ಪಬ್ಲಿಕ್ ಅಲರ್ಟ್ ನ್ಯೂಸ್:-ನಗರದಲ್ಲಿ ಹೀರೋ ಮಹಿಳಾ ರಾಷ್ಟ್ರೀಯ ಗಾಲ್ಫ್ ಪಂದ್ಯಾವಳಿ-೨೦೨೬
ಮೈಸೂರು: ಗಾಲ್ಫ್ ಶ್ರೇಷ್ಠತೆಯ ಪ್ರತೀಕವಾಗಿರುವ ನಗರದ ಜಯಚಾಮರಾಜ ಒಡೆಯರ್ ಗಾಲ್ಫ್ ಕ್ಲಬ್‌ನಲ್ಲಿ ಜೂ.೧೧ರಿಂದ ೧೩ರವರೆಗೆ ಹೀರೋ ವುಮೆನ್ಸ್ ರಾಷ್ಟ್ರೀಯ ಗಾಲ್ಫ್ ಪಂದ್ಯಾವಳಿ-೨೦೨೬ ನಡೆಯಲಿದೆ ಎಂದು ಜೆಡಬ್ಲ್ಯುಜಿಸಿ ಅಧ್ಯಕ್ಷ ಎಚ್.ಎಸ್.ಅರುಣ್‌ಕುಮಾರ್ ತಿಳಿಸಿದರು.
ಲೇಡೀಸ್ ಯೂರೋಪಿಯನ್ ಟೂರ್ (ಎಲ್‌ಇಟಿ) ಸಹಭಾಗಿತ್ವದಲ್ಲಿ ನಡೆಯುವ ಈ ಹೀರೋ ವುಮೆನ್ಸ್ ರಾಷ್ಟ್ರೀಯ ಗಾಲ್ಫ್ ಪಂದ್ಯಾವಳಿ-೨೦೨೬ ವಿಶ್ವದ ಅತ್ಯಂತ ಪ್ರತಿಷ್ಠಿತ ಮಹಿಳಾ ಗಾಲ್ಫ್ ಸ್ಪರ್ಧೆಗಳಲ್ಲಿ ಒಂದಾಗಿದೆ.
ಒಟ್ಟು ೧೭ ಲಕ್ಷ ರೂ. ಬಹುಮಾನ:
ಒಟ್ಟು ೧೭ ಲಕ್ಷರೂ. ಮೊತ್ತದ ಬಹುಮಾನ ಹೊಂದಿರುವ ಈ ಗಾಲ್ಫ್ ಟೂರ್ನಿಯಲ್ಲಿ ೧೧ ಅಮೆಚೂರ್ ಆಟಗಾರ್ತಿಯರೂ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಒಟ್ಟು ೫೧ ಆಟಗಾರ್ತಿಯರು ಭಾಗವಹಿಸುತ್ತಿದ್ದಾರೆ. ಇವರಲ್ಲಿ ಪ್ರಮುಖವಾಗಿ ದೇಶದ ಮೊದಲ ಮೂರು ರ‍್ಯಾಂಕಿಂಗ್ ಹೊಂದಿರುವ ವೃತ್ತಿಪರ ಮಹಿಳಾ ಗಾಲ್ಫ್ ಆಟಗಾರ್ತಿಯರಾದ ರಿಧಿಮಾ ದಿಲಾವರಿ, ಟ್ವೇಸಾ ಮಾಲಿಕ್ ಮತ್ತು ವಾಣಿ ಕಪೂರ್ ಅವರೂ ಟೂರ್ನಿಯಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ ಎಂದು ಮಂಗಳವಾರ ಸುದ್ದಿಗೊಷ್ಠಿಯಲ್ಲಿ ಮಾಹಿತಿ ನೀಡಿದರು.
ಪ್ರತಿದಿನ ಮೂರು ಚಾಲೆಂಜ್ ರೌಂಡ್:
ಮೂರು ದಿನಗಳ ಕಾಲ ನಡೆಯುವ ಈ ೭ನೇ ಹೀರೋ ಮಹಿಳಾ ವೃತ್ತಿಪರ ಗಾಲ್ಸ್ ಟೂರ್ ೨೦೨೬ ಸ್ಪರ್ಧೆಯಲ್ಲಿ ಪ್ರತಿದಿನ ಮೂರು ಚಾಲೆಂಜ್ ಸುತ್ತುಗಳು ಇರಲಿದ್ದು, ಹದಿನೇಳು ಮಂದಿ ಆಟಗಾರ್ತಿಯರ ಒಂದು ಗುಂಪಿನಂತೆ ಮೂರು ತಂಡಗಳಾಗಿ ವಿಂಗಡಿಸಲಾಗಿದೆ. ಪ್ರತಿದಿನ ಬೆಳಗ್ಗೆ ೭.೩೦ಕ್ಕೆ ಸ್ಪರ್ಧೆಯು ಪ್ರಾರಂಭವಾಗಲಿದೆ ಎಂದು ಹೇಳಿದರು.
೧೮-ಹೋಲ್ ಚಾಂಪಿಯನ್‌ಶಿಪ್ ಗಾಲ್ಫ್ ಕೋರ್ಸ್:
ಹಲವಾರು ಪ್ರತಿಷ್ಠಿತ ಟೂರ್ನಮೆಂಟ್‌ಗಳನ್ನು ಯಶಸ್ವಿಯಾಗಿ ಆಯೋಜಿಸಿದ ಹಾಗೂ ಕರ್ನಾಟಕ ಮತ್ತು ಭಾರತದಲ್ಲಿ ಗಾಲ್ಸ್ ಕ್ರೀಡೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ ಸಕ್ರಿಯ ಕ್ರೀಡಾ ಮತ್ತು ಸಾಮಾಜಿಕ ಸಂಸ್ಥೆಯಾಗಿ ಜಯಚಾಮರಾಜ ಒಡೆಯರ್ ಗಾಲ್ಫ್ ಕ್ಲಬ್ ಸಾಗಿ ಬಂದಿದೆ. ಸುಮಾರು ೧೩೧ ಎಕರೆ ವಿಸ್ತೀರ್ಣದಲ್ಲಿ ಹರಡಿರುವ ಪ್ರಕೃತಿಯ ಸೊಬಗಿನ ಮಧ್ಯೆ ನೆಲೆಗೊಂಡಿರುವ ೧೮-ಹೋಲ್ ಚಾಂಪಿಯನ್‌ಶಿಪ್ ಗಾಲ್ಫ್ ಕೋರ್ಸ್ ಅನ್ನು ಜೆಡಬ್ಲ್ಯೂಜಿಸಿ ಹೊಂದಿದೆ. ಚಾಮುಂಡಿ ಬೆಟ್ಟದ ಅದ್ಭುತ ನೋಟವನ್ನು ಹೊಂದಿರುವ ಈ ಮೈದಾನವು ಮೈಸೂರಿನ ಅತ್ಯಂತ ಪ್ರಸಿದ ಕ್ರೀಡಾ ತಾಣಗಳಲ್ಲಿ ಒಂದಾಗಿದೆ. ಸಂಸ್ಥೆಯು ಹಲವು ವರ್ಷಗಳಿಂದ ಅನೇಕ ಪ್ರತಿಷ್ಠಿತ ಟೂರ್ನಮೆಂಟ್‌ಗಳು ಮತ್ತು ಸ್ಪರ್ಧಾತ್ಮಕ ಕ್ರೀಡಾಕೂಟಗಳಿಗೆ ಆತಿಥ್ಯ ವಹಿಸಿದೆ. ಅತ್ಯುತ್ತಮ ಕೋರ್ಸ್ ನಿರ್ವಹಣೆ ಹಾಗೂ ಕ್ರೀಡಾ ಆತಿಥ್ಯಕ್ಕಾಗಿ ಖ್ಯಾತಿ ಪಡೆದಿದೆ ಎಂದು ಮಾಹಿತಿ ನೀಡಿದರು.
ಗುರುವಾರ ಬೆಳಿಗ್ಗೆ ೭.೩೦ಕ್ಕೆ ಉದ್ಘಾಟನೆ:
ಜೂ.೧೧ರಂದು ಬೆಳಿಗ್ಗೆ ೭.೩೦ಕ್ಕೆ ಮೈಸೂರು ಪ್ರಾದೇಶಿಕ ಆಯುಕ್ತ ನಿತೀಶ್ ಪಾಟೀಲ್ ಅವರು ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ.
ಜೂ.೧೩ ರಂದು ಮಧ್ಯಾಹ್ನ ೨.೩೦ರ ವೇಳೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
ಹೀರೋ ವುಮೆನ್ಸ್ ವೃತ್ತಿಪರ ಗಾಲ್ಫ್‌ಟೂರ್‌ನ ಸಿಇಒ ವಿವೇಕ್‌ಕುಮಾರ್, ಟೂರ್ನಿಯ ನಿರ್ದೇಶಕ ಚಂದ್ರಶೇಖರ ಕಿಣಿ, ಜೆಡಬ್ಲ್ಯುಜಿಸಿ ಗೌರವ ಖಜಾಂಚಿ ಡಿ.ವಿ.ಶ್ರೀಧರ್, ಗೌರವ ಕಾರ್ಯದರ್ಶಿ ಕೆ.ಎಸ್.ಸುಧೀರ್‌ಭಟ್, ಇಂಡಿಯನ್ ಗಾಲ್ಫ್ ಯೂನಿಯನ್ ಡೈರೆಕ್ಟರ್ ಪರಂಜಿತ್ ಸಿಂಗ್, ಪಂದ್ಯಾವಳಿಯ ಚೇರ್ಮನ್ ಫಾಲ್ಗುಣ ವಿ ಅರಸ್, ಅಂತಾರಾಷ್ಟ್ರೀಯ ಗಾಲ್ಫ್ ಆಟಗಾರ್ತಿ ಪ್ರಣವಿ ಅರಸ್, ವೃತ್ತಿಪರ ಗಾಲ್ಫ್ ಆಟಗಾರ್ತಿಯರಾದ ರಿಧಿಮಾ ದಿಲಾವರಿ, ಟ್ವೇಸಾ ಮಾಲಿಕ್ ಮತ್ತು ವಾಣಿ ಕಪೂರ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಇದ್ದರು.
ಬಾಕ್ಸ್…..
ಮೈಸೂರಿನ ಪಣವಿ ಅರಸ್:
ಮೈಸೂರಿನ ಪಣವಿ ಅರಸ್ ಅವರು ಜೂನಿಯರ್ ಗಾಲ್ಪರ್ ಆಗಿ ತನ್ನ ಪಯಣ ಆರಂಭಿಸಿದ ಪ್ರಣವಿ ಇಂದು ಅಂತರರಾಷ್ಟ್ರೀಯ ಮಟ್ಟದ ಗಾಲ್ಸ್ ಆಟಗಾರ್ತಿಯಾಗಿ ಬೆಳೆದಿದ್ದಾರೆ. ೨೦೨೬ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. ಇದು ಮೈಸೂರು, ಕರ್ನಾಟಕ ಮತ್ತು ಇಡೀ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ. ಅವರ ಯಶೋಗಾಥೆಗೆ ಕ್ಲಬ್ ಒದಗಿಸಿರುವ ಅವಕಾಶಗಳು, ಮಾರ್ಗದರ್ಶನ ಹಾಗೂ ಕ್ರೀಡಾ ಸಂಸ್ಕೃತಿಯ ಪ್ರತಿಫಲವಾಗಿದೆ. ಪ್ರಣವಿ ಅವರಷ್ಟೇ ಅಲ್ಲದೆ ನಮ್ಮಲ್ಲಿ ತರಬೇತಿ ಪಡೆದಿರುವ ಅನೇಕ ಯುವ ಪುರುಷ ಮತ್ತು ಮಹಿಳಾ ಗಾಲ್ಫ್ ಆಟಗಾರರು ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ ಎಂದು ಅರುಣ್‌ಕುಮಾರ್ ಹೇಳಿದರು.
