ಪಬ್ಲಿಕ್ ಅಲರ್ಟ್ ನ್ಯೂಸ್:-ಪರಿಸರ ಸಂರಕ್ಷಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು : ವಡ್ನಾಳ್ ಜಗದೀಶ್
ಮೈಸೂರು ಜೂನ್ 12 (ಕರ್ನಾಟಕ ವಾರ್ತೆ ) ನಾವು ಪರಿಸರದ ಸೌಲಭ್ಯವನ್ನು ಬಳಸಿ ಅನುಭವಿಸಿದ್ದೇವೆ, ಈ ಪರಿಸರವನ್ನು ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆ ಹಸ್ತಾಂತರಿಸಬೇಕು ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷರಾದ ವಡ್ನಾಳ್ ಜಗದೀಶ್ ಅವರು ಹೇಳಿದರು.
ಇಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಜೀವವೈವಿಧ್ಯ ಸಂರಕ್ಷಣೆ ಹಾಗೂ ಜೀವವೈವಿಧ್ಯ ನಿರ್ವಹಣಾ ಸಮಿತಿಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ಪೂರ್ವಜರು ನಮಗಿಂತ ಅತ್ಯುತ್ತಮ ಮತ್ತು ಸ್ವಚ್ಛವಾದ ಪರಿಸರವನ್ನು ಅನುಭವಿಸಿದ್ದರು ಆದರೆ ಪ್ರಸ್ತುತ ದಿನಗಳಲ್ಲಿ ನಮಗೆ ಅಂತಹ ವಾತಾವರಣದ ಕೊರತೆ ಎದ್ದು ಕಾಣುತ್ತಿದೆ. ಲಭ್ಯವಿರುವ ಪರಿಸರವನ್ನು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಹಸ್ತಾಂತರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಜೀವವೈವಿಧ್ಯದ ವಿಶಾಲ ವ್ಯಾಪ್ತಿ ಜೀವ ವೈವಿಧ್ಯ ಎಂದರೆ ಕೇವಲ ಔಷಧೀಯ ಸಸ್ಯಗಳು ಅಥವಾ ಪ್ರಾಣಿಗಳಿಗೆ ಸೀಮಿತವಲ್ಲ. ನಾವು ಉಸಿರಾಡುವ ಗಾಳಿಯಿಂದ ಹಿಡಿದು ಸೇವಿಸುವ ಆಹಾರದವರೆಗೆ ಪ್ರತಿಯೊಂದು ಅಂಶವೂ ಜೀವವೈವಿಧ್ಯದ ವ್ಯಾಪ್ತಿಗೆ ಒಳಪಡುತ್ತದೆ. ಪ್ರಕೃತಿಯಲ್ಲಿನ ಸಸ್ಯ ಮತ್ತು ಪ್ರಾಣಿಗಳನ್ನು ನಾಶ ಮಾಡಲು ಯಾರಿಗೂ ಹಕ್ಕಿಲ್ಲ. ಪ್ರಕೃತಿಯ ಮೇಲಿನ ನಮ್ಮ ಅಧಿಕಾರ ಮತ್ತು ಅಗತ್ಯಗಳ ಮಿತಿಯನ್ನು ಅರಿತುಕೊಂಡು ಕಾರ್ಯನಿರ್ವಹಿಸಿದರೆ ಮಾತ್ರ ಪರಿಸರ ಸಮತೋಲನ ಕಾಯ್ದುಕೊಳ್ಳಲು ಸಾಧ್ಯ ಎಂದು ಹೇಳಿದರು.
ತಾಲೂಕು ಮಟ್ಟದಲ್ಲಿ BMC ಸಮಿತಿಗಳ ಕಡ್ಡಾಯ ರಚನೆ ಮಾಡಿ ಜೀವವೈವಿಧ್ಯ ನಿರ್ವಹಣೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿಗಳ ಪಾತ್ರ ಅತ್ಯಂತ ಮಹತ್ವದಾಗಿರುತ್ತದೆ ಎಂದು ಹೇಳಿದರು.
ಪ್ರತಿ ತಾಲೂಕು ಮಟ್ಟದಲ್ಲಿ ಕಡ್ಡಾಯವಾಗಿ ಜೀವವೈವಿಧ್ಯ ನಿರ್ವಹಣಾ ಸಮಿತಿ BMC ಅಸ್ತಿತ್ವದಲ್ಲಿರಬೇಕು.
ತಾಲೂಕು ಪಂಚಾಯತ್ ಇಒ ಅವರೇ ಈ ಸಮಿತಿಯ ಜವಾಬ್ದಾರಿಯನ್ನು ಹೊರಬೇಕಿರುತ್ತದೆ. ಯಾವ ತಾಲೂಕುಗಳಲ್ಲಿ ಇನ್ನೂ ಸಮಿತಿ ರಚನೆಯಾಗಿಲ್ಲವೋ, ಅಲ್ಲಿನ ಇಒಗಳು ಇಂದಿನಿಂದಲೇ ಜವಾಬ್ದಾರಿ ತೆಗೆದುಕೊಂಡು ತಕ್ಷಣವೇ ಸಮಿತಿಯನ್ನು ರಚಿಸಬೇಕು. ನಿಯಮ ಪಾಲಿಸದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗ್ರಾಮ ಪಂಚಾಯತ್ ಮಟ್ಟದಲ್ಲಿ ರಚನೆಯಾಗುವ ಬಿಎಂಸಿ ಸಮಿತಿಗಳಿಗೆ ಆಯಾ ಪಂಚಾಯತ್ ಅಧ್ಯಕ್ಷರೇ ಅಧ್ಯಕ್ಷರಾಗಿರುತ್ತಾರೆ. ಒಂದು ವೇಳೆ ಅಧ್ಯಕ್ಷರು ಇಲ್ಲದಿದ್ದರೆ, ಪ್ರಸ್ತುತ ಆಡಳಿತ ಅಧಿಕಾರಿಯಾಗಿ ಯಾರು ಇರುತ್ತಾರೋ ಅವರೇ ಸಮಿತಿಯ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ ಮತ್ತು ಪಿಡಿಒಗಳು ಕಾರ್ಯದರ್ಶಿಯಾಗಿರುತ್ತಾರೆ ಎಂದು ತಿಳಿಸಿದರು.
ಸ್ಥಳೀಯ ಮಟ್ಟದಲ್ಲಿ ಪರಿಸರದ ಬಗ್ಗೆ ಕಾಳಜಿ ಇರುವವರು, ಆಯುರ್ವೇದ ಕ್ಷೇತ್ರದ ಪರಿಣಿತರು ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರನ್ನು ಒಳಗೊಂಡಂತೆ ಒಟ್ಟು 9 ಜನರನ್ನು ಸ್ಥಳೀಯವಾಗಿ ಆಯ್ಕೆ ಮಾಡಿಕೊಳ್ಳಬೇಕು. ಇವರೊಂದಿಗೆ ಒಟ್ಟು 11 ಜನರ ಸಮಿತಿ ಸಿದ್ಧವಾಗುತ್ತದೆ.
ಅರಣ್ಯ ಇಲಾಖೆಯೊಂದಿಗೆ ಸಮನ್ವಯ ಈ ಸಮಿತಿಯಲ್ಲಿರುವ 11 ಜನರಲ್ಲಿ 9 ಜನ ಸದಸ್ಯರು ಅರಣ್ಯ ಇಲಾಖೆಗೆ ಸಂಬಂಧಪಟ್ಟಂತೆ ಕೆಲಸ ಮಾಡಬೇಕಾಗುತ್ತದೆ. ಬಿಎಂಸಿ ಸದಸ್ಯರು ಅರಣ್ಯ ಇಲಾಖೆಯ ಸಹಾಯ, ಸಹಕಾರವನ್ನು ಪಡೆದು, ಕಾಡಿನಲ್ಲಿ ನಡೆಯುವ ಕಳ್ಳಸಾಗಣೆಗಳ ಬಗ್ಗೆ ಇಲಾಖೆಗೆ ಮಾಹಿತಿ ನೀಡುವ ಮೂಲಕ ಶಕ್ತಿಯಾಗಿ ನಿಲ್ಲಬಹುದು ಎಂದು ಹೇಳಿದರು.
ಅರಣ್ಯ ಇಲಾಖೆಯಲ್ಲಿ ಅಧಿಕಾರಿಗಳ ಸಂಖ್ಯೆ ಸೀಮಿತವಾಗಿರುತ್ತದೆ. ಆದರೆ ಪ್ರತಿ ಪಂಚಾಯತಿಯಲ್ಲಿ 9 ಜನರ ಬಿಎಂಸಿ ಸದಸ್ಯರ ಕೈಜೋಡಿಸಿದರೆ ಪರಿಸರ ಸಂರಕ್ಷಣೆಯ ಜವಾಬ್ದಾರಿ ಸುಲಭವಾಗುತ್ತದೆ. ಊರಿನಲ್ಲಿ ಯಾರಾದರೂ ಮರ ಕಡಿಯುತ್ತಿದ್ದರೆ ತಕ್ಷಣವೇ ಇಲಾಖೆಗೆ ಮಾಹಿತಿ ನೀಡಿ ಕಳ್ಳಸಾಗಣೆಯನ್ನು ತಡೆಯಬಹುದಾಗಿದೆ ಎಂದರು.
ಪ್ರಕೃತಿಯ ಅನೇಕ ಅಮೂಲ್ಯ ಸಂಪನ್ಮೂಲಗಳು ಈಗಾಗಲೇ ನಾಶವಾಗುತ್ತಿದ್ದು, ಅವುಗಳ ರಕ್ಷಣೆಗೆ ತಕ್ಷಣದ ಶ್ರಮ ಅಗತ್ಯವಿದೆ. ಕೇವಲ ಅಧಿಕಾರಿಗಳಷ್ಟೇ ಅಲ್ಲದೆ, ಪ್ರತಿಯೊಬ್ಬ ಸಾಮಾನ್ಯ ನಾಗರಿಕನೂ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಹೊರಬೇಕೆಂದು ಎಂದು ತಿಳಿಸಿದರು.
ಮೈಸೂರಿನ ಲಿಂಗಾಬುದಿ ಕೆರೆಗೆ ಕೊಳಚೆ ನೀರು ಸೇರುತ್ತಿದ್ದು ಇದನ್ನು ತಡೆಗಟ್ಟಬೇಕಿದೆ ಚಾಮುಂಡಿ ಬೆಟ್ಟದಲ್ಲಿ ಅರಣ್ಯ ಸಂಪತ್ತು ಇದೆ ಅದನ್ನು ಸಂರಕ್ಷಣೆ ಮಾಡಿ ಉಳಿಸಬೇಕು ಇಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಅವರು ಮಾತನಾಡಿ
ಭಾರತವು ವಿಶ್ವದ ಅತ್ಯಂತ ಪುರಾತನ ದೇಶಗಳಲ್ಲಿ ಒಂದಾಗಿದ್ದು, ನಮ್ಮ ಮಾನವ ಇತಿಹಾಸವು ಸಾವಿರಾರು ವರ್ಷಗಳಷ್ಟು ಹಿಂದಕ್ಕೆ ಹೋದರೆ, ನಮ್ಮ ಸಸ್ಯ ಮತ್ತು ಪ್ರಾಣಿ ಸಂಕುಲಗಳನ್ನೊಳಗೊಂಡ ಜೀವವೈವಿಧ್ಯದ ಇತಿಹಾಸವು ಲಕ್ಷಾಂತರ ವರ್ಷಗಳಷ್ಟು ಪುರಾತನವಾಗಿದೆ ಎಂದು ಹೇಳಿದರು .
ನಮ್ಮ ಹಳ್ಳಿಗಳಲ್ಲಿ ಹಾಗೂ ನಮ್ಮ ಹಿರಿಯರಾದ ತಾತ, ಅಜ್ಜಿಯಂದಿರಲ್ಲಿ ಮನೆಮದ್ದುಗಳ ದೊಡ್ಡ ಜ್ಞಾನದ ಭಂಡಾರವೇ ಇತ್ತು. ಆ ಮದ್ದುಗಳ ವೈಜ್ಞಾನಿಕ ಹಿನ್ನೆಲೆ ನಮಗೆ ತಕ್ಷಣಕ್ಕೆ ತಿಳಿಯದಿದ್ದರೂ, ಅವು ಯಾವುದೇ ಅಡ್ಡಪರಿಣಾಮಗಳಿಲ್ಲದೆ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದವು. ಇಂತಹ ಪಾರಂಪರಿಕ ಜ್ಞಾನವನ್ನು ದಾಖಲಿಸಿ, ಬಯೋಡೈವರ್ಸಿಟಿ ಕಾಯ್ದೆಯಡಿ ಅಕೌಂಟಿಂಗ್ ಮಾಡಿ, ಅದರ ಲಾಭವನ್ನು ಎಲ್ಲರಿಗೂ ಹಂಚುವುದು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಆಂಟಿ-ಮೈಕ್ರೋಬಿಯಲ್ ರೆಸಿಸ್ಟೆನ್ಸ್ ಹೆಚ್ಚಾಗುತ್ತಿರುವಾಗ, ಈ ಜೀವವೈವಿಧ್ಯ ಸಂಪತ್ತು ನಮಗೆ ದಿಕ್ಸೂಚಿಯಾಗಿ ನಮ್ಮ ಕೈಹಿಡಿಯಲಿದೆ. ಇಂದಿನ ಪರಿಸರವನ್ನು ನಾವು ರಕ್ಷಿಸಿದರೆ, ಮುಂದಿನ ಪೀಳಿಗೆಗೆ ಅದನ್ನೊಂದು ದೊಡ್ಡ ಬಳುವಳಿಯಾಗಿ ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಜೀವವೈವಿಧ್ಯ ಮಂಡಳಿಯ ಸಂಶೋಧಕಾರದ ಡಾ. ಪ್ರೀತಮ್ ಅವರು ಮಾತನಾಡಿ ಜೀವವೈವಿಧ್ಯ ಸಂರಕ್ಷಣೆಗೆ ಎಲ್ಲಾ ಮಟ್ಟದಲ್ಲೂ ಕ್ರಮ ಕೈಗೊಳ್ಳಲು ‘ಜನತಾ ಜೀವವೈವಿಧ್ಯ ದಾಖಲಾತಿ ಸಿದ್ಧಪಡಿಸುವುದು ಮಂಡಳಿಯ ಮುಖ್ಯ ಉದ್ದೇಶವಾಗಿದೆ.
ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಂಡುಬರುವ ಪ್ರಾಣಿಗಳು, ಪಕ್ಷಿಗಳು, ಗಿಡಮರಗಳು ಮತ್ತು ಸಾಂಪ್ರದಾಯಿಕ ಜ್ಞಾನವನ್ನು ಹೊಂದಿರುವ ವ್ಯಕ್ತಿಗಳ ಸಂಪೂರ್ಣ ಮಾಹಿತಿಯನ್ನು ಇದು ಒಳಗೊಂಡಿರುತ್ತದೆ.
ಪಾರಂಪರಿಕ ಜ್ಞಾನದ ರಕ್ಷಣೆ: ಹಳ್ಳಿಗಳಲ್ಲಿ ಯಾವ ವೈದ್ಯರು ಅಥವಾ ವ್ಯಕ್ತಿಗಳು ಸಾಂಪ್ರದಾಯಿಕ ಗಿಡಮೂಲಿಕೆಗಳನ್ನು ಬಳಸಿ ರೋಗಗಳಿಗೆ ಚಿಕಿತ್ಸೆ ನೀಡುತ್ತಾರೆ.ಔಷಧಿ ಕೊಡುತ್ತಾರೆ ಎಂಬ ಮಾಹಿತಿಯನ್ನು ಕಲೆಹಾಕಿ ಈ ರಿಜಿಸ್ಟರ್ನಲ್ಲಿ ದಾಖಲಿಸಲಾಗುತ್ತದೆ ಎಂದು ಹೇಳಿದರು.
ಕರ್ನಾಟಕ ರಾಜ್ಯವು ಅಪಾರವಾದ ಔಷಧೀಯ ಸಸ್ಯ ಸಂಪತ್ತನ್ನು ಹೊಂದಿದೆ. ವಿಶ್ವದ ಪ್ರಸಿದ್ಧ ಪಶ್ಚಿಮ ಘಟ್ಟಗಳ ಶೇಕಡಾ 40ರಷ್ಟು ಭಾಗ ನಮ್ಮ ರಾಜ್ಯದಲ್ಲಿದೆ. ಇದು ಮಾತ್ರವಲ್ಲದೆ, ಒಣ ಹಾಗೂ ಅರೆ-ಒಣ ಪ್ರದೇಶಗಳಲ್ಲೂ ವಿಶಿಷ್ಟ ಔಷಧೀಯ ಗುಣಗಳಿರುವ ಸಸ್ಯಗಳು ಬೆಳೆಯುತ್ತವೆ.
ಕಾಯ್ದೆಯ ಸೆಕ್ಷನ್ 37ರ ಪ್ರಕಾರ, ವಿಶೇಷ ಹಾಗೂ ಅಪರೂಪದ ಜೀವವೈವಿಧ್ಯ ಸಂಪತ್ತನ್ನು ಹೊಂದಿರುವ ಪ್ರದೇಶಗಳನ್ನು ‘ಜೀವವೈವಿಧ್ಯ ಪಾರಂಪರಿಕ ತಾಣಗಳು ಎಂದು ಘೋಷಿಸಲಾಗುತ್ತದೆ.ಪ್ರಸ್ತುತ ಕರ್ನಾಟಕದಲ್ಲಿ ಈಗಾಗಲೇ 5 ಪಾರಂಪರಿಕ ತಾಣಗಳನ್ನು ಘೋಷಿಸಲಾಗಿದೆ ಎಂದರು.
ಸಭೆಯಲ್ಲಿ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಪರಮೇಶ್ವರ್ ಸೇರಿದಂತೆ ಮೈಸೂರು ಜಿಲ್ಲೆಯ ಎಲ್ಲಾ ತಾಲೂಕಿನ ಯೋಜನಾ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
