ಪಬ್ಲಿಕ್ ಅಲರ್ಟ್ ನ್ಯೂಸ್:-ಸಂಪತ್ತು ಮತ್ತು ಆಡಳಿತ ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಬೇಕು: ಸಾಮಾಜಿಕ ನ್ಯಾಯಕ್ಕೆ ನಮ್ಮ ಸರ್ಕಾರ ಬದ್ಧ- ಸಿದ್ದರಾಮಯ್ಯ
ಮೈಸೂರು, ಮೇ.06(ಕರ್ನಾಟಕ ವಾರ್ತೆ):- ಸಂಪತ್ತು ಮತ್ತು ಆಡಳಿತ ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಬೇಕು. ಸಾಮಾಜಿಕ ನ್ಯಾಯಕ್ಕೆ ನಮ್ಮ ಸರ್ಕಾರ ಬದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಇಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಮಹಾನಗರ ಪಾಲಿಕೆ ಹಾಗೂ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತೋತ್ಸವ ಸಮಿತಿ ವತಿಯಿಂದ ಕರ್ನಾಟಕ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ಈ ಜಯಂತೋತ್ಸವದಲ್ಲಿ ನಾನು ಅತ್ಯಂತ ಸಂತೋಷದಿಂದ ಭಾಗವಹಿಸಿದ್ದೇನೆ. ಎಲ್ಲಿಯವರೆಗೆ ಸಮಸಮಾಜ ನಿರ್ಮಾಣವಾಗುವುದಿಲ್ಲವೋ, ಅಲ್ಲಿಯವರೆಗೆ ತಳ ಹಂತದಲ್ಲಿರುವ ಸಮುದಾಯದಿಂದ ಬೇಡಿಕೆಗಳು ಇದ್ದೇ ಇರುತ್ತವೆ. ಈ ನಾಡಿನ ಸಂಪತ್ತು ಮತ್ತು ಆಡಳಿತ ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಬೇಕು ಎಂಬುದು ನಮ್ಮ ಸರ್ಕಾರದ ಉದ್ದೇಶವಾಗಿದೆ. ‘ಎಲ್ಲರಿಗೂ ಸಮಪಾಲು, ಸಮಬಾಳು’ ಸಿಗಬೇಕು ಎಂಬುದು ನಮ್ಮ ಆಶಯ,” ಎಂದು ಹೇಳಿದರು.
“ಎಲ್ಲಾ ಸಾಮಾಜಿಕ ಹೋರಾಟಗಾರರ ಕನಸು ಒಂದೇ ಆಗಿದೆ; ಸಮಾಜದಲ್ಲಿ ವೈಜ್ಞಾನಿಕತೆ ಹಾಗೂ ವೈಚಾರಿಕತೆ ಬೆಳೆದು ವರ್ಗ ವ್ಯವಸ್ಥೆಗಳು ನಿರ್ಮೂಲನವಾಗಬೇಕು ಎಂಬುದು ಅವರ ಗುರಿ. ಆದರೂ ಸಹ, ಇಂದಿಗೂ ನಮ್ಮ ದೇಶದಲ್ಲಿ ಜಾತಿ ವ್ಯವಸ್ಥೆಯು ಅಸ್ತಿತ್ವದಲ್ಲಿರುವುದನ್ನು ನಾವು ಕಾಣಬಹುದಾಗಿದೆ,” ಎಂದರು.
“ಅವಕಾಶವಂಚಿತರಾದ ಎಲ್ಲಾ ಜನಾಂಗದವರಿಗೂ ಸಮಾನ ಅವಕಾಶಗಳು ಸಿಗಬೇಕು ಎಂಬುದು ನಮ್ಮ ಸಂಕಲ್ಪ. ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳುವಂತೆ, ಸಮಾಜದಲ್ಲಿ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಎಲ್ಲರಿಗೂ ರಾಜಕೀಯ ಸ್ವಾತಂತ್ರ್ಯ ಸಿಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣ ಲಭಿಸಿದಾಗ ಮಾತ್ರ ಅವರು ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮುಂದುವರಿಯಲು ಸಾಧ್ಯ,” ಎಂದು ತಿಳಿಸಿದರು.
“ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ ಡಾ: ಬಿ.ಆರ್ ಅಂಬೇಡ್ಕರ್ ಅವರ ಹೆಸರು ಇಂದು ‘ಜೈ ಭೀಮ್’ ಎಂಬ ಘೋಷಣೆಯ ಮೂಲಕ ಎಲ್ಲೆಡೆ ಮೊಳಗುತ್ತಿದೆ. ನಮ್ಮ ರಾಜ್ಯದ 7 ಕೋಟಿ ಜನರಿಗೂ ಅನ್ವಯವಾಗುವಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಇದರಲ್ಲಿ ಯಾವುದೇ ತಾರತಮ್ಯವಿಲ್ಲ; ನಾವು ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದ್ದೇವೆ,” ಎಂದು ಪುನರುಚ್ಚರಿಸಿದರು.
“ಸಂವಿಧಾನ ಜಾರಿಗೆ ಬರುವ ಮುನ್ನ ಮನುಶಾಸ್ತ್ರವೇ ಮಾರ್ಗದರ್ಶಿಯೆಂದು ಭಾವಿಸಲಾಗಿತ್ತು. ಆದರೆ ಇಂದು ನಾವು ಸಂವಿಧಾನದ ಆಶಯಗಳಿಗೆ ಬದ್ಧವಾಗಿ ಆಡಳಿತ ನಡೆಸುತ್ತಿದ್ದೇವೆ. ಮನುಷ್ಯನು ಮನುಷ್ಯನನ್ನು ಪ್ರೀತಿಸಬೇಕೇ ಹೊರತು ದ್ವೇಷಿಸಬಾರದು ಎಂಬುದನ್ನು ಅಂಬೇಡ್ಕರ್ ಅವರು ನಮಗೆ ತಿಳಿಸಿಕೊಟ್ಟಿದ್ದಾರೆ ಎಂದರು.
“ಜೀವನದಲ್ಲಿ ಕಾಯಕ ಮಾಡಿ ಹಣಸಂಪಾದನೆ ಮಾಡಬೇಕು ಮತ್ತು ಆ ಸಂಪಾದನೆಯನ್ನು ಎಲ್ಲರೊಂದಿಗೆ ಸಮಾನವಾಗಿ ಹಂಚಿಕೊಳ್ಳಬೇಕು ಎಂಬ ತತ್ವವನ್ನು ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ನಮಗೆ ಬೋಧಿಸಿದ್ದಾರೆ. ಆ ಬೋಧನೆಯನ್ನು ನಾವು ಅಕ್ಷರಶಃ ಪಾಲಿಸಲು ಪ್ರಯತ್ನಿಸೋಣ. ಅವರು ಕಾಯಕಯೋಗಿಯಾಗಿದ್ದು, ‘ಕಾಯಕವೇ ಕೈಲಾಸ’ ಎಂದು ನಂಬಿ ನಿರಂತರವಾಗಿ ಕರ್ಮಪಥದಲ್ಲಿ ತೊಡಗಿಸಿಕೊಂಡಿದ್ದರು.”
“ಆದ್ದರಿಂದ ಪ್ರತಿಯೊಬ್ಬರೂ ಉತ್ಪಾದನಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಕಾಯಕಯೋಗಿಗಳಾಗಬೇಕು,” ಎಂದು ಕರೆ ನೀಡಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ ಅವರು ಮಾತನಾಡಿ ಭೋವಿ ಸಮಾಜದ ಕಟ್ಟಕಡೆಯ ಮನುಷ್ಯನಿಗೆ ಇಂದು ಸರ್ಕಾರದಿಂದ ಸೌಲಭ್ಯಗಳು ತಲುಪುತ್ತಿವೆ ಎಂದರೆ ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಶೀರ್ವಾದವೇ ಕಾರಣ ಎಂದರು.
ಸಿದ್ದರಾಮೇಶ್ವರ ಜಯಂತಿಯನ್ನು ಮೊದಲು ಬೆಂಗಳೂರಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಮ್ಮುಖದಲ್ಲೇ ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂಬ ಉದ್ದೇಶದಿಂದ ಕಾರ್ಯಕ್ರಮವನ್ನು ಮೈಸೂರಿಗೆ ಸ್ಥಳಾಂತರಿಸಲಾಯಿತು ಎಂದು ತಿಳಿಸಿದರು.
ಭೋವಿ ಹಾಗೂ ಒಡ್ಡರ ಸಮುದಾಯದವರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ನಾನು ಸಚಿವನಾಗಿ ಇಂದು ಈ ಮಟ್ಟಕ್ಕೆ ಬರಲು ತಮ್ಮ ಪೋಷಕರು ನೀಡಿದ ಶಿಕ್ಷಣವೇ ಕಾರಣ ಎಂದು ಹೇಳುತ್ತಾ, ಸಮಾಜದ ಯುವಕರು ಶಿಕ್ಷಿತರಾಗಬೇಕು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾರಿಗೆ ತಂದ ಅನ್ನಭಾಗ್ಯ ಯೋಜನೆಯಿಂದ ಸಮಾಜದ ಬಡವರು ಹಸಿವಿನಿಂದ ಮುಕ್ತರಾಗಿದ್ದಾರೆ ಎಂದು ಹೇಳಿದರು.
ಭೋವಿ ಅಭಿವೃದ್ಧಿ ನಿಗಮದಲ್ಲಿ ಒಡ್ಡರ ಸಮುದಾಯವನ್ನು ಸೇರ್ಪಡೆ ಮಾಡಿ ಭೋವಿ ಹಾಗೂ ಒಡ್ಡರ ಅಭಿವೃದ್ಧಿ ನಿಗಮ ಎಂದು ಮಾರ್ಪಡು ಮಾಡಬೇಕು. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಸಿದ್ದರಾಮೇಶ್ವರ ಸಮುದಾಯ ಭವನ ನಿರ್ಮಿಸಬೇಕು ಎಂದು ಮನವಿ ಸಲ್ಲಿಸಿದರು
ಸಮಾಜದಲ್ಲಿ ಹಿಂದೆ ಸಂಘಟನೆಯ ಕೊರತೆ ಇತ್ತು, ಆದರೆ ಇಂದು ಎಲ್ಲ ಜಿಲ್ಲೆಗಳಲ್ಲೂ ಸಮಾಜ ಸಂಘಟಿತವಾಗುತ್ತಿರುವುದು ಸಂತಸದ ವಿಷಯ. ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದಲ್ಲಿ ‘ಸಿದ್ದರಾಮೇಶ್ವರ ಪ್ರಶಸ್ತಿ’ಯನ್ನು ಆರಂಭಿಸಲಾಗಿದ್ದು, ಈ ವರ್ಷ ಹಿರಿಯ ಸಾಹಿತಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅವರಿಗೆ ನೀಡಿರುವುದು ಪ್ರಶಸ್ತಿಗೆ ಗೌರವ ತಂದಿದೆ ಎಂದರು.
ಚಿತ್ರದುರ್ಗ ಹಾಗೂ ಬಾಗಲಕೋಟೆ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರು ಮಾತನಾಡಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರರು ಕೇವಲ ಒಬ್ಬ ಶರಣರಲ್ಲ, ಅವರು ಈ ನಾಡಿನ ಕಾಯಕ ಯೋಗಿ. ಅವರ ತತ್ವಗಳು ಮತ್ತು ಸಮಾಜಮುಖಿ ಕಾರ್ಯಗಳು ಇಂದಿನ ಸಮಾಜಕ್ಕೆ ಅತ್ಯಂತ ಅವಶ್ಯಕವಾಗಿವೆ. ಸಮಾಜದ ಅಭಿವೃದ್ಧಿಗೆ ಮತ್ತು ಸಂಘಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೊಡುಗೆ ಅಪಾರ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಧ್ವನಿಯಾಗಿ ಅವರು ಕೆಲಸ ಮಾಡುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಸಿದ್ದರಾಮೇಶ್ವರ ಪ್ರಶಸ್ತಿ ಪಡೆದ ಹಿರಿಯ ಸಾಹಿತಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಿದ ಶ್ರೀಗಳು, “ಅವರ ಸಾಹಿತ್ಯ ಸೇವೆ ಮತ್ತು ಸಮಾಜದ ಮೇಲಿರುವ ಅವರ ಕಾಳಜಿ ನಮಗೆಲ್ಲರಿಗೂ ಪ್ರೇರಣೆ. ಅಂತಹ ವ್ಯಕ್ತಿಗೆ ಪ್ರಶಸ್ತಿ ನೀಡಿರುವುದು ಅತ್ಯಂತ ಸಂತಸ ಇದೆ ಎಂದು ಹೇಳಿದರು.
ಸಿದ್ದರಾಮೇಶ್ವರರ ಬಗ್ಗೆ ಇರುವ ಪವಾಡದ ಕಥೆಗಳಿಗಿಂತ ಅವರ ವ್ಯಕ್ತಿತ್ವದ ಆಳ ಮತ್ತು ಕಾಯಕ ನಿಷ್ಠೆ ಹೆಚ್ಚು ಮುಖ್ಯವಾದುದು. ಸಮಾಜಕ್ಕಾಗಿ ಕೆರೆ-ಕಟ್ಟೆಗಳನ್ನು ನಿರ್ಮಿಸಿದ ಅವರ ದೂರದೃಷ್ಟಿ ಇಂದಿನ ಜನಪ್ರತಿನಿಧಿಗಳಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.
ಭೋವಿ ಸಮಾಜದ ಬಂಧುಗಳು ತಮ್ಮ ಹಕ್ಕುಗಳಿಗಾಗಿ ಸಂಘಟಿತರಾಗಬೇಕು. ರಾಜಕೀಯ ಮತ್ತು ಶೈಕ್ಷಣಿಕವಾಗಿ ಮುನ್ನಡೆಯಲು ಒಗ್ಗಟ್ಟು ಪ್ರದರ್ಶಿಸುವುದು ಅನಿವಾರ್ಯ ಎಂದು ತಿಳಿಸಿದರು.
ಡಾ: ಬಿ.ಆರ್ ಅಂಬೇಡ್ಕರ್ ಅವರನ್ನು ಕೇವಲ ದಲಿತ ನಾಯಕ ಎಂದು ಸೀಮಿತಗೊಳಿಸುವುದು ತಪ್ಪು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿರುವ ಅವರ ಬರಹಗಳನ್ನು ಓದಿದಾಗ ಅಂಬೇಡ್ಕರ್ ಅವರು ಇಡೀ ಭಾರತದ ಮತ್ತು ಭಾರತೀಯರ ನಾಯಕ ಎಂಬುದು ಅರ್ಥವಾಗುತ್ತದೆ ಎಂದು ತಿಳಿಸಿದರು.
ರಾಜ್ಯದಲ್ಲಿ 7 ಕೋಟಿ ಜನಸಂಖ್ಯೆ ಇದ್ದು, ಕೇವಲ ಶೇ. 1ರಷ್ಟು ಜನರಿಗೆ ಮಾತ್ರ ಸರ್ಕಾರಿ ಉದ್ಯೋಗ ನೀಡಲು ಸಾಧ್ಯ. ಆದ್ದರಿಂದ ಯುವಕರು ಕೇವಲ ಸರ್ಕಾರಿ ನೌಕರಿಯನ್ನು ನೆಚ್ಚಿಕೊಳ್ಳದೆ, ಸ್ವಯಂ ಉದ್ಯೋಗಗಳನ್ನು ಅಪ್ಪಿಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ 2025-26 ನೇ ಸಾಲಿನ ಕಾಯಕ ಯೋಗಿ ಸಿದ್ದರಾಮೇಶ್ವರ ಪ್ರಶಸ್ತಿಯನ್ನು ತುಮಕೂರು ಜಿಲ್ಲೆಯ ಪ್ರೊ.ಎಸ್.ಜಿ ಸಿದ್ದರಾಮಯ್ಯ ಅವರಿಗೆ ಪ್ರಧಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಿದ್ದರಾಮ ಬೆಳ್ಳಿಕಿರಣ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪಶುಸಂಗೋಪನೆ ಹಾಗೂ ರೇಷ್ಮೆ ಇಲಾಖೆ ಸಚಿವ ಕೆ. ವೆಂಕಟೇಶ್ , ವಿಧಾನಸಭಾ ಶಾಸಕ ಕೆ. ಹರೀಶ್ ಗೌಡ, ಅನಿಲ್ ಚಿಕ್ಕಮಾಧು, ವಿಧಾನ ಪರಿಷತ್ ಶಾಸಕ ಡಾ: ಡಿ ತಿಮ್ಮಯ್ಯ ಲ, ಡಾ: ಯತೀಂದ್ರ ಸಿದ್ದರಾಮಯ್ಯ,
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ ಎಂ, ಕನ್ನಡ ಪುಸ್ತಕ ಪ್ರಾಧಿಕರದ ಅಧ್ಯಕ್ಷ ಡಾ: ಮಾನಸ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆಯುಬ್ ಖಾನ್, ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ಅಧ್ಯಕ್ಷ ಗಣೇಶ್ ಹೆಚ್.ಡಿ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಸ್ ರಂಗಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜೆ.ಮಂಜುನಾಥ್, ನಿರ್ದೇಶಕ ಮಂಜುನಾಥ್ ಸ್ವಾಮಿ, ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್ , ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಜಿ, ಅಪರ ಜಿಲ್ಲಾಧಿಕಾರಿ ಐಶ್ವರ್ಯ ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.
