ಪಬ್ಲಿಕ್ ಅಲರ್ಟ್ ನ್ಯೂಸ್:-ಪಿರಿಯಾಪಟ್ಟಣ ವಿಧಾನ ಸಭಾ ಕ್ಷೇತ್ರದಲ್ಲಿ 419.78 ಕೋಟಿಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ
ನಮ್ಮದು ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿರುವ ಸರ್ಕಾರ ಇದಕ್ಕೆ ಸಾಕ್ಷಿ ಇಂದಿನ ಅಭಿವೃದ್ಧಿ ಕಾಮಗಾರಿಗಳು – ಸಿದ್ದರಾಮಯ್ಯ
ಮೈಸೂರು ಏಪ್ರಿಲ್ 21 ( ಕರ್ನಾಟಕ ವಾರ್ತೆ) ನಮ್ಮದು ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿರುವ ಸರ್ಕಾರ ಇದಕ್ಕೆ ಸಾಕ್ಷಿ ಇಂದಿನ ಅಭಿವೃದ್ಧಿ ಕಾಮಗಾರಿಗಳು ಎಂದು
ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ತಿಳಿಸಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಹಮ್ಮಿಕೊಂಡಿದ್ದ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುವ 419.78 ಕೋಟಿ ರೂಗಳ ವಿವಿಧ ಇಲಾಖೆಗಳಲ್ಲಿನ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮವನ್ನು ನೆರವೇರಿಸಿ ಅವರು ಮಾತನಾಡಿದರು. ಪಿರಿಯಾಪಟ್ಟಣದ ಶಕ್ತಿ ದೇವತೆಯಾದ ಶ್ರೀ ಮಸಣಿಕಮ್ಮ ದೇವಾಲಯದ ನಿರ್ಮಾಣ, ಪಿರಿಯಾಪಟ್ಟಣದ ತಾಲ್ಲೂಕು ಒಕ್ಕಲಿಗರ ಸಂಘದ ಸಹಯೋಗದೊಂದಿಗೆ ನಿರ್ಮಿಸುತ್ತಿರುವ ಕುವೆಂಪು ಭವನ ನಿರ್ಮಾಣ, ಬೆಟ್ಟದಪುರದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನಡೆಸಿದರು.
ಇಂದು ಪಿರಿಯಾಪಟ್ಟಣದಲ್ಲಿ 419.78 ಕೋಟಿಯ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಹಾಗೂ ಉದ್ಘಾಟನೆ ನೆರವೇರಿಸಲಾಗಿದೆ. ಇದು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದೇವೆ ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ. ನಮ್ಮದು ನುಡಿದಂತೆ ನಡೆವ ಸರ್ಕಾರ. 2014 ರಲ್ಲಿ 168 ಭರವಸೆಗಳನ್ನು ನೀಡಿದ್ದೆವು ಇದರಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೆವು. ಅಲ್ಲದೆ ಹೊಸ 20 ಯೋಜನೆಗಳನ್ನು ಜಾರಿಗೆ ತಂದೆವು. ಈ ಬಾರಿ ಭರವಸೆ ನೀಡಿದ್ದ 5 ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರುವುದು ಅಸಾಧ್ಯ. ಇವನ್ನು ಜಾರಿಗೆ ತಂದರೆ ರಾಜ್ಯದ ಖಜಾನೆ ಖಾಲಿಯಾಗುತ್ತದೆ ಎಂದು ಟೀಕಿಸಿದ್ದರು. ಆದರೆ
ಇತರೆ ರಾಜ್ಯಗಳಲ್ಲಿ ನಮ್ಮ ಗ್ಯಾರೆಂಟಿ ಯೋಜನೆಗಳನ್ನು ಕಾಪಿ ಮಾಡುತ್ತಿದ್ದಾರೆ ಎಂದರು.
ನಾವು 4,48,004 ಕೋಟಿ ವೆಚ್ಚದ ಬಜೆಟನ್ನು ಮಂಡಿಸಲಾಗಿದೆ. ನಮ್ಮ ಸರ್ಕಾರ ಆರ್ಥಿಕವಾಗಿ ಸದೃಢವಾಗಿದೆ. ಜನರು ನಮ್ಮ ಪರ ಇದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಪ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಅವರು ಮಾತನಾಡಿ ಈ ತಾಲ್ಲೂಕಿನ ಅಂತರ್ಜಲ ಅಭಿವೃದ್ಧಿ ಪಡಿಸಲು ಕೆರೆ ತುಂಬಿಸುವ ಯೋಜನೆಯನ್ನು ಜಾರಿಗೆ ತಂದಿದ್ದೆವು. ಇದರಿಂದ ಜಿಲ್ಲೆಯ ಅಂತರ್ಜಲ ಮಟ್ಟ ಹೆಚ್ಚಳ ಆಗಿದೆ. 50 -60 ವರ್ಷಗಳಿಂದ ಪೋಡಿ ಆಗದ, ಪೌತಿ ಖಾತೆ ಆಗದ ಜಾಮೀನನ್ನು ಪೌತಿ ಖಾತೆ ಮಾಡಿ ಕೊಡಲಾಗುತ್ತಿದೆ. ರಸ್ತೆಗಳಿಗೆ ಹೊಸ ರೂಪವನ್ನು ಕೊಟ್ಟು ಗುಣಮಟ್ಟದ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಕೃಷಿ ಇಲಾಖೆಯಿಂದ 3 ಸಾವಿರ ಕೋಟಿ ವೆಚ್ಚದಲ್ಲಿ ರಾಜ್ಯದಾದ್ಯಂತ ರೈತರಿಗೆ ಕೃಷಿ ಉಪಕರಣಗಳನ್ನು ವಿತರಣೆ ಮಾಡಲಾಗುತ್ತಿದೆ. ಇಡೀ ರಾಜ್ಯದಲ್ಲಿ ಪಂಪ್ ಸೆಟ್ ಗೆ 7 ಗಂಟೆಗಳ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಇದರ ಅವಲಂಬನೆಯನ್ನು ಕಡಿಮೆ ಮಾಡಲು ಸೋಲಾರ್ ಪಂಪ್ ಅಳವಡಿಸಲು ಸಹಾಯಧನ ನೀಡಲಾಗುತ್ತಿದೆ. ತಾಲ್ಲೂಕಿನಲ್ಲಿ 63 ಮೆಗಾ ವ್ಯಾಟ್ ಉತ್ಪಾದನೆಯ ಸೋಲಾರ್ ಯೋಜನೆಯನ್ನು ಎರಡು ಕಡೆ ಜಾರಿಗೆ ತರಲಾಗಿದೆ. ಮೇಕೆದಾಟು ಯೋಜನೆಗೆ ಅಗತ್ಯ ಭೂಮಿ ನೀಡಿ, ಡಿಪಿಆರ್ ತಯಾರಿಸಲಾಗಿದೆ. ನಮ್ಮ ಗ್ಯಾರೆಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ ಎಂದು ತಿಳಿಸಿದರು.
ಪಶು ಸಂಗೋಪನಾ ಇಲಾಖೆಯ ಸಚಿವರಾದ ಕೆ ವೆಂಕಟೇಶ್ ಅವರು ಮಾತನಾಡಿ ಬಹಳ ವರ್ಷಗಳ ಕಾಲ ನೆನೆಗುದಿಗೆ ಬಿದ್ದಿದ್ದ ಹಲವು ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆಡೆಯುತ್ತಿದೆ. ಪಿರಿಯಾಪಟ್ಟಣ ತಾಲ್ಲೂಕು ಕಡಿಮೆ ನೀರಾವರಿ ಹೊಂದಿರುವ ಜಿಲ್ಲೆ. ಹಲವು ನೀರಾವರಿ ಯೋಜನೆಗಳ ಮೂಲಕ ಕೆರೆಗಳ ತುಂಬಿಸುವ ಕಾರ್ಯ ಮಾಡಲಾಗುತ್ತಿದೆ. 150 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ತರಲಾಗಿದೆ. ಈ ತಿಂಗಳ ಜೂನ್ ಗೆ ನೀರು ತುಂಬಿಸುವ ಕಾರ್ಯ ಜಾರಿಗೆ ಬರಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದರು.
ಮಸಳಿಕಮ್ಮ ದೇವಸ್ಥಾನ ಜೀರ್ಣೋದ್ಧಾರ, ಬೆಟ್ಟದಪುರದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ರಸ್ತೆ ಅಭಿವೃದ್ಧಿ ಕಾಮಗಾರಿ ಮಾಡಲಾಗುತ್ತಿದೆ. ನಮ್ಮ ಸರ್ಕಾರ ಯಾವಾಗಲೂ ಅಭಿವೃದ್ಧಿ ಪರ, ಬಡವರ ಪರ ಹಾಗೂ ರೈತರ ಪರವಾದ ಸರ್ಕಾರವಾಗಿದೆ. 5 ಗ್ಯಾರೆಂಟಿ ಯೋಜನೆಗಳಿಗೆ ವಾರ್ಷಿಕ 58 ಸಾವಿರ ಕೋಟಿ ವೆಚ್ಚ ಮಾಡುತ್ತಿದೆ. ಇದರಿಂದ ಜನರ ಜೀವನ ಮಟ್ಟ ಸುಧಾರಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್ ಸಿ ಮಹದೇವಪ್ಪ, ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿ, ಕೃಷಿ ಸಚಿವರಾದ ಚಲುವರಾಯಸ್ವಾಮಿ, ಸಾರಿಗೆ ಮತ್ತು ಮುಜರಾಯಿ ಇಲಾಖೆಯ ಸಚಿವರಾದ ರಾಮಲಿಂಗಾರೆಡ್ಡಿ, ಕಂದಾಯ ಸಚಿವರಾದ ಕೃಷ್ಣಭೈರೇಗೌಡ, ಶಾಸಕರಾದ ಡಿ ರವಿಶಂಕರ್, ಕೆ ಹರೀಶ್ ಗೌಡ, ದರ್ಶನ್ ಧ್ರುವ ನಾರಾಯಣ್, ವಿಧಾನ ಪರಿಷತ್ ಸದಸ್ಯರಾದ, ಡಾ. ಡಿ ತಿಮ್ಮಯ್ಯ, ಕೆ ಶಿವಕುಮಾರ್, ಪ್ರಾದೇಶಿಕ ಆಯುಕ್ತರಾದ ನಿತೀಶ್ ಪಾಟೀಲ್, ಜಿಲ್ಲಾಧಿಕಾರಿಗಳಾದ ಜಿ ಲಕ್ಷ್ಮೀಕಾಂತ ರೆಡ್ಡಿ, ಚೆಸ್ಕಾಂ ಎಂ ಡಿ ಅರ್ಚನ ಅವರು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
