಮಾಜ ಘಾತುಕ ಶಕ್ತಿಗಳ ಬಳಕೆ ಮಾಡುತ್ತಿದ್ದಾರೆ. ಹೀಗಾಗಿ ಎಚ್ಚರಿಕೆಯಿಂದ ಇರಿ ಎಂದು ಪೋಲೀಸರಿಗೆ ಸೂಚಿಸಿದ್ದೇವೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಶಿವಕುಮಾರ್ ಅವರು ಭಾನುವಾರ ಪ್ರತಿಕ್ರಿಯೆ ನೀಡಿದರು.

ಗಣೇಶೋತ್ಸವ ಆಚರಣೆಗೆ ಸರ್ಕಾರ ಅನೇಕ ನಿರ್ಬಂಧ ಹೇರಿದೆ ಎಂಬ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಈ ವಿಚಾರದಲ್ಲಿ ಕೋಮು ಪ್ರಚೋದನೆ ಮಾಡುತ್ತಿದ್ದಾರೆ. ಗಣೇಶ ಹಬ್ಬವನ್ನು ಬಹಳ ಶಾಂತಿಯುತವಾಗಿ ಆಚರಣೆ ಮಾಡಬೇಕು. ಮೆರವಣಿಗೆ ಹೋಗುವಾಗ ಶಿಸ್ತು ಪಾಲನೆ ಆಗಬೇಕು, ವಿದ್ಯುತ್ ಕಂಬ, ತಂತಿಗಳ ಬಗ್ಗೆ ಎಚ್ಚರ ವಹಿಸಬೇಕು” ಎಂದರು.

“ಅವರು ಏನಾದರೂ ಮಾಡಲಿ. ಗಣೇಶ ಬಿಜೆಪಿಯವರ ಆಸ್ತಿಯಲ್ಲ. ಬಾಲಗಂಗಾಧರ ತಿಲಕರು ಆರಂಭಿಸಿದ ಆಚರಣೆ ನಡೆದುಕೊಂಡು ಬರುತ್ತಿದೆ. ನಾವು ಹಬ್ಬಕ್ಕೆ ರಜೆ ನೀಡಿ, ಹಬ್ಬ ಆಚರಣೆಗೆ ಪ್ರೋತ್ಸಾಹ ನೀಡುತ್ತಿದ್ದೇವೆ.

ಅಶೋಕ್ ಅವರು ಮೈಸೂರಿನ ಟಿ ನರಸೀಪುರ ಪೊಲೀಸ್ ಠಾಣೆಗೆ ಹೋಗುತ್ತಿದ್ದಾರೆ ಎಂದು ಕೇಳಿದಾಗ, “ಅವರು ಎಲ್ಲಿಗಾದರೂ ಹೋಗಲಿ. ಏನಾದರೂ ಮಾಡಲಿ. ಸುಳ್ಳೇ ಬಿಜೆಪಿಯವರ ಮನೆ ದೇವರು. ಪೊಲೀಸ್ ಠಾಣೆಗೆ ಯಾಕೆ ಹೋಗುತ್ತಿದ್ದಾರೆ? ಇಲ್ಲದ ವಿಚಾರ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಗೃಹ ಸಚಿವರಾಗಿದ್ದವರು. ಅವರ ಪರಿಮಿತಿ ಏನು ಎಂದು ಅರಿಯಲಿ” ಎಂದು ತಿರುಗೇಟು ನೀಡಿದರು.

ಅಧಿಕಾರ ದುರುಪಯೋಗ ಮಾಡಿಕೊಂಡು ಯಾರಿಗೂ ನಿರ್ಬಂಧ ಹೇರಲ್ಲ:

“ನಾವು ಬಿಜೆಪಿಯವರ ಸಭೆಗಳಿಗೆ ನಿಯಂತ್ರಣ ಹಾಕುವುದಿಲ್ಲ. ಅವರು ಕಾನೂನು ಚೌಕಟ್ಟಿನಲ್ಲಿ ಎಲ್ಲಿ ಬೇಕಾದರೂ ತಮ್ಮ ರಾಜಕೀಯ ಸಭೆ ಮಾಡಬಹುದು. ಬಿಜೆಪಿ ಅಧ್ಯಕ್ಷರು ಅನಗತ್ಯವಾಗಿ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಕಾನೂನು ವ್ಯಾಪ್ತಿಯಲ್ಲಿ ಅವರು ಏನಾದರೂ ಮಾಡಬಹುದು, ಏನಾದರೂ ಹೇಳಬಹುದು. ಅವರು ಯಾವ ಮೈದಾನದಲ್ಲಿ ಕಾರ್ಯಕ್ರಮ ಮಾಡಿದರೂ ಅವರಿಗೆ ಅನುಮತಿ ನೀಡಿ ಎಂದು ನಾನೇ ಹೇಳಿರುವೆ. ಅಧಿಕಾರ ದುರುಪಯೋಗ ಮಾಡಿಕೊಂಡು ಯಾರಿಗೂ ನಿರ್ಬಂಧ ಹೇರುವುದಿಲ್ಲ. ಅದು ನಮ್ಮ ಕಾರ್ಯವೈಖರಿಯಲ್ಲ” ಎಂದು ಸ್ಪಷ್ಟಪಡಿಸಿದರು.

Share This Article
Leave a Comment