ಪಬ್ಲಿಕ್ ಅಲರ್ಟ್ ನ್ಯೂಸ್:-ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ವಿಭಾಗ ಮತ್ತು ಮೈಸೂರು ಜಿಲ್ಲೆ ವತಿಯಿಂದ ದಿನಾಂಕ : 05-09-2026 ರಂದು ಸಾಧಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು
ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಬಹುಮುಖಿ ಶಿಲ್ಪ ಖ್ಯಾತಿಯ ಎ. ಕಿರಣ್ ಸುಬ್ಬಯ್ಯ ಅವರು ಭಾಗವಹಿಸಿದ್ದರು.
ಸಾಂಪ್ರದಾಯಿಕ ಶಿಲ್ಪಗಳಲ್ಲಿನ ಅಂಶಗಳನ್ನು ಆಧುನಿಕ ನೆಲೆಯಲ್ಲಿ ದುಡಿಸಿಕೊಳ್ಳುವ ಈ ದೇಶ ಕಂಡ ಅಪರೂಪದ ಶಿಲ್ಪಿ ಕಿರಣ್ ಸುಬ್ಬಯ್ಯ. ಇವರು ಮೂಲತಃ ಮಡಿಕೇರಿಯವರಾದರು, ಹುಟ್ಟಿದ್ದು, ಬೆಳೆದಿದ್ದು, ಓದಿದ್ದು, ತಮ್ಮ ಕಲೆಯ ಕಾಯಕಕ್ಕೆ ಕರ್ಮಭೂಮಿಯನ್ನಾಗಿ ಮಾಡಿಕೊಂಡಿದ್ದು ಮೈಸೂರನ್ನು, ತಮ್ಮ ಕಾಲೇಜು ದಿನಗಳಲ್ಲಿ ಬೇಲೂರು, ಹಳೆಬೀಡು ದೇವಸ್ಥಾನದ ಅದ್ಭುತ ಕೆತ್ತನೆಗಳಿಂದ ಪ್ರಭಾವಿತರಾಗಿ, ತಾವು ಶಿಲ್ಪಿಯಾಗಬೇಕೆಂದು ಕನಸು ಕಂಡು, ಸಾಕಾರಗೊಳಿಸಿಕೊಂಡಿದ್ದಾರೆ. ಆರಂಭದಲ್ಲಿ ಪ್ರಕೃತಿ ಮತ್ತು ಅದರ ಛಾಯಾಚಿತ್ರಗಳು, ಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟವಾಗುತ್ತಿದ್ದ ವರ್ಣ ಚಿತ್ರ ಮತ್ತು ಶಿಲ್ಪ ಕೆತ್ತನೆಗಳೇ ಇವರಿಗೆ ಗುರುಗಳಾಗಿದ್ದವು.
ನಂತರ ಚಾಮರಾಜೇಂದ್ರ ವೃತ್ತಿ ಶಿಕ್ಷಣ ಶಾಲೆಯಲ್ಲಿ (ಈಗಿನ ಕಾವಾ) ಶಿಲ್ಪರಚನಾ ಸಾಧನ ಉಪಕರಣಗಳನ್ನು ಪ್ರಯೋಗಿಸುವ ವಿಧಿವಿಧಾನಗಳನ್ನು ಕರತಲಾಮಲಕ ಮಾಡಿಕೊಂಡರು. ಕಾರಣಾಂತರಗಳಿಂದ ಪದವಿ ಶಿಕ್ಷಣವನ್ನು ಅರ್ಧದಲ್ಲಿಯೇ ನಿಲ್ಲಿಸಿದರೂ ಶ್ರೇಷ್ಠ ಕಲಾವಿದನಾಗಬೇಕೆಂಬ ಛಲಬಿಡದೆ ಕಲಾಪಯಣವನ್ನು ಮುಂದುವರೆಸಿದರು. ಮನೆ ಬಾಗಿಲಿಗೆ ಒಲಿದು ಬಂದ ಉದ್ಯೋಗ ತೊರೆದು ಕಲೆಯನ್ನೇ ಉಸಿರಾಗಿಸಿಕೊಂಡು ಇದುವರೆಗೂ ಐನೂರಕ್ಕೂ ಹೆಚ್ಚು ಬಹುಮುಖ ಶಿಲ್ಪಕಲಾಕೃತಿಗಳನ್ನು ರಚಿಸಿ ಶಿಲ್ಪಕಲಾ ಜಗತ್ತಿನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಇವರ 135 ಹೆಡೆಗಳ ಆದಿಶೇಷ ಮತ್ತು ಅದರ ಪೀಠ ಉತ್ಕೃಷ್ಣ ಕಲಾಕೃತಿಯಾಗಿದೆ. ತಮ್ಮ ಮನೆಯ ಒಂದು ಭಾಗವನ್ನೇ “ಕೆ.ಎಸ್. ಮ್ಯೂಸಿಯಂ ಆಫ್ ಸ್ವಲ್ಪಚರ್” ನಾಗಿ ರೂಪಿಸಿ, ತಮ್ಮ ಕಲಾ ಕೃತಿಗಳನ್ನು ಪ್ರದರ್ಶಿಸುವ ಮೂಲಕ ಸಾಕಷ್ಟು ಯುವಕಲಾವಿದರ ಕಲಾದಾಹ ತಣಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.
ಶ್ರೀಯುತರ ಕೆತ್ತನೆ ಒಂದು ಮುಖವಲ್ಲ, ಹಲವಾರು ಮುಖ, ನಾಲ್ಕು ದಿಕ್ಕುಗಳಿಂದ ನೋಡಿದರೂ ನಾಲ್ಕು ಮುಖ ಶಿಲಾಕೆತ್ತನೇ ಕಾಣಿಸುವುದು ಇವರ ವಿಶೇಷತೆ. ಇವರ ಕಲಾಸೇವೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಗೌರವಿಸಿವೆ. ಅವುಗಳಲ್ಲಿ 2011 ರಲ್ಲಿ ಬೆಂಗಳೂರಿನಲ್ಲಿ ನಡೆದ (MANPHO) ಆರ್ಟ ಮತ್ತು ಕ್ರಾಫ್ಟ್ ಎಬಿಷನಲ್ಲಿ ಇವರನ್ನ “ಬಹುಮುಖಿ ಶಿಲ್ಪಗಳ ರಾಜ” ಎಂದು ಹಾಗೂ ಅದೇ ವರ್ಷ ಒಂಭತ್ತನೇ ಅಂತರಾಷ್ಟ್ರೀಯ ಗ್ರಾನೈಟ್ ಶಿಲಾಮೇಳದಲ್ಲಿ “ಬದುಕಿರುವ ಐತಿಹ್ಯ ಪುರುಷ ಎಂದು ಕರೆದು ಸನ್ಮಾನಿಸಿದ್ದಾರೆ. ಶ್ರೀಯುತರು ಕರ್ನಾಟಕ ಸರ್ಕಾರದ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ಕಿರಣ್ ಸುಬ್ಬಯ್ಯನವರ ಕಲಾಸಾಧನೆಯ ಹಿಂದೆ ರೋಚಕ ಕಥೆಯೇ ಆಡಗಿದೆ. “ಅಗೆದಷ್ಟು ಆಳ ಬಗೆದಷ್ಟು ನೀರು” ಎಂಬಂತೆ ಅವರ ಜೀವನ ಶೈಲಿ ಹಾಗೂ ಕೆತ್ತನೆ ಶೈಲಿ ಎರಡೂ ಮನನ ಯೋಗ್ಯವಾದದ್ದು. ದಿಟ್ಟತನ, ಏಕಾಗ್ರತೆ ಹಾಗೂ ಏಕಲವ್ಯನಂತೆ ಛಲಬಿಡದೇ ಸ್ವಂತ ಅಭ್ಯಾಸಗಳಿಂದ ಹೇಗೆ ಒಬ್ಬ ವ್ಯಕ್ತಿ ಶ್ರೇಷ್ಠ ಶಿಲ್ಪಗಳನ್ನು ಕೆತ್ತಬಹುದು ಎಂಬುದಕ್ಕೆ ಇವರೇ ಮಾದರಿ ವ್ಯಕ್ತಿಯಾಗಿರುತ್ತಾರೆ.
ಕಾರ್ಯಕ್ರಮದಲ್ಲಿ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನ ಡೀನ್ ದೇವರಾಜು ಎ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ವಿಭಾಗ ಜಂಟಿ ನಿರ್ದೇಶಕರಾದ ನಿರ್ಮಲಾ ಮಠಪತಿ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎಂ.ಡಿ.ಸುದರ್ಶನ್ ಭಾಗವಹಿಸಿದರು. ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನ ಆಡಳಿತಾಧಿಕಾರಿ (ಪ್ರ) ಜಯಶಂಕರ್ ಅವರು ಭಾಗವಹಿಸಿದ್ದರು.
