ಪಬ್ಲಿಕ್ ಅಲರ್ಟ್ ನ್ಯೂಸ್:-ಮೋಟರು ವಾಹನ ಮೂಲಸೌಕರ್ಯ ಉಪಕರ ಜಾರಿ ನಿರ್ಧಾರ ವಾಪಸ್
ಮೈಸೂರು, ಏ.03(ಕರ್ನಾಟಕ ವಾರ್ತೆ):- ನಗರದ ಆಸ್ತಿ ತೆರಿಗೆಯೊಂದಿಗೆ ವಿಧಿಸಲು ಉದ್ದೇಶಿಸಲಾಗಿದ್ದ ‘ಮೋಟಾರು ವಾಹನ ಮೂಲಸೌಕರ್ಯ ಉಪಕರ’ವನ್ನು (Vehicle Infrastructure Cess) ಕೈಬಿಡಲು ನಗರ ಪಾಲಿಕೆ ನಿರ್ಧರಿಸಿದೆ. ಸಾರ್ವಜನಿಕ ವಲಯದಿಂದ ವ್ಯಕ್ತವಾದ ತೀವ್ರ ಆಕ್ಷೇಪಣೆ ಹಾಗೂ ಪ್ರತಿರೋಧದ ಹಿನ್ನೆಲೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ನಗರದ ರಸ್ತೆ ಸಂಚಾರ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ 1976ರ ಕಾಯ್ದೆಯ ಅಡಿಯಲ್ಲಿ ಪ್ರತಿ ವಾಹನದ ಮೇಲೆ ವಾರ್ಷಿಕವಾಗಿ ನಿರ್ದಿಷ್ಟ ಮೊತ್ತದ ಉಪಕರ ವಿಧಿಸಲು ಪಾಲಿಕೆಯ ಸಾಮಾನ್ಯ ಕೌನ್ಸಿಲ್ ಸಭೆಯಲ್ಲಿ ಈ ಮೊದಲು ತೀರ್ಮಾನಿಸಲಾಗಿತ್ತು. ಇದರ ಅನ್ವಯ
ದ್ವಿಚಕ್ರ ವಾಹನಗಳಿಗೆ: ₹100
ತ್ರಿಚಕ್ರ ವಾಹನಗಳಿಗೆ: ₹200
ನಾಲ್ಕು ಚಕ್ರದ ವಾಹನಗಳಿಗೆ: ₹500
ಈ ಮೊತ್ತವನ್ನು 2026-27ನೇ ಸಾಲಿನ ಆಸ್ತಿ ತೆರಿಗೆಯೊಂದಿಗೆ ವಸೂಲಿ ಮಾಡಲು ನಿರ್ಧರಿಸಿ, ಕಳೆದ ಮಾರ್ಚ್ 23 ರಂದು ಸಾರ್ವಜನಿಕ ಪ್ರಕಟಣೆಯನ್ನು ಸಹ ಹೊರಡಿಸಲಾಗಿತ್ತು.
ಈ ಹೊಸ ತೆರಿಗೆ ಪದ್ಧತಿಯ ಕುರಿತು ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಆಸ್ತಿ ತೆರಿಗೆಯೊಂದಿಗೆ ವಾಹನ ತೆರಿಗೆಯನ್ನು ಸೇರಿಸುವುದು ಅವೈಜ್ಞಾನಿಕ ಎಂಬ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಪ್ರಕ್ರಿಯೆಯ ಸಾಧಕ-ಬಾದಕಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಆಡಳಿತಾಧಿಕಾರಿಗಳು, ಪ್ರಸ್ತುತ ಈ ಯೋಜನೆಯನ್ನು ಜಾರಿಗೊಳಿಸದಿರಲು ತೀರ್ಮಾನಿಸಿದ್ದಾರೆ.
ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ಜನರ ಆಕ್ಷೇಪಣೆಗಳನ್ನು ಗೌರವಿಸಿ, ಸದ್ಯಕ್ಕೆ ಮೋಟಾರು ವಾಹನ ಉಪಕರ ವಸೂಲಾತಿ ಪ್ರಕ್ರಿಯೆಯನ್ನು ಕೈಬಿಡಲಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
