ಪಬ್ಲಿಕ್ ಅಲರ್ಟ್ ನ್ಯೂಸ್:-ಸಂಚಾರಿ ಇ-ಚಲನ್ ದಾಖಲಾದ ಪ್ರಕರಣಗಳಿಗೆ ಶೇ 50 ರಷ್ಟು ರಿಯಾಯಿತಿ: ಜಿಲ್ಲಾ ಸತ್ರ ನ್ಯಾಯಧೀಶರು
ಮೈಸೂರು, ಜೂನ್ 08 (ಕರ್ನಾಟಕ ವಾರ್ತೆ )
ಕರ್ನಾಟಕ ರಾಜ್ಯದಲ್ಲಿಮೇ 2026 ರ ಮೊದಲು ಪೊಲೀಸ್ ಇಲಾಖೆಯಲ್ಲಿ ದಾಖಲಾಗಿರುವ ಸಂಚಾರಿ ಇ.ಚಲನ್ ಪ್ರಕರಣಗಳು ಹಾಗೂ ಸಾರಿಗೆ ಇಲಾಖೆಯಲ್ಲಿ 1991 ರಿಂದ 2022 ರ ಅವಧಿಯಲ್ಲಿ ಪ್ರಕರಣ ದಾಖಲಾಗಿರುವ ಪ್ರಕರಣಗಳ ಮೊತ್ತದಲ್ಲಿ ಶೇ 50 ರಷ್ಟು ರಿಯಾಯಿತಿ ನೀಡಲಾಗಿದ್ದು, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಉಷಾ ರಾಣಿ ಅವರು ತಿಳಿಸಿದರು.
ಅವರು ಇಂದು ಹೊಸ ನ್ಯಾಯಾಲಯ ಸಂಕೀರ್ಣದ ವಿಡಿಯೋ ಕಾನ್ಫರೆನ್ಸ್ ಹಾಲ್ ನಲ್ಲಿ ಅಧಿಕಾರಿಗಳ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಶೇ 50 ರಷ್ಟು ರಿಯಾಯಿತಿಯನ್ನು ಇತ್ಯರ್ಥಗೊಳ್ಳುವ ಪ್ರಕರಣಗಳಿಗೆ ನೀಡಲಾಗಿದ್ದು, ಸಾರ್ವಜನಿಕರು ಜೂನ್ 21 ರಿಂದ ಜುಲೈ 10 ರವರೆಗೆ ಹಣ ಪಾವತಿಸಬಹುದಾಗಿದೆ ಎಂದರು.
ಮೈಸೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿ 1,04,18,480 ಪ್ರಕರಣ – 458,04,01,700 ರೂ ದಂಡ ಪಾವತಿಗೆ ಬಾಕಿ ಇರುತ್ತದೆ ಹಾಗೂ ಮೈಸೂರು ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ 36,73,737 ಪ್ರಕರಣಗಳಿದ್ದು ದಂಡ ಪಾವತಿಗೆ 184,05,74,500 ರೂ ಬಾಕಿ ಇರುತ್ತದೆ. ಒಟ್ಟಾರೆ ಜಿಲ್ಲೆಯಲ್ಲಿ 1,40,92,217 ಪ್ರಕರಣಗಳು 642, 09,76,200 ರೂ ದಂಡ ವಸೂಲಿಗೆ ಬಾಕಿ ಇರುತ್ತದೆ ಎಂದರು.
ಪ್ರಾದೇಶಿಕ ಸಾರಿಗೆ ಇಲಾಖೆ ಪೂರ್ವದಲ್ಲಿ 792 ಪ್ರಕರಣಗಳು-24,12,000 ರೂ ದಂಡ, ಹುಣಸೂರು ವಿಭಾಗದಲ್ಲಿ 864 ಪ್ರಕರಣಗಳು 30,99,400 ರೂ ದಂಡ ಸೇರಿದಂತೆ ಒಟ್ಟು 1656 ಪ್ರಕರಣಗಳು- 55,11,400 ರೂ ದಂಡ ವಸೂಲಿಗೆ ಬಾಕಿ ಇರುತ್ತದೆ ಎಂದರು.
ಸಾರ್ವಜನಿಕರಿಗೆ ರಿಯಾಯಿತಿಯ ಬಗ್ಗೆ ಹಚ್ಚಿನ ಮಾಹಿತಿ ನೀಡಲು ಯೋಜನೆ ರೂಪಿಸಿ ಜೂನ್ 21 ರಿಂದ ಜುಲೈ 10 ರವರೆಗೆ ದಂಡವನ್ನು ಸಂಗ್ರಹಿಸಲು ಕ್ರಮ ಕೈಗೊಳ್ಳಿ. ಹಳೆ ಮತ್ತು ಹೊಸ ನ್ಯಾಯಾಲಯದ ಸಂಕೀರ್ಣಗಳಲ್ಲಿ ದಂಡ ಸಂಗ್ರಹಿಸಲು ಬೂತ್ ತೆರೆಯುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಾತನಾಡಿ 2025 ನೇ ಸಾಲಿನಲ್ಲಿ ನೀಡಿದ ರಿಯಾಯಿತಿ ಸಂದರ್ಭದಲ್ಲಿ 1,43,00,000 ರೂ ಹಾಗೂ 43,80,000 ರೂ ದಂಡ ಸಂಗ್ರಹಿಸಲಾಗಿದೆ. ಈ ಬಾರಿ ಬೀಟ್ ಪೊಲೀಸ್ ಹಾಗೂ ಸಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿ ದಂಡ ಸಂಗ್ರಹಿಸಲು ಕ್ರಮ ವಹಿಸಲಾಗುವುದು ಎಂದರು.
ಮೈಸೂರು ನಗರ ಉಪ ಪೊಲೀಸ್ ಆಯುಕ್ತ ಸುಂದರ್ ರಾಜ್ ಅವರು ಮಾತನಾಡಿ ನಗರದಲ್ಲಿ 18 ಪೊಲೀಸ್ ಠಾಣೆ ಹಾಗೂ 5 ಸಂಚಾರಿ ಪೊಲೀಸ್ ಠಾಣೆಗಳಲ್ಲಿ ದಂಡ ಸಂಗ್ರಹಿಸಲು ಕ್ರಮ ವಹಿಸಲಾಗುವುದು ಅವಶ್ಯವಿದ್ದಲ್ಲಿ ಹೆಚ್ಚುವರಿ ಬೂತ್ ಗಳನ್ನು ತೆರೆದು ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಾಗರಾಜ ಸಿದ್ದಪ್ಪ ಅಂಕನದೊಡ್ಡಿ, ವಕೀಲರ ಸಂಘದ ಅಧ್ಯಕ್ಷ ಎಸ್ ಲೋಕೇಶ್,ಮೈಸೂರು ನಗರ ಸಂಚಾರಿ ವಿಭಾಗದ ಎಸಿಪಿ ಶಿವಶಂಕರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಸರ್ವೋಚ್ಚ ನ್ಯಾಯಾಲಯದಲ್ಲಿ ವಿಶೇಷ ಲೋಕ್ ಅದಾಲತ್
ಸರ್ವೋಚ್ಚ ನ್ಯಾಯಾಲಯವು ವಿಶೇಷ ಲೋಕ್ ಅದಾಲತ್ ಅನ್ನು ಆಗಸ್ಟ್ 21 ರಿಂದ ಆಗಸ್ಟ್ 23 ರವರೆಗೆ ನಡೆಸಲು ಉದ್ದೇಶಿಸಿದ್ದು, ಪಕ್ಷಕಾರರುಗಳಿಗೆ ಎದುರುದಾರರ ಜೊತೆ ಪೂರ್ವಭಾವಿ ಲೋಕ್ ಅದಾಲತ್ ಅನ್ನು ನಡೆಸಲು ವಿಡಿಯೋ ಕಾನ್ಸರೆನ್ಸ್ ವ್ಯವಸ್ಥೆ ಮಾಡಲಾಗಿರುತ್ತದೆ. ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ಉಷಾರಾಣಿ ಅವರು ತಿಳಿಸಿದರು.
ಎಲ್ಲಾ ಪಕ್ಷಕಾರರು Virtual mode /Physical mode ಮೂಲಕ ಮಾನ್ಯ ಸರ್ವೋಚ್ಚ ನ್ಯಾಯಾಲಯವು ನಡೆಸುವ ಪೂರ್ವಭಾವಿ ಲೋಕ್ ಅದಾಲತ್‌ನಲ್ಲಿ ಭಾಗವಹಿಸಲು ಅನುಕೂಲ ಮಾಡಲಾಗಿರುತ್ತದೆ. ಈ ವಿಶೇಷ ಲೋಕ ಅದಾಲತ್‌ನಲ್ಲಿ ರಾಜೀ ಸಂಧಾನಕ್ಕೆ ಗುರುತಿಸಲಾದ ಪ್ರಕರಣಗಳ ಪಟ್ಟಿಯನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ವರದಿಯಾಗಿರುತ್ತದೆ ಎಂದರು.
ಸದರಿ ಪ್ರಕರಣಗಳಲ್ಲಿನ ಎಲ್ಲಾ ಪಕ್ಷಕಾರರುಗಳು ತಮ್ಮ ವಾಸಸ್ಥಳಗಳ ವ್ಯಾಪ್ತಿಯಲ್ಲಿ ಬರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳಲ್ಲಿ ತೆರೆಯಲಾಗಿರುವ ವಿಡಿಯೋ ಕಾನ್ಸರೆನ್ಸ್ ಕೇಂದ್ರಗಳಿಗೆ ಭೇಟಿ ಕೊಟ್ಟು ಆಗಸ್ಟ್ 21 ರಿಂದ ಆಗಸ್ಟ್ 23 ರವರೆಗೆ ನಡೆಯುವ ವಿಶೇಷ ಲೋಕ್ ಅದಾಲತ್‌ನಲ್ಲಿ ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಹೇಳಿದರು.
ಈ ಕುರಿತು ಗೂಗಲ್ ಫಾರ್ಮ ಲಭ್ಯವಿದ್ದು, ಅದನ್ನು ಜುಲೈ 31 ಒಳಗಾಗಿ ಸಂಬಂಧಪಟ್ಟ ವಕೀಲರು ಅಥವಾ ಪಕ್ಷಗಾರರು ಗೂಗಲ್ ಫಾರಂ. ಭರ್ತಿ ಮಾಡಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ: NALSA ಸಹಾಯವಾಣಿ ಸಂಖ್ಯೆ: 15100 ಮತ್ತು WWW.kslsa.kar.nic.ವೇಬ್ ಸೈಟ್
ಅಥವಾ ಆಯಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳು ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿಗಳ ಸದಸ್ಯ ಕಾರ್ಯದರ್ಶಿಯವರನ್ನು ಸಂಪರ್ಕಿಸಬಹುದೆಂದು ಎಂದರು.
