ಸಾರ್ವಜನಿಕರ ಸಮಸ್ಯೆ ಪರಿಹರಿಸಲು ಪ್ರಜಾ ಸೇವೆ ಇಲಾಖೆ : ಡಾ ಯತೀಂದ್ರ ಸಿದ್ದರಾಮಯ್ಯ

latha prabhukumar
2 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಸಾರ್ವಜನಿಕರ ಸಮಸ್ಯೆ ಪರಿಹರಿಸಲು ಪ್ರಜಾ ಸೇವೆ ಇಲಾಖೆ : ಡಾ ಯತೀಂದ್ರ ಸಿದ್ದರಾಮಯ್ಯ

ಮೈಸೂರು, ಸೆ 05 (ಕರ್ನಾಟಕ ವಾರ್ತೆ ):
ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸಿ ಅವರ ಸಮಸ್ಯೆಗಳನ್ನು ಪರಿಹರಿಸಿ ಸರ್ಕಾರದ ಯೋಜನೆಗಳನ್ನು ನಿಗದಿತ ಸಮಯದಲ್ಲಿ ಒದಗಿಸಲು ಪ್ರಜಾ ಸೇವಾ ಇಲಾಖೆ ಪ್ರಾರಂಭಿಸಲಾಗಿದೆ ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ತಿಳಿಸಿದರು.

ಜಿಲ್ಲಾಡಳಿತದ ವತಿಯಿಂದ ಇಂದು ಹುಣಸೂರು ತಾಲ್ಲೂಕಿನ ಡಾ: ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಪ್ರಜಾ ಸೇವಾ ಆಂದೋಲನ‌ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸೆಪ್ಟೆಂಬರ್ 5 ರಂದು ರಾಜ್ಯದಲ್ಲಿ ಹೊಸದಾಗಿ ಪ್ರಜಾ ಸೇವಾ ಇಲಾಖೆ ಆರಂಭವಾಗಿದೆ. ಜಿಲ್ಲೆಯ ಮೊದಲ ಪ್ರಜಾ ಸೇವೆ ಆಂದೋಲನ ಸಭೆ ಪ್ರಾರಂಭವಾಗಿದೆ. ಮೊದಲನೇ ಹಾಗೂ ಮೂರನೇ ಶನಿವಾರ ಸಚಿವರು ತಾಲ್ಲೂಕಿನ ಕೇಂದ್ರ ಸ್ಥಾನದಲ್ಲಿ ನಡೆಸಲಿದ್ದಾರೆ. ಶಾಸಕರು ಹೋಬಳಿ‌ ಕೇಂದ್ರದಲ್ಲಿ ಸಭೆ ನಡೆಸಲಿದ್ದಾರೆ ಎಂದರು.

ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಿ ನಿಗದಿತ ಸಮಯದಲ್ಲಿ ಪರಿಹರಿಸದೇ ಅವರನ್ನು ಅಲೆದಾಡಿಸಿದರೆ ಜನರು‌ ಆಡಳಿತ ವ್ಯವಸ್ಥೆಯ ವಿರುದ್ಧ ಸಿಡಿದೇಳುತ್ತಾರೆ ಹಾಗೂ ನಂಬಿಕೆ ಕಳೆದುಕೊಳ್ಳುತ್ತಾರೆ ಹಾಗೂ ಯಾರಿಗೂ ಉಳಿಗಾಲವಿಲ್ಲ ಎಂದರು.

ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕ‌ ಜಿ.ಡಿ ಹರೀಶ್ ಗೌಡ ಅವರು ಮಾತನಾಡಿ ಇಲಾಖೆ ಹಾಗೂ ಸಾರ್ವಜನಿಕರ ನಡುವೆ ಸಮನ್ವಯ ಸಾಧಿಸಲು ಪ್ರಜಾ ಸೇವಾ ಇಲಾಖೆ ಪ್ರಾರಂಭವಾಗಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಸಹಾಯಕರು ಹಾಗೂ ವಿದ್ಯುತ್ ಲೈನ್ ಮ್ಯಾನ್ ಗಳು ಸಾರ್ವಜನಿಕರಿಗೆ ಸ್ಪಂದಿಸಿದರೆ ಶೇ 90 ರಷ್ಟು ಸಾರ್ವಜನಿಕರ ಸಮಸ್ಯೆ ಪರಿಹಾರವಾಗುತ್ತದೆ ಎಂದರು.

ಮೊದಲ ಸಭೆಯಲ್ಲಿ ಸ್ವೀಕೃತವಾಗುವ ಅರ್ಜಿಗಳು ಮುಂದಿನ ಸಭೆಯಲ್ಲಿ ಪರಿಹಾರವಾಗಬೇಕು. ಪರಿಹಾರವಾಗದಿದ್ದಲ್ಲಿ ಅಧಿಕಾರಿಗಳು ಅದಕ್ಕೆ ಸಕಾರಣ ನೀಡಬೇಕು ಎಂದರು.

ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷೆ ಡಾ: ಪುಷ್ಪಾ ಅಮರನಾಥ್ ಅವರು ಮಾತನಾಡಿ ಮನೆ ಬಾಗಲಿಗೆ ಸರ್ಕಾರ, ಸರ್ವರಿಗೂ ಸಮಪಾಲು ಸಮಬಾಳು ಎಂಬ ಧ್ಯೇಯದೊಂದಿಗೆ ಸರ್ಕಾರ ಪ್ರಜಾಸೇವಾ ಇಲಾಖೆಯನ್ನು ಪ್ರಾರಂಭಿಸಿದೆ. ಪಂಚ ಗ್ಯಾರಂಟಿ ಯೋಜನೆಯ ಮೂಲಕ ಹುಣಸೂರು ತಾಲ್ಲೂಕಿನ ಅರ್ಹ ಫಲಾನುಭವಿಗಳಿ ಅಂದಾಜು 700 ಕೋಟಿ ರೂ ಹಣ ನೇರವಾಗಿ ಅವರ ಖಾತೆಗೆ ಜಮೆಯಾಗಿದೆ. ರಾಜ್ಯ ಸರ್ಕಾರ ಸರ್ವಾಜನಿಕರ ಕಷ್ಟಗಳನ್ನು ಪರಿಹರಿಸಿ ಅವರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಡುವ ಮೂಲಕ ಕೇಂದ್ರ ಸರ್ಕಾರಕ್ಕೆ ಮಾದರಿಯಾಗಲಿದೆ ಎಂದರು.

ಸಾರ್ವಜನಿಕರು ರಸ್ತೆ, ವಿದ್ಯುತ್ ಸಮಸ್ಯೆ, ಹದ್ದುಬಸ್ತು ಮನೆ ನಿರ್ಮಾಣ, ಜಾತಿ ಪ್ರಮಾಣ ಪತ್ರ ಇನ್ನಿತರೆ ಸಮಸ್ಯೆಗಳ ಕುರಿತು ಸಾರ್ವಜನಿಕರು ಸಚಿವರಿಗೆ ಅರ್ಜಿ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಐಶ್ವರ್ಯ, ಡಿ.ಸಿಎಫ್ ಸೀಮಾ, ತಾಲ್ಲೂಕು ಗ್ಯಾರಂಟಿ ಯೋಜನೆಯ ಅಧ್ಯಕ್ಷ ರಾಘು, ತಹಶೀಲ್ದಾರ್ ಮಂಜುನಾಥ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
Leave a Comment