ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ: ಸಿ.ಎಂ.ಸಿದ್ದರಾಮಯ್ಯ ಕರೆ*

Pratheek
5 Min Read

ಪಬ್ಲಿಕ್ ಅಲರ್ಟ್


ಮೈಸೂರು:  ಸಿನಿಮಾ ತಾರೆಯರು ಪರದೆ ಮೇಲೆ ಕಾಣುವಷ್ಟೇ ಮೌಲ್ಯಯುತವಾಗಿ ನಿಜ ಜೀವನದಲ್ಲೂ ನಡೆದುಕೊಳ್ಳಬೇಕು. ಡಾ.ರಾಜ್ ಕುಮಾರ್ ಪರದೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಅದೇ ಮೌಲ್ಯಗಳನ್ನು ಪಾಲಿಸಿದರು. ಈ ಕಾರಣಕ್ಕೇ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇಲ್ಲಿನ ಘಟಿಕೋತ್ಸವ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2018 ಮತ್ತು 19 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದರು. ಸಿನಿಮಾ ಅತ್ಯಂತ ಪ್ರಭಾವೀ ಮಾಧ್ಯಮ. ಸಮಾಜದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಆದ್ದರಿಂದ ಸಿನಿಮಾ ತಾರೆಯರು ಪರದೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಅಷ್ಟೇ ಮೌಲ್ಯಯುತವಾಗಿ ಬದುಕಬೇಕು. ಸಮಾಜ ತಿದ್ದುವ ಸಿನಿಮಾಗಳನ್ನು ಹೆಚ್ಚೆಚ್ಚು ತಯಾರಿಸಿ ಎಂದು ಕರೆ ನೀಡಿದರು.
ನಮ್ಮ ಸರ್ಕಾರ ಕನ್ನಡ ಸಿನಿಮೋದ್ಯಮದ ಆರೋಗ್ಯಕಾರಿ ಪ್ರಗತಿ ಮತ್ತು ಬೆಳವಣಿಗೆಗೆ ಸದಾ ಬೆಂಬಲ ನೀಡುತ್ತದೆ. ಕೇವಲ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ. ಒಳ್ಳೆ ಸಿನಿಮಾ ಮಾಡಿ, ಜನ ಮೆಚ್ಚುವ, ಸಮಾಜದ ಮೇಲೆ ಉತ್ತಮ‌ ಪರಿಣಾಮ ಬೀರುವ ಸಿನಿಮಾ ಮಾಡಿದರೆ ಸಬ್ಸಿಡಿ ನೀಡಿದ್ದಕ್ಕೂ ಸಾರ್ಥಕವಾಗುತ್ತದೆ. ಸದ್ಯ ಬಾಕಿ ಇರುವ ಎಲ್ಲಾ ವರ್ಷದ ಸಬ್ಸಿಡಿಯನ್ನೂ ಒಟ್ಟಿಗೇ ನೀಡಲಾಗುವುದು. ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಚಿತ್ರನಗರಿ ಮಾಡಲು  160 ಎಕರೆ ಜಾಗವನ್ನು ವಾರ್ತಾ ಇಲಾಖೆಗೆ ಹಸ್ತಾಂತರಿಸಲಾಗಿದೆ. ಎರಡು ತಿಂಗಳಲ್ಲಿ ಕಾನೂನು ಪ್ರಕ್ರಿಯೆ ಮುಗಿಸಿ ಚಿತ್ರನಗರಿ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ತಿಳಿಸಿದರು.
ಹಿಂದಿನ ಸರ್ಕಾರ ಆಯಾ ವರ್ಷವೇ ಚಲನಚಿತ್ರ ಪ್ರಶಸ್ತಿಗಳನ್ನು ವಿತರಿಸದ ಕಾರಣಕ್ಕೇ 2018ರ ಸಾಲಿನಿಂದ ಪ್ರಶಸ್ತಿಗಳು ಬಾಕಿ ಉಳಿದಿವೆ. ಇದು ತಪ್ಪು ಹೀಗಾಗಬಾರದು. ಆದ್ದರಿಂದ ನಮ್ಮ ಸರ್ಕಾರ ಇನ್ನು ಮುಂದೆ ಪ್ರತೀ ವರ್ಷ ಸಿನಿಮಾ ಪ್ರಶಸ್ತಿಗಳನ್ನು ನೀಡಲು ಸೂಚಿಸಲಾಗಿದೆ. ಆಯಾ ವರ್ಷದ ಸಿನಿಮಾಗಳಿಗೆ ಮರು ವರ್ಷವೇ ಕೊಟ್ಟರೆ ಮಾತ್ರ ಅರ್ಥಪೂರ್ಣ ಆಗಿರುತ್ತದೆ. ಇಂದು ಎರಡು ವರ್ಷದ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಕೆಲವೇ ದಿನಗಳಲ್ಲಿ ಹಳೆ ಸರ್ಕಾರದ ಅವಧಿಯ ಇನ್ನೆರಡು ವರ್ಷದ ಸಿನಿಮಾ ಪ್ರಶಸ್ತಿಗಳನ್ನು ನೀಡಲು ಸೂಚನೆ ನೀಡಿದ್ದೇನೆ. ಬಳಿಕ ಆಯಾ ವರ್ಷದ ಪ್ರಶಸ್ತಿಗಳನ್ನು ಮರು ವರ್ಷದ ಆರಂಭದಲ್ಲೇ ನೀಡಲು ವೇದಿಕೆಯಲ್ಲೇ ಸೂಚನೆ ನೀಡಿದರು.

ಮೊದಲೆಲ್ಲಾ ಸಿನಿಮಾಗಳ ಸಂಖ್ಯೆ ಕಡಿಮೆ ಇತ್ತು. ನಾವು ನೋಡಿದ್ದನ್ನೇ ಮತ್ತೆ ಮತ್ತೆ ನೋಡುತ್ತಿದ್ದೆವು. ಈಗ ಸಿಕ್ಕಾಪಟ್ಟೆ ಸಿನಿಮಾಗಳು ಬರುತ್ತಿವೆ. ಆದರೆ, ಸಾಮಾಜಿಕ ಕಾಳಜಿ ಮತ್ತು ಗುಣಮಟ್ಟ ಕಡಿಮೆ ಆಗುತ್ತಿದೆ. ಆದ್ದರಿಂದ ಈಗ ಸಿನಿಮಾ ನೋಡುವುದನ್ನೇ ಕಡಿಮೆ ಮಾಡಿದ್ದೇನೆ. ಸಿನಿಮಾ ಹೆಚ್ಚು ಪ್ರಭಾವ ಇರುವ, ಸಮಾಜದ ಮೇಲೆ ಹೆಚ್ಚು ಪರಿಣಾಮ ಬೀರುವ ಮಾಧ್ಯಮ. ಸಾಮಾಜಿಕ ಕಳಕಳಿ ಇರುವ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಸಿನಿಮಾಗಳು ಹೆಚ್ಚು ಹೆಚ್ಚು ನಿರ್ಮಾಣವಾಗಬೇಕು. ಹಿಂದೆ ನಟ ನಟಿಯರು, ಕಲಾವಿದರು, ನಿರ್ಮಾಪಕರು ಹಾಗೂ ನಿರ್ದೇಶಕರು ಕಡಿಮೆ ಇದ್ದರು. ಆಗ ವರ್ಷಕ್ಕೆ ಹತ್ತಾರು ಸಿನಿಮಾಗಳು ಬಿಡುಗಡೆ ಆಗುತ್ತಿದ್ದವು. ಆಗ ನೋಡಿದ ಚಿತ್ರಗಳನ್ನೇ ನೋಡಬೇಕಿತ್ತು. ಈಗ ವರ್ಷಕ್ಕೆ ನೂರಾರು ಚಿತ್ರಗಳು ಬಿಡುಗಡೆ ಆಗುತ್ತವೆ. ಆದರೆ ಈಗ ಸಿನಿಮಾ ನೋಡಲು ಸಮಯ ಇಲ್ಲ ಎಂದರು.
ನಮ್ಮ ಸರ್ಕಾರ ಕನ್ನಡ ಚಲನಚಿತ್ರ ಉದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ಹಾಗೂ ಸಹಾಯಧನ ನೀಡುವ ಮೂಲಕ ಚಲನ ಚಿತ್ರ ಬೆಳವಣಿಗೆಗೆ ಸಹಕರಿಸುತ್ತದೆ.  ಚಲನ ಚಿತ್ರ ನಟ ನಟಿಯರು ಪರದೆಯ ಮೇಲೆ ಇರುವ ಹಾಗೆಯೇ ತಮ್ಮ ನಿಜ ಜೀವನದಲ್ಲೂ ಉತ್ತಮ ಅಂಶಗಳೊಂದಿಗೆ ನಡೆದುಕೊಳ್ಳಬೇಕು. ಚಲನ ಚಿತ್ರ ನಟ ನಟಿಯರು ಸಮಾಜಕ್ಕೆ ಮಾದರಿಯಾಗಿ ಇರಬೇಕು. ಮೈಸೂರು ನಗರದಲ್ಲಿ ಚಿತ್ರ ನಗರಿ ಮಾಡಲು 160 ಎಕರೆ ಪ್ರದೇಶವನ್ನು ಈಗಾಗಲೇ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ನೀಡಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ಡಿ ಪಿ ಆರ್ ಪೂರ್ಣವಾಗುತ್ತದೆ. ಹೈದರಾಬಾದ್ ನಲ್ಲಿ ಇರುವ ರಾಮೋಜಿರಾವ್ ಫಿಲ್ಮ್ ಸಿಟಿ ತರವೇ ಇಲ್ಲಿಯೂ ಚಿತ್ರ ನಗರಿ ನಿರ್ಮಾಣ ಆಗುತ್ತದೆ ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ಮಾತನಾಡಿ, ಸಿದ್ದರಾಮಯ್ಯ ಅವರು  ರಾಜಕೀಯಕ್ಕೆ ಬಂದ ಮೊದಲು ಕನ್ನಡ ಕಾವಲು ಸಮಿತಿಯ ಅಧ್ಯಕರಾಗಿದ್ದರು. ಆಗ ಕನ್ನಡವನ್ನು ಉಳಿಸಿ ಬೆಳೆಸುವ ಕಾಯಕವನ್ನು ಮಾಡಿದರು. ಕನ್ನಡ ಚಲನ ಚಿತ್ರೋತ್ಸವಕ್ಕೆ ಹೆಚ್ಚಿನ ಒತ್ತು ನೀಡಿದರು. ಕನ್ನಡ ಚಲನ ಚಿತ್ರ ಹೆಚ್ಚು ನೆನೆಸಿಕೊಳ್ಳುವುದು ಮೇರು ನಟ ಡಾ.ರಾಜ್ ಕುಮಾರ್ ಅವರನ್ನು. ಕನ್ನಡ ಚಿತ್ರೋದ್ಯಮ ಕನ್ನಡ ನಾಡು ನುಡಿಯನ್ನು ಸಂರಕ್ಷಿಸುವ ಕಾರ್ಯವನ್ನು ಮಾಡುತ್ತಿದೆ. ತನ್ನದೇ ಆದ ಕಲೆ ಸಾಹಿತ್ಯ, ಸಂಗೀತದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುವ ಕಾರ್ಯವನ್ನು ಮಾಡುತ್ತಿದೆ. ಚಿತ್ರೀಕರಣ ಮಾಡಲು ಉತ್ತಮ ಸನ್ನಿವೇಶಗಳು ಹಾಗೂ ಉತ್ತಮ ಪರಿಸರವನ್ನು ಮೈಸೂರು ಹೊಂದಿದೆ ಎಂದರು.
ಮೈಸೂರು ಜಿಲ್ಲೆಯಲ್ಲಿ ಚಿತ್ರ ನಗರಿಯನ್ನು ನಿರ್ಮಿಸಲು ನಾನು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದ್ದೆ. ನಂಜನಗೂಡು ತಾಲ್ಲೂಕಿನ ಹುಯಿಲಾಳು ಬಳಿ ನೂರಾರು ಎಕರೆ ಜಾಗದಲ್ಲಿ ಚಿತ್ರ ನಗರಿ ಮಾಡಲು ಡಿಪಿಆರ್ ಆಗಿದೆ. ಚಿತ್ರ ನಗರಿ ಪ್ರಾರಂಭವಾಗುತ್ತದೆ. ಈಗ ತಾನೆ ಮೈಸೂರಿನಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾವನ್ನು ಅದ್ದೂರಿಯಾಗಿ ಆಚರಿಸಲಾಗಿದೆ. ಈ ಬಾರಿಯ ದಸರಾ ಅತ್ಯುತ್ತಮ ದಸರಾ ಎಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ದಸರಾ ಏಕತೆಯ ಪ್ರತಿಕಾ. ನಾವೆಲ್ಲರೂ ಒಂದೇ ಜಾತಿ, ಒಂದೇ ಸಂಸ್ಕೃತಿ ಆಚರಣೆ ಎಂಬುದನ್ನು ಸಾರುತ್ತದೆ ಎಂದು ತಿಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ನಿಂಬಾಳ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಳಜಿಯಿಂದ ಹಿಂದೆಯಿಂದ ಉಳಿದಿದ್ದ ಪ್ರಶಸ್ತಿಗಳನ್ನು ನೀಡಲು ನನಗೆ ಸೂಚನೆ ನೀಡಿದರು. ಆಯ್ಕೆ ಸಮಿತಿಯನ್ನು ರಚಿಸಿ ಪ್ರಶಸ್ತಿಗೆ ಬಂದಿದ್ದ ಎಲ್ಲಾ ಚಲನಚಿತ್ರಗಳನ್ನು ಆಯ್ಕೆ ಸಮಿತಿಯ ಸದಸ್ಯರು ಪ್ರತಿದಿನ 4 ಸಿನಿಮಾದಂತೆ ಹಲವು ತಿಂಗಳುಗಳ ಕಾಲ  ಶ್ರಮ ವಹಿಸಿ ನೋಡಿ ಆಯ್ಕೆ ಮಾಡಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳು. ನಮ್ಮ ಇಲಾಖೆಯ ಕಾರ್ಯದರ್ಶಿಗಳಾದ ಬಿ ಬಿ ಕಾವೇರಿ ಅವರು ಹಾಗೂ ಮಾನ್ಯ ಮುಖ್ಯಮಂತ್ರಿಗಳ ಮಧ್ಯಮ ಸಲಹೆಗಾರರಾದ ಪ್ರಭಾಕರ್ ಅವರು ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ ಎಂದು ಅಭಿನಂದಿಸಿದರು.
2018 ಮತ್ತು 2019 ಸಾಲಿನ ಪ್ರಶಸ್ತಿ ಪಡೆದ ಚಿತ್ರಗಳ ಕುರಿತ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. 2018 ಮತ್ತು 2019 ನೇ ಸಾಲಿನಲ್ಲಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದರಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರಾದ ಸುನೀಲ್ ಬೋಸ್, ಶಾಸಕರಾದ ಕೆ ಹರೀಶ್ ಗೌಡ, ಡಿ ರವಿಶಂಕರ್, ವಿಧಾನ ಪರಿಷತ್ ಸದಸ್ಯರಾದ ಡಾ. ಡಿ ತಿಮ್ಮಯ್ಯ, ಸಿ ಎನ್ ಮಂಜೇಗೌಡ, ಕೆ ಶಿವಕುಮಾರ್ , ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮರಿಸ್ವಾಮಿ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ರಂಗಸ್ವಾಮಿ, ಕರ್ನಾಟಕ ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರಾಮಪ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿಗಳಾದ ಬಿ ಬಿ ಕಾವೇರಿ, ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರು ಹಾಗೂ ಕಲಾವಿದರಾದ ಸಾಧುಕೋಕಿಲ, ಕರ್ನಾಟಕ ವಾಣಿಜ್ಯ ಚಲನಚಿತ್ರ ಮಂಡಳಿಯ ಅಧ್ಯಕ್ಷರಾದ ನರಸಿಂಹುಲು, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಎಸ್ ಯುಕೇಶ್ ಕುಮಾರ್, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶೇಕ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಸೇರಿ ಇನ್ನಿತರರು ಉಪಸ್ಥಿತರಿದ್ದರು.

Share This Article
Leave a Comment