ಪಬ್ಲಿಕ್ ಅಲರ್ಟ್ ನ್ಯೂಸ್:-ಆಹಾರ ಮೇಳದ ಆಹಾರ ಮಳಿಗೆಗಳ ಹಂಚಿಕೆ ಪಾರದರ್ಶಕವಾಗಿರಲಿ: ಯದುವೀರ್ ಒಡೆಯರ್
ಮೈಸೂರು, ಸೆಪ್ಟೆಂಬರ್ 24, 2026:
ಮುಂಬರುವ ಆಹಾರ ಮೇಳದ ಆಹಾರ ಮಳಿಗೆಗಳ ಹಂಚಿಕೆ ಪ್ರಕ್ರಿಯೆಯನ್ನು ನ್ಯಾಯಸಮ್ಮತ, ಪಾರದರ್ಶಕ ಹಾಗೂ ನಿಷ್ಪಕ್ಷಪಾತವಾಗಿ ನಡೆಸುವಂತೆ ಮೈಸೂರು–ಕೊಡಗು ಸಂಸದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮೈಸೂರು ಜಿಲ್ಲಾಧಿಕಾರಿಗಳಿಗೆ ಪತ್ರ ಬರಿದಿದ್ದಾರೆ
ಈ ಕುರಿತು ಮೈಸೂರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಸಂಸದರು, ತಮ್ಮ ಕಚೇರಿಗೆ ಆಹಾರ ಮೇಳದ ಮಳಿಗೆಗಳ ಹಂಚಿಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹಲವು ದೂರುಗಳು ಹಾಗೂ ಮನವಿಗಳು ಸಲ್ಲಿಕೆಯಾಗಿದ್ದು, ಮಳಿಗೆಗಳ ಹಂಚಿಕೆಯ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯ ಕುರಿತು ಆತಂಕಗಳು ವ್ಯಕ್ತವಾಗಿವೆ ಎಂದು ತಿಳಿಸಿದ್ದಾರೆ.
ಮೈಸೂರು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಪ್ರವಾಸಿಗರು ಮತ್ತು ಸಾರ್ವಜನಿಕರು ಆಹಾರ ಮೇಳಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ, ಮಳಿಗೆಗಳ ಹಂಚಿಕೆಯನ್ನು ಸ್ಪಷ್ಟವಾಗಿ ನಿರ್ಧರಿಸಲಾದ ಮಾನದಂಡಗಳು ಹಾಗೂ ಅರ್ಹತಾ ನಿಯಮಗಳ ಆಧಾರದ ಮೇಲೆ ನಡೆಸುವುದು ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಅರ್ಹತೆ ಹೊಂದಿರುವ ಹಾಗೂ ನೈಜ ಆಹಾರ ವ್ಯಾಪಾರಿಗಳಿಗೆ ಸಮಾನ ಅವಕಾಶ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಮಳಿಗೆಗಳ ಹಂಚಿಕೆ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಪಕ್ಷಪಾತ, ಅಕ್ರಮ ಅಥವಾ ಅವ್ಯವಹಾರಗಳಿಗೆ ಅವಕಾಶವಿಲ್ಲದಂತೆ ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕು ಎಂದು ಸಂಸದರು ಒತ್ತಾಯಿಸಿದ್ದಾರೆ.
“ಪಾರದರ್ಶಕ ಮತ್ತು ವಿಶ್ವಾಸಾರ್ಹ ಹಂಚಿಕೆ ಪ್ರಕ್ರಿಯೆಯು ಅರ್ಹ ವ್ಯಾಪಾರಿಗಳಿಗೆ ಸಮಾನ ಅವಕಾಶ ಕಲ್ಪಿಸುವುದರ ಜೊತೆಗೆ, ಆಹಾರ ಮೇಳದ ಘನತೆ ಹಾಗೂ ಸುಗಮ ನಿರ್ವಹಣೆಯನ್ನು ಕಾಪಾಡಲು ಸಹಕಾರಿಯಾಗಲಿದೆ,” ಎಂದು ಶ್ರೀ ಯದುವೀರ್ ಒಡೆಯರ್ ಅವರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಮಳಿಗೆಗಳ ಹಂಚಿಕೆ ಕುರಿತ ದೂರುಗಳು ಹಾಗೂ ಮನವಿಗಳನ್ನು ಪರಿಶೀಲಿಸಿ, ನ್ಯಾಯಸಮ್ಮತ ಮತ್ತು ಪಾರದರ್ಶಕ ಹಂಚಿಕೆ ಪ್ರಕ್ರಿಯೆ ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ಆಗ್ರಹ ಮಾಡಿದ್ದಾರೆ.
