ಪಬ್ಲಿಕ್ ಅಲರ್ಟ್
ಮೈಸೂರು: ಮೈಸೂರು ದಸರಾ ಎಷ್ಟೊಂದು ಸುಂದರ ಎಂಬ ಚಿತ್ರಗೀತೆಯ ಹಾಡಿನಂತೆ ಒಂದೆಡೆ ಗಟ್ಟಿ ಪೈಲ್ವಾನರ ಪಂಜಕುಸ್ತಿ ಪಟ್ಟು, ಮತ್ತೊಂದೆಡೆ ಅತಿಹೆಚ್ಚು ಹಾಲು ಕರೆದು ಗೆದ್ದು ಬೀಗಿದ ರೈತ, ಇನ್ನೊಂದೆಡೆ ಬಾನಾಂಗಳದಿ ಚಿತ್ತಾರ ಮೂಡಿಸಿದ ಏರ್ ಶೋ ಹೀಗೆ ಒಂದೆಡೆ ಎರಡೇ ನಾನಾ ದಸರಾ ರಂಗಿನ ಸುಂದರ ಕ್ಷಣಕ್ಕೆ ಮೈಸೂರು ದಸರಾ ಸಾಕ್ಷಿಯಾಯಿತು.
ದಸರಾ ಚಾಲನೆಗೊಂಡು ಐದು ದಿನಗಳು ಕಳೆದಿದ್ದು, ದಿನೇ ದಿನೇ ಅದರ ಮೆರುಗು ಹೆಚ್ಚುತಲೇ ಇದೆ. ಅದರಲ್ಲೂ ಐದನೇ ದಿನದಂದು ಮುಂಜಾನಯೇ ರೇಷ್ಮೆ ಸೀರೆ, ಬಿಳಿ ಪಂಚೆ ಮೈಸೂರು ಪೇಟೆ ತೊಟ್ಟ ಜೋಡಿಗಳು ಟಾಂಗಾ ಸವಾರಿ ನಡೆಸಿ ಮುಂಜಾನೆ ಸವಿ ನೆನಪು ಮೆಲುಕು ಹಾಕಿದರು. ಮತ್ತೊಂದೆಡೆ ವಸ್ತು ಪ್ರದರ್ಶನದ ಆವರಣದಲ್ಲಿ ಮಕ್ಕಳು ವಿವಿಧ ಭಂಗಿಗಳ ಯೋಗಾಸನ ಪ್ರದರ್ಶಿಸುವ ಮೂಲಕ ನೆರೆದಿದ್ದವರು ಚಪ್ಪಾಳೆ ಗಿಟ್ಟಿಸಿಕೊಂಡವು.
ಸಾಲದೆಂಬಂತೆ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಅತಿಹೆಚ್ಚು ಹಾಲು ಕರೆದ ರೈತ ಸಂಭ್ರಮಿಸಿದ್ದು ಮಾತ್ರವಲ್ಲದೆ ಬಹುಮಾನ ಗೆದ್ದು ಬೀಗಿದರು. ಮತ್ತೊಂದೆಡೆ ಯಶಸ್ವಿಯಾಗಿ ನಮ್ಮ ಇಂಡಿಯನ್ ಏರ್ ಫೋರ್ಸ್ ತಂಡ ೨೦ ನಿಮಿಷಗಳ ಕಾಲ ಬಾನಂಗಳದಲ್ಲಿ ಮೂಡಿಸಿದ ವೈಮಾನಿಕ ಪ್ರದರ್ಶನದ ಚಿತ್ರಣ ನೆರೆದಿದ್ದವರೆಲ್ಲರನ್ನು ಸಂಭ್ರಮದಲ್ಲಿ ತೇಲುವಂತೆ ಮಾಡಿತು. ಇದರೊಟ್ಟಿಗೆ ಆಹಾರ ಮೇಳದ ಘಮ ಘಮ, ಫಲಪುಷ್ಪ ಪ್ರದರ್ಶನದ ಆಕರ್ಷಣೆ, ದಸರಾ ವಸ್ತು ಪ್ರದರ್ಶನ ಪ್ರವಾಸಿಗರು ಜನರ ಕೈ ಬೀಸಿ ಕರೆಯುವಂತಿದ್ದವು.
ಸೆ.೨೩ರಿಂದ ಪ್ರಾರಂಭಗೊಂಡ ಪಂಚಕಾವ್ಯದೌತಣ ಪ್ರಭಾತ ಕವಿಗೋಷ್ಠಿ, ಪ್ರಚಾರ, ಪ್ರಜ್ವಲ, ಪ್ರತಿಭಾ ಸಾಕಷ್ಟು ಸಾಹಿತ್ಯಾಸಕ್ತರ ಆಸಕ್ತಿ ಕೆರಳಿಸಿದವು. ಅಂತಿಮವಾಗಿ ಪ್ರಬುದ್ಧ ಕವಿಗೋಷ್ಠಿಯ ಮೂಲಕ ಕನ್ನಡ ಕಾವ್ಯದ ಸೊಬಗಿನ ನಾನಾ ಮಜಲುಗಳನ್ನು ಮೆಲುಕು ಹಾಕುವ ವೇದಿಕೆ ಯಶಸ್ವಿಯಾಗಿಯೇ ತೆರೆ ಕಂಡಿತು.









ಬಾಕ್ಸ್
ಇಂದು ಡ್ರೋಣ್ ಶೋ
ಸೆ.೨೮ರಂದು ಬೆಳಿಗ್ಗೆ ೧೦ಕ್ಕೆ ಜೆ.ಕೆ.ಮೈದಾನದ ಆವರಣದಲ್ಲಿ ಮುದ್ದು ಪ್ರಾಣಿಗಳ ಪ್ರದರ್ಶನ ಕಾರ್ಯಕ್ರಮ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಚಾಲನೆ ನೀಡವರು. ಜತೆಗೆ ಕಾವಾ ಕಾಲೇಜಿನಲ್ಲಿ ಬೆ.೧೦ಕ್ಕೆ ಕಲಾಜಾತ್ರೆ ಮೆರುಗಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಚಾಲನೆ ನೀಡುವರು. ಆರನೇ ದಿನದ ಪ್ರಮುಖ ಆಕರ್ಷಣೆಯಾಗಿ ಸಂ.೭ಕ್ಕೆ ಬನ್ನಿಮಂಟಪ ಪಂಜಿನ ಕಾವಾಯತು ಮೈದಾನದಲ್ಲಿ ಡ್ರೋಣ್ ಶೋ ಪ್ರದರ್ಶನ ಎಲ್ಲರ ಕಣ್ಮನ ಸೆಳೆಯಲಿದೆ. ಇದರೊಟ್ಟಿಗೆ ಎಂದಿನಂತೆ ಆಹಾರ ಮೇಳ, ರೈತ ದಸರಾವಸ್ತುಪ್ರದರ್ಶನ, ದಸರಾ ವಸ್ತುಪ್ರದರ್ಶನ, ಫಲಪುಷ್ಪ ಪ್ರದರ್ಶನ ಸಹ ಇರಲಿದೆ.
