ಜಾನಪದ ಕಲಾವಿದರಿಗೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಲಿ- ಎಂ.ಶಿವಣ್ಣ ಆಗ್ರಹ

Pratheek
3 Min Read

ಪಬ್ಲಿಕ್ ಅಲರ್ಟ್

ಮೈಸೂರು: ಜಾನಪದ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಮಾಜಿ ಸಚಿವ ಕೋಟೆ ಎಂ.ಶಿವಣ್ಣ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಕನ್ನಡ ಜಾನಪದ ಪರಿಷತ್‌  ಜಿಲ್ಲಾ ಘಟಕವು ಮಾನಸ ಗಂಗೋತ್ರಿ ಲಲಿತಕಲಾ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಜಾನಪದ ಪ್ರಪಂಚ ಹಾಗೂ ಯುವ ಜಾನಪದ ಪ್ರಪಂಚ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾನಪದ ಕಲೆ, ಸಂಗೀತದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.  ಇಂತಹ ಕಲೆ ನಶಿಸಿ ಹೋಗಲು ಬಿಡಬಾರದು. ಹೀಗಾಗಿ ಜಾನಪದ ಕಲೆ ಉಳಿಸಿ, ಬೆಳೆಸಲು ಸರ್ಕಾರ ಹೆಚ್ಚಿನ ನೆರವು ನೀಡಬೇಕು ಎಂದರು.

ಜಾನಪದ ಕಲೆ, ಸಂಗೀತದಿಂದ ಶುಗರ್‌, ಬಿಪಿ ಕಡಿಮೆಯಾಗುತ್ತದೆ. ಆದರೆ ಆಧುನಿಕ ಕಾಲದ ಸಂಗೀತವನ್ನು ಆಲಿಸಿದರೆ ಅವು ಹೆಚ್ಚಾಗುತ್ತದೆ. ಎಲ್ಲರೂ ಮೊಬೈಲ್‌ ಗೀಳಿಗೆ ಬಿದ್ದಿದ್ದಾರೆ ಎಂದು ಅವರು ವಿಷಾದಿಸಿದರು.

ಕಜಾಪ ಜಿಲ್ಲಾಧ್ಯಕ್ಷರಾದ ಕ್ಯಾತನಹಳ್ಳಿ ಪ್ರಕಾಶ್‌  ಅವರು ಸರ್ಕಾರದ ಯಾವುದೇ ಅನುದಾನ ಪಡೆಯದೇ ಕೆಲ ದಾನಿಗಳೊಂದಿಗೆ ಸೇರಿ ಕಳೆದ ಒಂಭತ್ತು ವರ್ಷಗಳಿಂದಲೂ ಜಿಲ್ಲೆಯ ಜಾನಪದ ಕಲಾವಿದರನ್ನು ಗುರುತಿಸಿ, ಗೌರವಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ,. ಮುಂದಿನ ವರ್ಷಗಳಲ್ಲಿ ತಾವು ಕೂಡ ಕೈಜೋಡಿಸುವುದಾಗಿ ಭರವಸೆ ನೀಡಿದರು.



ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸುಗಮ ಸಂಗೀತ ಪರಿಷತ್‌  ಜಿಲ್ಲಾಧ್ಯಕ್ಷ ನಾಗರಾಜ ವಿ.ಬೈರಿ ಮಾತನಾಡಿ, ಹಿರಿಯ ಜಾನಪದ ಕಲಾವಿದರು ಈವರೆಗೆ ಈ ಕಲೆಯನ್ನು ಉಳಿಸಿ, ಬೆಳೆಸಿಕೊಂಡು ಬಂದಿದ್ದಾರೆ. ಆದರೆ ಯುವ ಕಲಾವಿದರು ಆನ್‌ಲೈನ್‌ ಹಾಗೂ ಡಿಜಿಟಲ್‌ ಮಾಧ್ಯಮವನ್ನು ಸಮರ್ಪಕವಾಗಿ ಬಳಸಿಕೊಂಡು ಜಾನಪದ ಕಲೆಯ ಬಗ್ಗೆ ವ್ಯಾಪಕ ಪ್ರಚಾರ ಮಾಡಬೇಕು ಎಂದು ಸಲಹೆ ಮಾಡಿದರು.

ಪ್ರತಿಯೊಂದು ಜಾನಪದ ಗೀತೆಗಳಲ್ಲಿ ಬದುಕಿನ ಸಂದೇಶವಿದೆ. ಆದ್ದರಿಂದ ಜಾನಪದ ಕಲೆಗೆ ತಾಯಿಬೇರು ಎಂಬ ಸ್ಥಾನವಿದೆ ಎಂದರು.

ಇದೇ ಸಂದರ್ಭದಲ್ಲಿ ಬೆಸೂರು ಮೋಹನ್‌  ಪಾಳೇಗಾರ್‌  ಅವರ ಕಾಡು ಕಣಿವೆಯ ಜಾನಪದ ಕಥೆಗಳು, ಕಾನನ ಜಾನಪದ ಕಥೆಗಳು ಕೃತಿಗಳನ್ನು ಬಿಡುಗಡೆ ಮಾಡಿದರು.

ಕಜಾಪ ಜಿಲ್ಲಾಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್‌ ಪ್ರಾಸ್ತಾವಿಕ ಭಾಷಣ ಮಾಡಿದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌, ರಾಜ್ಯ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ, ಕಜಾಪ ವಿಭಾಗೀಯ ಕಾರ್ಯದರ್ಶಿ ಡಾ.ಕಾವೇರಿ ಪ್ರಕಾಶ್‌, ಚಾಮರಾಜ ಕ್ಷೇತ್ರ ಅಧ್ಯಕ್ಷೆ ರಾಣಿಪ್ರಭಾ, ಲಲಿತಕಲಾ ಕಾಲೇಜು ಪ್ರಾಂಶುಪಾಲೆ ಪ್ರೊ.ಅನಿಟ ವಿಮ್ಲ ಬ್ರ್ಯಾಗ್ಸ್‌, ಮುಖ್ಯಅತಿಥಿಗಳಾಗಿದ್ದರು.. ಎಚ್‌.ಡಿ. ಕೋಟೆ ತಾ. ಕುರುಬರ ಸಂಘದ ಮುಖಂಡ ಆನಂದ್‌, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸಿ.ಜಿ. ಗಂಗಾಧರ್‌, ಕಜಾಪ ಜಿಲ್ಲಾ ಖಜಾಂಚಿ ಡಾ.ವಿನೋದಾ, ಜಂಟಿ ಕಾರ್ಯದರ್ಶಿ ಜಿ.ರವಿಶಂಕರ್‌, ಎ.ಎಲ್.ಸುರೇಶ್‌ ಚಂದ್ರ,ದೊರೆಸ್ವಾಮಿ, ಪಲ್ಲವಿ, ಕವಿತಾ, ಬಸವರಾಜು, ರಶ್ಮಿ ಕೃಷ್ಣ ಇದ್ದರು. ವೇದರಾಜ್‌, ಕೆ.ಆರ್‌. ನಗರದ ರಿಜ್ವಾನ್‌ ನಿರೂಪಿಸಿದರು. ಶ್ರೀಧರ್‌  ಪ್ರಾರ್ಥಿಸಿದರು.

ವಿವಿಧ ತಾಲೂಕು ಘಟಕಗಳ ಅಧ್ಯಕ್ಷರು ಕ್ಯಾತನಹಳ್ಳಿ ಪ್ರಕಾಶ್‌  ಹಾಗೂ ಡಾ.ಕಾವೇರಿ ಪ್ರಕಾಶ್‌  ಅವರನ್ನು ಸನ್ಮಾನಿಸಿದರು.

ಬಾಕ್ಸ್‌

ಪ್ರಶಸ್ತಿ ಪುರಸ್ಕೃತರು

ಜಿಲ್ಲಾ ಜಾನಪದ ಪ್ರಪಂಚ ಪ್ರಶಸ್ತಿ- ಕುಂಬಾರಕೊಪ್ಪಲು ತಂಬೂರಿ ನಂಜೇಗೌಡ, ತತ್ಪಪದ ಹಾಡುಗಾರ ಶಿರಮಳ್ಳಿ ನಾಗೇಗೌಡ, ತಂಬೂರಿ ಕಲಾವಿದ ಕಂಪ್ಲಾಪುರ ಮಹದೇವಯ್ಯ, ದೇವರ ಮಕ್ಕಳ ಕುಣಿತದ ಪಿರಿಯಾಪಟ್ಟಣ ತಾಲೂಕಿನ ಸಣ್ಣತಮ್ಮೇಗೌಡ, ಜಾನಪದ ಸಂಘಟಕ ಹೊನ್ನೇನಹಳ್ಳಿಯ ರಾಜಯ್ಯ, ಕೋಲಾಟ ಕಲಾವಿದೆಯರಾದ ಹೂಟಗಳ್ಳಿ ಎಂ.ಪಿ. ಗೀತಾ, ಮೈಸೂರಿನ ಟಿ.ಎನ್. ರಾಜೇಶ್ವರಿ, ಜಾನಪದ ಹಾಡುಗಾರ್ತಿಯರಾದ ಮೈಸೂರಿನ ಪುಷ್ಪಲತಾ ನಾರಾಯಣ, ಎಚ್‌.ಕೆ. ಕೋಮಲಾ, ಹುಣಸೂರು ತಾಲೂಕಿನ ಅರ್ಚನಾ, ವೀರಗಾಸೆಯ ಕಿರಾಳು ಮಹೇಶ್‌, ಸೋಬಾನೆ ಹಾಡುಗಾರರಾದ ಮಾದಗಳ್ಳಿಯ ಜಯಮ್ಮ, ಕಮಲಮ್ಮ, ಹೂಟಗಳ್ಳಿಯ ಎಂ.ಎಸ್‌. ಮಂಜುಳಮ್ಮ, ಕಂಸಾಳೆ ಕಲಾವಿದ ಸೂರಹಳ್ಳಿಯ ಹೊಣಕರ ನಾಯಕ.

ಜಿಲ್ಲಾ ಯುವ ಜಾನಪದ ಪ್ರಪಂಚ ಪ್ರಶಸ್ತಿ-  ಜಾನಪದ ಹಾಡುಗಾರರಾದ ಮೈಸೂರು ತಾ. ಲಕ್ಷ್ಮೀಪುರದ ಮಹಾಲಿಂಗು, ಹದಿನಾರು ಎಂ. ಮಹಾದೇವಮೂರ್ತಿ, ಸಾಲಿಗ್ರಾಮದ ಗಜೇಂದ್ರ ಮಂಜು, ಕೆ.ಎಸ್‌. ಗದ್ದಿಗೆಯ ಕೆ. ಸಂಗೀತಾ, ಡಿ. ಸಾಲುಂಡಿಯ ಮಹಾದೇವ ಕಾಳಿರಾಮೇಗೌಡ,  ಮೈಸೂರಿನ ನೀತು ಚಂದ್ರಶೇಖರ್‌, ಕಳಸೂರು ರಾಜು, ಡೊಳ್ಳು ಕುಣಿತದ ಮೈಸೂರಿನ ರಮ್ಯಾ, ಕ್ಯಾತನಹಳ್ಳಿ ಯೋಗೇಶ್, ಪೂಜಾ ಕುಣಿತದ ಸಿ. ಸುಂದರೇಶ್‌, ಕೊಡಗಳ್ಳಿ ಪ್ರದೀಪ್‌, ಜಾನಪದ ಕಲಾವಿದರಾದ ಮೇಘಶ್ರೀ ಸುರೇಶ್, ಶ್ರೀನಿವಾಸಮೂರ್ತಿ ಕಿರುಗುಂದ, ಕಂಸಾಳೆಯ ಕೆ. ಜೋಗಿ ಕುಮಾರ್‌ ಹಾಗೂ ತೇಜನಾಯಕ.

Share This Article
Leave a Comment