ಪಬ್ಲಿಕ್ ಅಲರ್ಟ್ ನ್ಯೂಸ್:-ಮೈಸೂರಿನಲ್ಲಿ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ: 2.19 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಲಸಿಕೆ ನೀಡುವ ಗುರಿ
ಮೈಸೂರು, ಜೂನ್.28(ಕರ್ನಾಟಕ ವಾರ್ತೆ):- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮೈಸೂರು ಮಹಾನಗರ ಪಾಲಿಕೆ, ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಘಾಟನಾ
ಕಾರ್ಯಕ್ರಮ ಹಾಗೂ 2026ನೇ ಸಾಲಿನ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಇಂದು ನರಸಿಂಹರಾಜ ವಿಧಾನಸಭಾ ಕ್ಷೇತ್ರದ
ಶಾಸಕರಾದ ತನ್ವೀರ್ ಸೇಠ್ ಅವರು ನೆರವೇರಿಸಿದರು.
ದುಡಿಯಲು ಮನುಷ್ಯನಿಗೆ ಆರೋಗ್ಯ ಬಹಳ ಮುಖ್ಯ. ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿರುವ ನಮ್ಮ ಸರ್ಕಾರ ಬಡಾಮಕಾನ್ ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಾರಂಭಿಸಿದೆ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಬಡಾಮಕಾನ್ ಭಾಗದ ಜನರ ಹಲವು ವರ್ಷಗಳ ಪರಿಶ್ರಮ, ನಿರಂತರ ಪ್ರಯತ್ನ ಮತ್ತು ಒಂದು ದೊಡ್ಡ ಕನಸು ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಬೇಕು ಎಂಬುದಾಗಿತ್ತು. ಇಲ್ಲಿಗೆ ಮುಂಬರುವ ದಿನಗಳಲ್ಲಿ ತಜ್ಞ ವೈದ್ಯರು (Specialists) ಭೇಟಿ ನೀಡಿ ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಆ ನಂತರದ ಮುಂದಿನ ಯಾವುದೇ ಪ್ರಕ್ರಿಯೆ ಅಥವಾ ಚಿಕಿತ್ಸೆ ಇದ್ದರೂ, ಇಲ್ಲಿನ ವೈದ್ಯರು ನಿಮಗೆ ಸೂಕ್ತ ಸಲಹೆ ನೀಡುತ್ತಾರೆ , ತಾಯಿ ಮತ್ತು ಮಗುವಿನ (ಗರ್ಭಿಣಿಯರ ಮತ್ತು ಮಕ್ಕಳ) ವಿಶೇಷ ಚಿಕಿತ್ಸೆಗಾಗಿ ಆಸ್ಪತ್ರೆಯ ಮೊದಲ ಮಹಡಿಯಲ್ಲಿ (First floor) ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.
ಒಂದು ಕಾಲದಲ್ಲಿ ಪ್ರತಿ ಐದು ಮನೆಗಳಲ್ಲಿ ಕನಿಷ್ಠ ಒಬ್ಬ ಮಗುವಾದರೂ ಪೋಲಿಯೋ ಪೀಡಿತನಾಗಿ ನಮಗೆ ಕಾಣಿಸುತ್ತಿದ್ದನು. ಇಂದು ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಸರ್ಕಾರದ ಸತತ ಪ್ರಯತ್ನಗಳು ಮತ್ತು ಪ್ರಾರ್ಥನೆಗಳ ಫಲವಾಗಿ, ನಾವು ಈ ರೋಗವನ್ನು ನಮ್ಮ ಸಮಾಜದಿಂದ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿಗಳಾದ ಡಾ. ಪಿ.ಸಿ ಕುಮಾರಸ್ವಾಮಿ ಅವರು ಮಾತನಾಡಿ ಜಿಲ್ಲೆಯಲ್ಲಿ ಐದು ವರ್ಷದೊಳಗಿನ ಒಟ್ಟು 2,19,521 ಮಕ್ಕಳನ್ನು ಗುರುತಿಸಿ ಎಲ್ಲರಿಗೂ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಜಿಲ್ಲೆಯಾದ್ಯಂತ ಒಟ್ಟು 1,641 ಪೋಲಿಯೋ ಬೂತ್ಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಮೈಸೂರು ಪ್ರವಾಸಿ ತಾಣವಾಗಿರುವುದರಿಂದ ಮತ್ತು ಇಲ್ಲಿ ಜನರ ಸಂಚಾರ ಹೆಚ್ಚಿರುವುದರಿಂದ, ಚಾಮುಂಡಿ ಬೆಟ್ಟ, ಅರಮನೆ ಆವರಣ ಹಾಗೂ ಮೃಗಾಲಯ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ 49 ವಿಶೇಷ ಟ್ರಾನ್ಸಿಟ್ ಪಾಯಿಂಟ್ಗಳನ್ನು (Transit Points) ತೆರೆಯಲಾಗಿದೆ. ಬೂತ್ಗಳಲ್ಲಿ ಲಸಿಕೆ ಪಡೆಯದ ಮಕ್ಕಳನ್ನು ಪತ್ತೆ ಹಚ್ಚಲು ಸೋಮವಾರ, ಮಂಗಳವಾರ ಮತ್ತು ಬುಧವಾರದಂದು ಮನೆ ಮನೆ ಸಮೀಕ್ಷೆ ನಡೆಸಲಾಗುವುದು. ಇದಕ್ಕಾಗಿ 821 ತಂಡಗಳನ್ನು ರಚಿಸಲಾಗಿದ್ದು, ಸುಮಾರು 7 ಲಕ್ಷಕ್ಕೂ ಅಧಿಕ ಮನೆಗಳಿಗೆ ಈ ತಂಡಗಳು ಭೇಟಿ ನೀಡಲಿವೆ. ಕಾರ್ಯಕ್ರಮದ ಮೇಲ್ವಿಚಾರಣೆಗೆ 328 ಸುಪರ್ವೈಸರ್ಗಳನ್ನು ನೇಮಿಸಲಾಗಿದೆ. ಬಸ್ ನಿಲ್ದಾಣ ಹಾಗೂ ಚೆಕ್ಪೋಸ್ಟ್ಗಳಲ್ಲಿ ಸಂಚರಿಸುವ ಮಕ್ಕಳಿಗಾಗಿ 3 ಮೊಬೈಲ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.
ಲಸಿಕೆಯ ಗುಣಮಟ್ಟ ಮತ್ತು ತಾಪಮಾನ ಕಾಯ್ದುಕೊಳ್ಳಲು ಜಿಲ್ಲಾದ್ಯಂತ 168 ಐಎಲ್ಆರ್ ಡೀಪ್ ಫ್ರೀಜರ್ (ILR Deep Freezer) ಪಾಯಿಂಟ್ಗಳನ್ನು ಗುರುತಿಸಲಾಗಿದೆ. ಸಾರಿಗೆ ಸೌಲಭ್ಯಗಳಿಲ್ಲದ ಮತ್ತು ತಲುಪಲು ಕಷ್ಟಸಾಧ್ಯವಾಗಿರುವ ಹಾಡಿಗಳು ಸೇರಿದಂತೆ ಒಟ್ಟು 1,396 ಹೈ-ರಿಸ್ಕ್ (High Risk) ಪ್ರದೇಶಗಳನ್ನು ಗುರುತಿಸಿ, ಅಲ್ಲಿನ ಮಕ್ಕಳಿಗೂ ಲಸಿಕೆ ತಲುಪಿಸಲು ವಿಶೇಷ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಆರೋಗ್ಯ ಕೇಂದ್ರಗಳಲ್ಲಿ ಸೇವೆಗಾಗಿ ಎಂಬಿಬಿಎಸ್ ಪದವಿ ಪಡೆದಿರುವ ವೈದ್ಯರು, ಜಿಎನ್ಎಂ ತರಬೇತಿ ಹೊಂದಿರುವ ಇಬ್ಬರು ನರ್ಸಿಂಗ್ ಅಧಿಕಾರಿಗಳು ಹಾಗೂ ಒಬ್ಬರು ಲ್ಯಾಬ್ ಟೆಕ್ನಿಷಿಯನ್ ಒಳಗೊಂಡ ನುರಿತ ತಂಡವನ್ನು ಈಗಾಗಲೇ ನಿಯೋಜಿಸಲಾಗಿದೆ.
ನಗರ ವ್ಯಾಪ್ತಿಯಲ್ಲಿ ಒಟ್ಟು ಎಂಟು ವಿಭಿನ್ನ ವಿಭಾಗಗಳ ಸ್ಪೆಷಲಿಸ್ಟ್ಗಳು ಲಭ್ಯವಿದ್ದು, ಇವರಲ್ಲಿ ಪ್ರಮುಖವಾಗಿ ಸ್ತ್ರೀರೋಗ ಮತ್ತು ಹೆರಿಗೆ ತಜ್ಞರು, ಮಕ್ಕಳ ತಜ್ಞರು ಹಾಗೂ ಫಿಸಿಷಿಯನ್ಗಳನ್ನು ಒಳಗೊಂಡಂತೆ ವಾರದಲ್ಲಿ ಎರಡು ದಿನ ವಿಶೇಷ ತಜ್ಞರ ಸೇವೆ (Specialist Services) ನೀಡಲು ಆಯುಷ್ಮತಿ ಕ್ಲಿನಿಕ್ನಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ತಜ್ಞರನ್ನು ರೊಟೇಷನ್ ಆಧಾರದ ಮೇಲೆ ವಾರದಲ್ಲಿ ಮೂರು ದಿನ ನಿಯೋಜಿಸಲು ನಿರ್ಧರಿಸಲಾಗಿದೆ. ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವ ಪ್ರಕರಣಗಳನ್ನು ಎಸ್ಎಂಟಿಗೆ ರೆಫರ್ ಮಾಡಲು ರೆಫರಲ್ ಯೂನಿಟ್ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಮಾನ್ಯ ಶಾಸಕರು ಹಾಗೂ ಇಲ್ಲಿನ ಚುನಾಯಿತ ಪ್ರತಿನಿಧಿಗಳ ಆಶಯದಂತೆ, ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಿಎಚ್ಸಿ (ಸಮುದಾಯ ಆರೋಗ್ಯ ಕೇಂದ್ರ) ಆಗಿ ಮೇಲ್ದರ್ಜೆಗೇರಿಸುವ ಯೋಜನೆಯಿದೆ. ಇದರಲ್ಲಿ ‘ಆರ್ಸಿಎಚ್ ಟ್ರಯಾಡ್’ (RCH Triad) ವ್ಯವಸ್ಥೆಯಡಿ ಮಹಿಳಾ ತಜ್ಞರು, ಅರಿವಳಿಕೆ ತಜ್ಞರು (Anaesthetist) ಹಾಗೂ ಮಕ್ಕಳ ತಜ್ಞರನ್ನು ಒಳಗೊಂಡ ತಂಡವನ್ನು ಕಾಯಂ ಆಗಿ ಇಲ್ಲಿ ಲಭ್ಯವಾಗುವಂತೆ ಮಾಡಲು ಸೂಕ್ತ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನರಸಿಂಹರಾಜ ವಿಧಾನ ಪರಿಷತ್ ಶಾಸಕರಾದ ಸಿ.ಎನ್ ಮಂಜೇಗೌಡ, ಜಿಲ್ಲಾಧಿಕಾರಿಗಳಾದ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಲ್ಲಿಕಾರ್ಜುನ ಬಾಲದಂಡಿ ಅವರು ಉಪಸ್ಥಿತರಿದ್ದರು.
