ಮಹಿಳೆಯರಿಂದ ದೇಶದ ಆರ್ಥಿಕತೆ ಸದೃಢ: ಜಿಟಿಡಿ

Pratheek
2 Min Read

ಪಬ್ಲಿಕ್ ಅಲರ್ಟ್


ಮೈಸೂರು: ಸಮಾಜದಲ್ಲಿ ಪುರುಷರು-ಮಹಿಳೆಯರು ಎನ್ನುವ ತಾರತಮ್ಯವಿಲ್ಲದೆ ಸಮಾನರಾಗಿದ್ದಾರೆ. ಮಹಿಳೆ ಇಂದು ದೇಶದ ಆರ್ಥಿಕ ವ್ಯವಸ್ಥೆ ಸದೃಢವಾಗಿರಲು ಮೂಲ ಕಾರಣರಾಗಿದ್ದಾರೆ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ತಾಲ್ಲೂಕಿನ ಜಯಪುರ ಗ್ರಾಮದ ಮರಮ್ಮ ಸಿದ್ದೇಗೌಡ ಫಂಕ್ಷನ್ ಹಾಲ್‌ನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಸಾಮೂಹಿಕ ಶ್ರೀ ಅಷ್ಟಲಕ್ಷ್ಮೀ ಪೂಜಾಸಮಿತಿ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಿದ್ದ ಸಾಮೂಹಿಕ ಶ್ರೀ ಅಷ್ಟಲಕ್ಷ್ಮೀ ಪೂಜೆ ಮತ್ತು ಧಾರ್ಮಿಕಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಸಾಧನೆ ಮಾಡಿರುವುದರಿಂದ ಪುರುಷರಿಗಿಂತ ಮಹಿಳೆಯರು ಕಡಿಮೆ ಇಲ್ಲ ಎಂಬಂತಾಗಿದೆ. ಹೈನುಗಾರಿಕೆಯಿಂದ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ. ಎರಡು ಹಸುಗಳನ್ನು ಖರೀದಿಸಿ ಸಾಕಿದರೆ ಬದುಕು ಸಾಗಿಸಬಹುದು. ಮಹಿಳೆಯರು ತಾವು ಸಂಪಾದನೆ ಮಾಡಿದ್ದನ್ನು ಕೂಡಿಡಬೇಕು. ಯಶಸ್ವಿನಿ ಯೋಜನೆಯಡಿ ವಿಮೆ ಮಾಡಿಸಬೇಕು. ಕೆಲವರು ಆಸ್ಪತ್ರೆಗೆ ಸೇರಿಸಿದ ಮೇಲೆ ನಮ್ಮತ್ರ ಹಣವಿಲ್ಲ, ಆಸ್ಪತ್ರೆಗೆ ಹೇಳಬೇಕು, ಹಣ ಕಟ್ಟಲು ದುಡ್ಡಿಲ್ಲ ಎನ್ನುತ್ತಾರೆ. ಅದರ ಬದಲಿಗೆ ಒಂದು ವಿಮೆ ಮಾಡಿಸಿ ಕುಟುಂಬದ ಆರೋಗ್ಯ ವೆಚ್ಚವನ್ನು ಭರಿಸಲು ಶಕ್ತರಾಗಿ ಎಂದು ಸಲಹೆ ನೀಡಿದರು.
ಅದ್ಧೂರಿ ಮದುವೆ ವ್ಯಾಮೋಹ ಬಿಡಿ. ಶಾಸಕನಾಗಿ ನಾನೇ ನನ್ನ ಇಬ್ಬರೂ ಹೆಣ್ಣು ಮಕ್ಕಳು, ಮಗನಿಗೂ ತಿರುಪತಿಯಲ್ಲಿ ಸರಳ ಮದುವೆ ಮಾಡಿಸಿದೆ. ನನ್ನ ತಮ್ಮನ ಮಗನ ಮದುವೆ ಧರ್ಮಸ್ಥಳದಲ್ಲಿ ಸರಳವಾಗಿ ನಡೆಸಿದೆ. ಸಾಲ ಮಾಡಿ ಮದುವೆ, ಮನೆ ನಿರ್ಮಿಸಿ ಬಳಿಕ ಭೂಮಿ ಮಾರಿಕೊಳ್ಳುವ ಸ್ಥಿತಿ ಬಂದಿದೆ. ನನ್ನ ಕ್ಷೇತ್ರದಲ್ಲೇ ಅನೇಕರು ಭೂಮಿ ಮಾರಿ ಕೂಲಿಗೆ ಹೋಗುವ ಸ್ಥಿತಿಯಲ್ಲಿದ್ದಾರೆಂದರು.
ಮಕ್ಕಳಿಗೆ ಸಂಸ್ಕಾರ ಕಲಿಸಿ, ವಿಜ್ಞಾವಂತರನ್ನಾಗಿ ಮಾಡಿ. ಜತೆಗೆ ಸ್ವಯಂ ಉದ್ಯೋಗ ಮಾಡಲು ಪ್ರೇರೆಪಿಸಿ ಅಗತ್ಯ ಸಹಕಾರ ನೀಡಿ. ಮಕ್ಕಳು ದಾರಿ ತಪ್ಪದಂತೆ ಜಾಗೃತಿವಹಿಸಿ ಎಂದರು. 
ಕಾರ್ಯಕ್ರಮದ ಅಧ್ಯಕ್ಷತೆ ಸಾಮೂಹಿಕ ಶ್ರೀ ಅಷ್ಟಲಕ್ಷ್ಮೀ ಪೂಜಾಸಮಿತಿ ಅಧ್ಯಕ್ಷ ಜೆ.ಎಂ.ಜವರನಾಯಕವಹಿಸಿದ್ದರು. ಬರಡನಪುರ ಶ್ರೀ ಪರಶಿವಮೂರ್ತಿ ಸ್ವಾಮೀಜಿ ಸಾನಿದ್ಯವಹಿಸಿದ್ದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ಜಯಂತ್ ಪೂಜಾರಿ, ಗ್ರಾ.ಪಂ.ಅಧ್ಯಕ್ಷ ಮಹದೇವಯ್ಯ,ಹಿರಿಯ ನಿರ್ದೇಶಕ ವಿ.ವಿಜಯಕುಮಾರ್ ನಾಗನಾಳ, ಗೋಪಾಲಪುರ ಗ್ರಾಪಂ ಮಾಜಿ ಅಧ್ಯಕ್ಷ  ಜಿ.ಕೆ.ಬಸವೇಗೌಡ, ಜಯಪುರ ಗ್ರಾಪಂ ಉಪಾಧ್ಯಕ್ಷೆ ಮಂಗಳಮ್ಮ, ಬಸವಣ್ಣ, ಟಿ.ಜಿ.ಶ್ವೇತಾ, ಸೋಮಣ್ಣ, ಜಿ.ಎಂ.ನಾಗೇಶ್, ವೆಂಕಟೇಶ್ ಮತ್ತಿತರರು ಹಾಜರಿದ್ದರು.

ಬಾಕ್ಸ್‌
ವರ್ಷದಲ್ಲಿ ಪೂರ್ಣ
ಕ್ಷೇತ್ರದ ಬಹು ನಿರೀಕ್ಷಿತ ಕುಡಿಯುವ ನೀರಿನ ಯೋಜನೆಗಳಾದ ಉಂಡುವಾಡಿ ಮತ್ತು ಕಬಿನಿ ನದಿ ಯೋಜನೆ ವರ್ಷದೊಳಗೆ ಮುಗಿಯಲಿವೆ. ೨೦೦ಕ್ಕೂ ಹೆಚ್ಚು ಗ್ರಾಮಗಳಿಗೆ ಈ ಯೋಜನೆ ಕುಡಿಯುವ ನೀರು ಒದಗಿಸಲಿವೆ.
-ಜಿ.ಟಿ.ದೇವೇಗೌಡ, ಶಾಸಕ

Share This Article
Leave a Comment