ಪಬ್ಲಿಕ್ ಅಲರ್ಟ್
ಮೈಸೂರು: ಜಗದ್ವಿಖ್ಯಾತ ನವರಾತ್ರಿ ಕಾರ್ಯಕ್ರಮ ಆರಂಭಕ್ಕೆ ಕ್ಷಣಗಣನೆ ಬೆನ್ನಲ್ಲೇ ಇಂದು ಚಾಮುಂಡಿ ಬೆಟ್ಟದ ಮೇಲೆ ಶ್ರೀ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ ದಸರಾ-೨೦೨೫ಕ್ಕೆ ಸಂಭ್ರಮದ ಚಾಲನೆ ದೊರೆಯಲಿದ್ದು, ಇದಕ್ಕೆ ಮೈಸೂರು ಸಕಲ ರೀತಿಯಲ್ಲಿಯೂ ತಯಾರಾಗಿ ಮದುವಣಗಿತ್ತಿಯಂತೆ ಸಿಂಗಾರಗೊಂಡು ಜನಾಕರ್ಷಿಸುತ್ತಿದೆ.
ಈ ಬಾರಿ ದಸರಾ ಉದ್ಘಾಟಕರ ವಿವಾದ ಹೊರತು ಪಡಿಸಿದರೆ ಉಳಿದಂತೆ ದಸರೆ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲು ಎಲ್ಲಾ ರೀತಿಯಲ್ಲೂ ಸಿದ್ದತೆ ಭರ್ಜರಿಯಾಗಿಯೇ ನಡೆಯಿತು. ಈಗಾಗಲೇ ನಗರದ ಎಲ್ಲಾ ರಸ್ತೆಗಳು ದೀಪಾಲಂಕಾರದಿಂದ ಸಿಂಗಾರಗೊಂಡಿವೆ. ಮಾತ್ರವಲ್ಲದೆ ಕುಪ್ಪಣ್ಣ ಪಾರ್ಕ್‌ನಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಸಕಲ ರೀತಿಯಲ್ಲೂ ಸಜ್ಜಾಗಿದೆ. ಮತ್ತೊಂದೆಡೆ ಮಹಾರಾಜ ಕಾಲೇಜು ಮೈದಾನದಲ್ಲಿ ಆಹಾರ ಮೇಳ, ಯೋಗ ದಸರಾ, ದಸರಾ ಸಿಎಂ ಕಪ್, ಕುಸ್ತಿ ಹಾಗೂ ಪ್ರಮುಖವಾಗಿ ವಸ್ತು ಪ್ರದರ್ಶನ ಈ ಬಾರಿ ಸಕಲ ರೀತಿಯಲ್ಲೂ ಸಜ್ಜಾಗಿರುವುದು ದಸರೆಯ ವಿಶೇಷವಾಗಿದೆ. ಇದರ ಭಾಗವಾಗಿ ಮೊದಲ ದಿನ ಲೇಖಕಿ ಭಾನುಮುಸ್ತಾಕ್ ಸೇರಿ ಅನೇಕ ಗಣ್ಯರು ಚಾಮುಂಡಿ ಬೆಟ್ಟದಲ್ಲಿ ಚಾಲನೆ ನೀಡಲಿದ್ದಾರೆ.
ಚಾಮುಂಡಿ ಬೆಟ್ಟದ ಮೇಲೆ ಬೆಳಿಗ್ಗೆ ೧೦.೧೦ರಿಂದ ೧೦.೪೦ರೊಳಗಿನ ಶುಭ ವೃಶ್ಚಿಕ ಲಗ್ನದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ಜರುಗಲಿದೆ. ಅಂತರಾಷ್ಟ್ರೀಯ ಬೂಕ್ ಪ್ರಶಸ್ತಿ ವಿಜೇತರಾದ ಬಾನುಮುಷ್ತಾಕ್ ಚಾಮುಂಡಿ ತಾಯಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬಕ್ಕೆ ಮುನ್ನುಡಿಯ ಚಾಲನೆ ನೀಡುವರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಪಸ್ಥಿತಿಯೊಂದಿಗೆ ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವರಾದ ನಿರ್ಮಲಸೀತಾರಾಮನ್, ಎಚ್.ಡಿ.ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ, ವಿ.ಸೋಮಣ್ಣ, ಶೋಭಾಕರಂದ್ಲಾಜೆ, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್ ಅತಿಥಿಗಳಾಗಿದ್ದು, ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆವಹಿಸಿ ಅನೇಕ ಸಚಿವರು ಭಾಗವಹಿಸುವರು. ಅಂಬಾ ವಿಲಾಸ ಅರಮನೆಯ ಮುಂಭಾಗದ ವೇದಿಕೆಯಲ್ಲಿ ನಡೆಯುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರಧಾನ ಸಮಾರಂಭ ಸಂ.೫ಕ್ಕೆ ಸಿಎಂ ಸಿದ್ದರಾಮಯ್ಯ ಉದ್ಘಾಟಿಸುವರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಶಿವಲಿಂಗಪ್ಪ ಹೊರಟ್ಟಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಧಾನಸಭಾ ಸಭಾಧ್ಯಕ್ಷ ಯು.ಟಿ.ಖಾದರ್ ಷರೀದ್, ಶಾಸಕ ಶ್ರೀವತ್ಸ ಅಧ್ಯಕ್ಷತೆಯೊಂದಿಗೆ ಅನೇಕ ಸಚಿವರು ಭಾಗವಹಿಸುವರು.
ಇಂದು ಯಾವುದೆಲ್ಲಾ ಚಾಲನೆ
ದಸರಾ ಮೊದಲ ದಿನದಂದು ೧೨.೩೦ಕ್ಕೆ ಕುಪ್ಪಣ್ಣ ಪಾರ್ಕ್‌ನಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನವನ್ನು ಸಿಎಂ ಸಿದ್ದರಾಮಯ್ಯ, ೧ಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಆಹಾರ ಮೇಳವನ್ನು ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಸಚಿವ ಕೆ.ಎಚ್.ಮುನಿಯಪ್ಪ, ಸಂ.೪ಕ್ಕೆ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದ ಡಿ.ದೇವರಾಜ ಅರಸು ವಿವಿದ್ದೋದ್ದೇಶ ಕ್ರೀಡಾಂಗಣದಲ್ಲಿ ದಸರಾ ಕುಸ್ತಿ ಪಂದ್ಯಾವಳಿಯನ್ನು ಸಿಎಂ ಸಿದ್ದರಾಮಯ್ಯ, ಸಂ.೪ಕ್ಕೆ ಚಾಮರಾಜೇಂದ್ರ ದೃಶ್ಯಕಲಾ ಕಾಲೇಜಿನ ಆವರಣದ ಚಿತ್ರಕಲಾ ಶಿಬಿರವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ತಂಗಡಗಿ ಶಿವರಾಜ್ ಸಂಗಪ್ಪ, ಸಂ.೫ಕ್ಕೆ ಸ್ಕೌಟ್ಸ್ ಅಂಡ್ ಗ್ಲೈಡ್ಸ್ ಮೈದಾನದಲ್ಲಿ ಪುಸ್ತಕಮೇಳವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ತಂಗಡಗಿ ಶಿವರಾಜ್ ಸಂಗಪ್ಪ, ಸಂ.೫ಕ್ಕೆ ಜೆ.ಕೆ.ಮೈದಾನದ ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ ಅಲ್ಯೂಮಿನಿ ಅಸೋಸಿಯೇಷನ್ ಸಭಾಭವನದಲ್ಲಿನ ಯೋಗದಸರಾ, ಯೋಗ ನೃತ್ಯ ನಾಟಕ”ಪಂಚತತ್ವ ದರ್ಶನ” ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸುವರು.
ಸಂ.೫.೩೦ಕ್ಕೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ದಸರಾ ಸಿಎಂ ಕಪ್ ಕ್ರೀಡಾಕೂಟವನ್ನು ಸಿಎಂ ಸಿದ್ದರಾಮಯ್ಯ, ಸಂ.೬.೩೦ಕ್ಕೆ ಕೆ.ಆರ್.ಆಸ್ಪತ್ರೆಯ ಸಯ್ಯಾಜಿರಾವ್ ರಸ್ತೆಯಲ್ಲಿರುವ ವಿದ್ಯುತ್ ದೀಪಾಲಂಕಾರವನ್ನು ಇಂಧನ ಸಚಿವ ಕೆ.ಜೆ.ಜಾರ್ಜ್, ಸಂ.೭.೩೦ಕ್ಕೆ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ದಸರಾ ವಸ್ತುಪ್ರದರ್ಶನವನ್ನು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸುವರು. ಆ ಮೂಲಕ ದಸರಾ ಮೊದಲ ದಿನ ಪ್ರಮುಖ ೯ ಕಾರ್ಯಕ್ರಮಗಳಿಗೆ ಅನೇಕ ಸಚಿವರ ಸಮ್ಮುಖದಲ್ಲಿ ಗಣ್ಯರು ಚಾಲನೆ ನೀಡುವರು.






ಬಾಕ್ಸ್
ನಾಳೆ ಚಾಲನೆ
ಸೆ.೨೩ರಂದು ಬೆಳಿಗ್ಗೆ ೭.೩೦ಕ್ಕೆ ಅಂಬಾವಿಲಾಸ ಅರಮನೆ ಮುಂಭಾಗ ನಡೆಯುವ ರಂಗೋಲಿ ಸ್ಪರ್ಧೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವೆ ಲಕ್ಷ್ಮೀ ಆರ್.ಹೆಬ್ಬಾಳ್ಕರ್ ಚಾಲನೆ ನೀಡುವರು. ಬೆ.೧೦.೩೦ಕ್ಕೆ ಮೈಸೂರು ವಿವಿಯ ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ “ಪಂಚಕಾವ್ಯದೌತಣ” ಕವಿಗೋಷ್ಠಿಗೆ ಕವಿ ಡಾ.ಅರವಿಂದ ಮಾಲಗತ್ತಿ ಉದ್ಘಾಟಿಸುವರು. ಬೆ.೧೧ಕ್ಕೆ ಜೆ.ಕೆ.ಗ್ರೌಂಡ್ಸ್ ಮೈದಾನದಲ್ಲಿ ನಡೆಯುವ ಮಹಿಳಾ ದಸರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವೆ ಲಕ್ಷ್ಮೀ ಆರ್.ಹೆಬ್ಬಾಳ್ಕರ್ ಉದ್ಘಾಟನೆ ನೀಡುವರು.
