ರೈತರ ನೋವನ್ನು ದೂರ ಮಾಡೋಣ; ಬರ ಪರೀಕ್ಷೆಯನ್ನು ಎದುರಿಸೋಣ: ಸಿಎಂ ಡಿ ಕೆ ಶಿವಕುಮಾರ್ ಕರೆ

latha prabhukumar
6 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ರೈತರ ನೋವನ್ನು ದೂರ ಮಾಡೋಣ; ಬರ ಪರೀಕ್ಷೆಯನ್ನು ಎದುರಿಸೋಣ: ಸಿಎಂ ಡಿ ಕೆ ಶಿವಕುಮಾರ್ ಕರೆ

ಕೇಂದ್ರ ತಂಡಕ್ಕೆ ಸುಳ್ಳು ಮಾಹಿತಿ ನೀಡದಿರಿ; ಬರ ಪರಿಶೀಲನಾ ಸಭೆಯಲ್ಲಿ ಸಿಎಂ ಸೂಚನೆ

ಬರ ನಿಖರ ಮಾಹಿತಿ ಕೊಡಿ; ದೂರವಾಣಿ ಸಂಖ್ಯೆ ನೀಡಿ

ಬೆಳೆವಿಮೆ ಅಕ್ರಮ, ಮೀಟರ್ ಬಡ್ಡಿ, ರೌಡಿ ನಿಗ್ರಹಕ್ಕೆ ಮುಂದಾಗಿ

ಅಧಿಕಾರಿಗಳು ಬಾಯಿಬಿಡಿ

ಎಸ್ ಐಅರ್; ಕರ್ನಾಟಕದ ಮತದಾರನ ಮತ ಕಳೆದು ಹೋಗಬಾರದು

ಬಾಗಲಕೋಟೆ, ಸೆ.04:

“ಇಡೀ ದೇಶದಲ್ಲೇ ಅತಿ ಹೆಚ್ಚು ಒಣ ಭೂಮಿ ಇರುವ ಎರಡನೇ ರಾಜ್ಯ ನಮ್ಮದು. ಬರ ಪ್ರಕೃತಿ ನಿಯಮ. ನಮಗೆ ಪ್ರಕೃತಿ ಒಡ್ಡಿರುವ ಪರೀಕ್ಷೆ. ರೈತರು ನೋವು ಪಡುತ್ತಿದ್ದಾರೆ‌. ಈ ಪರೀಕ್ಷೆಯಲ್ಲಿ ನಾವೆಲ್ಲರೂ ಪಾಸ್ ಆಗಬೇಕು.” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.

ಬಾಗಲಕೋಟೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಬರ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಶಿವಕುಮಾರ್ ಅವರು ಶುಕ್ರವಾರ ಮಾತನಾಡಿದರು.

“ರೈತರ ನೋವನ್ನು ಸರ್ಕಾರ ಹಾಗೂ ಅಧಿಕಾರಿ ವರ್ಗ ಸೇರಿ ದೂರ ಮಾಡಬೇಕು.‌ ಬರ ಪರಿಸ್ಥಿತಿ ಬಾಗಲಕೋಟೆ ಜಿಲ್ಲೆಯ ಸಾಕಷ್ಟು ಕಡೆ ಆವರಿಸಿದೆ. ಗದಗ ಜಿಲ್ಲೆಗೆ ಭೇಟಿ ನೀಡಿದ್ದೆ. ಅಲ್ಲಿ 1 ತಾಲ್ಲೂಕನ್ನು ಮಾತ್ರ ಬರ ಎಂದು ಘೋಷಣೆ ಮಾಡಲಾಗಿದೆ. ಗದಗ ಜಿಲ್ಲೆಯ 6 ತಾಲ್ಲೂಕುಗಳ ಪರಿಸ್ಥಿತಿ ಬಾಗಲಕೋಟೆಗಿಂತ ಭೀಕರವಾಗಿದೆ. ಇಲ್ಲಿ ಅರ್ಧ ಹಸಿರಿದೆ ಇನ್ನರ್ಧ ಇಲ್ಲ. ಈ ಪರಿಸ್ಥಿತಿಯನ್ನು ಕೇಂದ್ರ ಅಧ್ಯಯನ ತಂಡಕ್ಕೆ ಹೇಗೆ ಮನವರಿಕೆ ಮಾಡಿಕೊಡಬೇಕು ಎಂದು ಆಲೋಚಿಸಲಾಗುವುದು” ಎಂದು ಹೇಳಿದರು.

“ರೈತರಿಗೆ ಪರಿಹಾರವನ್ನು ಹೇಗೆ ನೀಡಬೇಕು ಎಂದು ಎಲ್ಲರೂ ಸೇರಿ ಸಮಾಲೋಚಿಸಬೇಕು. ಬಾಗಲಕೋಟೆ ಜಿಲ್ಲೆಯಲ್ಲಿ ಶೇ 40 ರಷ್ಟು ಮಳೆ ಕೊರತೆಯಾಗಿದೆ. ದೇಶದಲ್ಲಿ 50 ವರ್ಷಗಳಲ್ಲೇ ಭೀಕರ ಬರ ಬಂದಿದೆ. ಜೊತೆಗೆ ಬರದ ಮುನ್ಸೂಚನೆ ಬಗ್ಗೆ ಪ್ರಧಾನಮಂತ್ರಿಗಳೂ ಸಹ ಗಮನ ಸೆಳೆದಿದ್ದರು” ಎಂದರು.

“ಅಧಿಕಾರಿಗಳು ಕಚೇರಿಯಿಂದ ಹೊರಗೆ ಬರಬೇಕು. ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು. ಈಗಾಗಲೇ ಪ್ರತಿ ಕ್ಷೇತ್ರಗಳಿಗೂ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮಾಡಲು 1 ಕೋಟಿ ರೂ ನೀಡಲಾಗಿದೆ. ಜಿಲ್ಲಾಧಿಕಾರಿಗಳು ಪಿಡಿ ಖಾತೆಯಲ್ಲಿರುವ ಹಣವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಜಿಲ್ಲಾಧಿಕಾರಿ ಸಿಇಓ ಹಾಗು ಅಧಿಕಾರಿಗಳು ಕ್ಷೇತ್ರ ವೀಕ್ಷಣೆ ಮಾಡಬೇಕು” ಎಂದು ಸೂಚಿಸಿದರು.

ಕೇಂದ್ರ ತಂಡಕ್ಕೆ ಸುಳ್ಳು ಮಾಹಿತಿ ನೀಡದಿರಿ

“ನೀವು ಅದೃಷ್ಟವಂತರು. ಕೃಷ್ಣಾ ತುಂಬಿದೆ. ನಮ್ಮ ಕಡೆ ತುಂಗಾ, ಕಾವೇರಿ ತುಂಬಿಲ್ಲ‌. ನಾನು ರಾಜ್ಯಕ್ಕೆ ಒಳಿತಾಗಲಿ ಎಂದು ಕೂಡಲ ಸಂಗಮದಲ್ಲಿ ಪ್ರಾರ್ಥನೆ ಮಾಡಿದ್ದೇನೆ. ವಿರೋಧ ಪಕ್ಷದವರು ಸದನದಲ್ಲಿ ರಾಜಕೀಯ ಮಾಡಿ ಸಮಯ ಹಾಳು ಮಾಡಿದರು. ರೈತರ ಸಮಸ್ಯೆ ಬಗೆಹರಿಸಲು ವಿಶೇಷ ಅಧಿವೇಶನ ನಡೆಸುವೆ. ಶಾಸಕರಿಗೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡಬೇಕು. ಕೇಂದ್ರ ತಂಡ ಬಂದಾಗ ಅವರಿಗೆ ಅಧಿಕಾರಿಗಳು ಸುಳ್ಳು ಹೇಳಬಾರದು.‌ ವಾಸ್ತವ ಹೇಳಿ” ಎಂದು ಅಧಿಕಾರಿಗಳಿಗೆ ತಿಳಿ ಹೇಳಿದರು.

“ಮೇವು ಕಿಟ್ ನೀಡಿ. ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಅಧಿಕಾರಿಗಳು ಜನರನ್ನು ತಲುಪಬೇಕು‌. ಜಿಲ್ಲಾ ಕೇಂದ್ರದಲ್ಲೇ ಅಧಿಕಾರಿಗಳು ವಾಸ್ತವ್ಯ ಹೂಡಬೇಕು. ಆಪತ್ತಿಗೆ ಆದವನೇ ನೆಂಟ. ರೈತರಿಗೆ ಗೌರವದಿಂದ ಸ್ಪಂದಿಸಿ ಕೆಲಸಗಳ ಬಗ್ಗೆ ಮನವರಿಗೆ ಮಾಡಿಕೊಡಬೇಕು. ನೀವು ಜನರಿಗೆ ತಾಳ್ಮೆಯಿಂದ ಪ್ರತಿಕ್ರಿಯೆ ನೀಡಿದರೆ ಸರ್ಕಾರಕ್ಕೆ ಒಳ್ಳೆಯದಾಗಲಿದೆ” ಎಂದರು.

“ಮುಂಬರುವ 10 ನೇ ತಾರೀಕು ಇನ್ನೂ ಅನೇಕ ಜನಪರ ಯೋಜನೆಗಳನ್ನು ಘೋಷಣೆ ಮಾಡಲಾಗುವುದು. ಪ್ರಜಾಸೇವಾ ಇಲಾಖೆ ಮೂಲಕ ಹೊಸ ಇತಿಹಾಸ ಬರೆಯಲಾಗುತ್ತಿದೆ. ಜನರಿಗೆ ಸರ್ಕಾರದ ಮೇಲೆ ಕೋಪ ಬರಬಾರದು. ಇದಕ್ಕೆ ಅಧಿಕಾರಿಗಳ ಕೆಲಸ ಕಾರಣವಾಗಬಾರದು. ಅಧಿಕಾರಿಗಳು ಜನರ ಅರ್ಜಿಗಳಿಗೆ ಕಾನುನು ಪ್ರಕಾರವೇ ಪರಿಹಾರ ನೀಡಿ. ಅಕಸ್ಮಾತ್ ಏಕೆ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ ಎಂದು ತಾಳ್ಮೆಯಿಂದ ಮನವರಿಕೆ ಮಾಡಿಕೊಡಬೇಕು. ಪರಿಹಾರವಿದ್ದರೆ ತಿಳಿಸಬೇಕು” ಎಂದರು.

ಬೆಳೆವಿಮೆ ಅಕ್ರಮ, ಮೀಟರ್ ಬಡ್ಡಿ, ರೌಡಿ ನಿಗ್ರಹಕ್ಕೆ ಮುಂದಾಗಿ

“ಯುಕೆಪಿ ಪರಿಹಾರ ನೀಡಲು ಎಲ್ಲಿ ಹಣವಿದೆ ಎಂದು ಜರಡಿಯಾಡುತ್ತಿದ್ದೇನೆ. ಬೆಳೆ ವಿಮೆ ಬಗ್ಗೆ ಜಿಲ್ಲೆಯಲ್ಲಿ ಸಾಕಷ್ಟು ದೂರುಗಳು ಬಂದಿವೆ. ಏಜೆಂಟ್ ಗಳು ರೈತರ ದಾರಿ ತಪ್ಪಿಸುವ ಕೆಲಸಕ್ಕೆ ಕಡಿವಾಣ ಹಾಕಬೇಕು. ಕೆಲವು ಫೈನಾನ್ಸ್ ಕಂಪೆನಿಗಳ ಮೀಟರ್ ಬಡ್ಡಿ ದಂಧೆಯನ್ನು ನಿಲ್ಲಿಸಲು ಪೊಲೀಸರು ಮುಂದಾಗಬೇಕು. ಅಮಾಯಕರು ಈ ಜಾಲಕ್ಕೆ ಸಿಲುಕಿಕೊಳ್ಳದಂತೆ ನಿಗಾವಹಿಸಬೇಕು” ಎಂದು ಸೂಚನೆ ನೀಡಿದರು.

“ರೌಡಿ ನಿಗ್ರಹ ಪಡೆ ರಚನೆ ಮಾಡಲಾಗುತ್ತಿದೆ. ಪೊಲೀಸ್ ವರಿಷ್ಠಾಧಿಕಾರಿಗಳು ರೌಡಿಗಳ ಪೆರೇಡ್ ಮಾಡಿ ಎಚ್ಚರಿಕೆ ನೀಡಬೇಕು. ಹಳ್ಳಿ, ನಗರಗಳು ಶಾಂತಿಯಿಂದ ಇರಬೇಕು. ಪುಂಡರ ಹಾವಳಿಗೆ ಅವಕಾಶ ನೀಡಬಾರದು” ಎಂದರು.

“ತೇಗದ ಸಿರಿ ಯೋಜನೆಯಡಿ ರಸ್ತೆಗಳ ಪಕ್ಕದ ಜಮೀನಿನಲ್ಲಿ ತೇಗದ ಸಸಿ ನೆಟ್ಟು ರೈತರೇ ಅವುಗಳನ್ನು ಆರೈಕೆ ಮಾಡುವ ನೂತನ ಆಲೋಚನೆ ಸರ್ಕಾರಕ್ಕಿದೆ. ಇದರಿಂದ ಬರುವ ಲಾಭವನ್ನು ರೈತರಿಗೆ ‌ಶೇ 70, ಶೇ 30 ರಷ್ಟು ಸರ್ಕಾರಕ್ಕೆ ಹಂಚಲಾಗುತ್ತದೆ” ಎಂದರು.

“ಭೂಮಿ ಗ್ಯಾರಂಟಿ ಮೂಲಕ ಬಿ ಯಿಂದ ಎ ಖಾತೆ, ಇ ಖಾತೆ, ಪೋಡಿ ಹೀಗೆ ಭೂಮಿಗೆ ಸಂಬಂಧಿಸಿದಂತೆ. ಪ್ರತಿ ಜಿಲ್ಲೆಯಲ್ಲಿ 1-2 ಲಕ್ಷ ಇ ‌ಖಾತೆಗಳನ್ನು ಮಾಡಿಕೊಡಲಾಗಿದೆ. ಭೂ ಗ್ಯಾರಂಟಿ ಮೂಲಕ ಜನರ ಭೂ ಸಮಸ್ಯೆಗಳನ್ನು ಆದಷ್ಟು ಕಡಿಮೆ ಮಾಡಿ” ಎಂದು ಅಧಿಕಾರಿಗಳಿಗೆ ಸೂಚಿಸಿದರು.

“ಯಾವುದೇ ಫಲಾನುಭವಿಗೆ ಬರ ಪರಿಹಾರ ನೀಡುವಾಗ ಪಾರದರ್ಶಕತೆ ಇರಬೇಕು. ಯಾವುದೇ ಅಕ್ರಮವಾದರೂ ಅದಕ್ಕೆ ಅಧಿಕಾರಿಗಳೇ ಹೊಣೆ. ಕಾಮಗಾರಿಗಳಲ್ಲಿ ಡಬಲ್ ಬಿಲ್ ಮಾಡಿದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿಯದೇ ಕಾನೂನು ಪ್ರಕಾರ ಮಾಡಬೇಕು” ಎಂದರು.

“ಬಾಗಲಕೋಟೆ ಜಿಲ್ಲೆಯ ಅಧಿಕಾರಿಗಳು ಶಿಸ್ತಾಗಿ ಕೆಲಸ ಮಾಡುತ್ತಿದ್ದಾರೆ. ಕೃಷಿ ಇಲಾಖೆ ಮಾರ್ಗದರ್ಶನ ನೀಡಿದ್ದರು, ಜನ ಬೆಳೆ ಹಾಕಿ ಕೈ ಸುಟ್ಟು ಕೊಂಡಿದ್ದಾರೆ‌. ಏಕೆಂದರೆ ರೈತನಿಗೆ ಎಲ್ಲೋ ಬೆಳೆ ಬರಬಹುದು ಎನ್ನುವ ಭರವಸೆ ಇರುತ್ತದೆ‌. ಇದರಲ್ಲಿ ಅವರ ನಡೆ ತಪ್ಪು ಎಂದು ಹೇಳಲು ಆಗುವುದಿಲ್ಲ” ಎಂದರು.

ಬರ ನಿಖರ ಮಾಹಿತಿ ಕೊಡಿ; ದೂರವಾಣಿ ಸಂಖ್ಯೆ ನೀಡಿ

“ಕಂದಾಯ, ಸಮಾಜ ಕಲ್ಯಾಣ, ಪಿಡಿಓ ಸೇರಿದಂತೆ ಜನರ ನಡುವೆ ಕೆಲಸ ಮಾಡುವ ಅಧಿಕಾರಿಗಳು ಜಿಲ್ಲೆಯಲ್ಲಿ ಎಲ್ಲಿರುತ್ತಾರೆ. ಪ್ರವಾಸ ಕಾರ್ಯಕ್ರಮ, ದೂರವಾಣಿ ಸಂಖ್ಯೆ ಹಾಗೂ ‌ಎಲ್ಲದರ ಅಪ್‌ಡೇಟ್ ನಿಖರವಾಗಿ ಇರಬೇಕು. ಡ್ಯಾಶ್ ಬೋರ್ಡ್ ಮುಖಾಂತರ ಬರದ ಮಾಹಿತಿ ಸೇರಿದಂತೆ ಜನರಿಗೆ, ರೈತರಿಗೆ ಅನುಕೂಲವಾಗುವಂತಹ ಮಾಹಿತಿಗಳನ್ನು ನೀಡಬೇಕು” ಎಂದರು.

“ಭಾರತ್ ಜೋಡೋ ಸಂಘಗಳ ರಚನೆ ಪಕ್ಷಾತೀತವಾಗಿ ನಡೆಯಬೇಕು. ಯುವಕರು ನಮ್ಮ ಕಲೆ‌, ಕ್ರೀಡೆಗಳ ಬಗ್ಗೆ ಆಸಕ್ತಿ ತಳೆಯಬೇಕು. ಇದರ ರಚನೆಗೆ ಹೆಚ್ಚು ಮನವರಿಕೆ ಮಾಡಿಕೊಡಬೇಕು” ಎಂದರು.

“ಜಮೀನುಗಳನ್ನು ಗುರುತಿಸಿ ಪ್ರತಿ ತಾಲ್ಲೂಕಿನಲ್ಲಿ ನಿವೇಶನ ರಹಿತರಿಗೆ ನಿವೇಶನ ಹಂಚುವ ಕೆಲಸ ಮಾಡಬೇಕು. ಈಗಾಗಲೇ ಡಿಸಿಎಂ ಸೂಚನೆ ನೀಡಿದ್ದಾರೆ. ಪ್ರತಿ ತಾಲ್ಲೂಕಿನಲ್ಲಿ 50 ಸಾವಿರ ನಿವೇಶನಗಳನ್ನು ಹಂಚುವ ಗುರಿ ಸರ್ಕಾರದ್ದು. ಖಾಸಗಿ ಬಡಾವಣೆಗಳಲ್ಲಿನ ರಸ್ತೆಗಳನ್ನು ಸರ್ಕಾರಿ ರಸ್ತೆ ಎಂದು ಘೋಷಣೆ ಮಾಡಲಾಗಿದೆ” ಎಂದರು.

ಅಧಿಕಾರಿಗಳು ಬಾಯಿಬಿಡಿ

“ಒಬ್ಬ ಸಿಎಂ ನಿಮ್ಮ ನೋವು ಕೇಳಲು ಅವಕಾಶ ನೀಡಿದ್ದರೂ ಅಧಿಕಾರಿಗಳು ಬಾಯಿಯೇ ಬಿಡುತ್ತಿಲ್ಲವಲ್ಲ. ಮತ್ತೇಕೆ ನೀವುಗಳು ಅಧಿಕಾರಿಗಳಾಗಿದ್ದೀರಿ? ಎಂದ ಮುಖ್ಯಮಂತ್ರಿಯವರು, ಪ್ರತಿ ಸಾಲಿನಲ್ಲೂ ಕುಳಿತಿದ್ದ ಅಧಿಕಾರಿಗಳನ್ನು ಕೇಳುತ್ತಾ ಹೋದರು. ಅಧಿಕಾರಿಗಳ ಪ್ರತಿಕ್ರಿಯೆ ಬರದಿದ್ದಕ್ಕೆ “ಮತ್ತೊಮ್ಮೆ ನಿಮಗೆ ಈ ಅವಕಾಶ ಸಿಗಲಿದೆಯೇ?” ಎಂದು ಮರು ಪ್ರಶ್ನಿಸಿದರು.

“ವ್ಯವಸ್ಥೆಯನ್ನು ಒಂದೇ ಸಲ ರಿಪೇರಿ ಮಾಡಲು ಆಗುವುದಿಲ್ಲ ಎಂದು ನನಗೂ ತಿಳಿದಿದೆ. ನಾನು ಎರಡು ಮೂರು ತಿಂಗಳು ಸುಮ್ಮನೆ ಇದ್ದೇನೆ. ನಂತರ ನನ್ನ ಕಾರ್ಯ ವೈಖರಿಯನ್ನು ನಿಮಗೆ ಅರ್ಥ ಮಾಡಿಸಲಿದ್ದೇನೆ” ಎಂದು ಎಚ್ಚರಿಕೆ ನೀಡಿದರು.

“ಇನ್ನೊಮ್ಮೆ ಜಿಲ್ಲಾ ಪ್ರವಾಸ ಮಾಡಲಿದ್ದೇನೆ. ನಮ್ ಹಣೆಬರಹ ನಿಮ್ ಕೈಲಿದೆ, ನಮಗೆ ಐದು ವರ್ಷ ಅಧಿಕಾರ. ನೀವು ನಿವೃತ್ತಿ ಆಗುವ ತನಕ ಜನ ಸೇವೆ ಮಾಡಬಹುದು. ನೀವು ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಬೇಕು. ನಿಮ್ಮ ಕೆಲಸದ ಬಗ್ಗೆ ನಿಮಗೆ ಸ್ವಯಂ ತೃಪ್ತಿ ಆಗಬೇಕು” ಎಂದರು.

ಎಸ್ ಐಅರ್; ಕರ್ನಾಟಕದ ಮತದಾರನ ಮತ ಕಳೆದು ಹೋಗಬಾರದು

“ಜಿಲ್ಲೆಯಲ್ಲಿ 16,391 ಮತಗಳ ಮ್ಯಾಪಿಂಗ್ ಆಗಿಲ್ಲ. 12,364 ಜನರಿಗೆ ನೋಟಿಸ್ ಜಾರಿ ಆಗಿದೆ, 35,061 ನೋಟಿಸ್ ಜಾರಿಗೆ ಬಾಕಿ ಇದೆ. 31039 anomalies ಆಗಿದೆ. ಯಾರ ಮತವೂ ತಪ್ಪಿ ಹೋಗಬಾರದು. ಸ್ಥಳಾಂತರವಾದವರು ಅವರ ಇಚ್ಚೆಗೆ ಅನುಗುಣವಾಗಿ ಮಾಡಿಕೊಂಡಿರುತ್ತಾರೆ. ಮತ ತಪ್ಪಿ ಹೋದರೆ ಜನರಿಗೆ ನೀಡುತ್ತಿರುವ ಜನಕಲ್ಯಾಣ ಯೋಜನೆಗಳನ್ನು ನಿಲ್ಲಿಸಬೇಕಾಗಬಹುದು. ಕರ್ನಾಟಕದ ಮತದಾರ ತನ್ನದೇ ರಾಜ್ಯದ ಯೋಜನೆಗಳಿಂದ ವಂಚಿತನಾಗಬಾರದು. ಬಿಎಲ್ ಎ 2 ಗಳು ಕೆಲವೊಂದು ಕಡೆ ಸರಿಯಾಗಿ ಕೆಲಸ ಮಾಡಿಲ್ಲ. ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ” ಎಂದರು.

Share This Article
Leave a Comment