ವಿಶ್ವ ಪ್ರವಾಸೋದ್ಯಮ ದಿನಾಚರಣೆ ಉದ್ಘಾಟನೆ: ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ — ಕೆ.ಜೆ. ಜಾರ್ಜ್

latha prabhukumar
2 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ವಿಶ್ವ ಪ್ರವಾಸೋದ್ಯಮ ದಿನಾಚರಣೆ ಉದ್ಘಾಟನೆ: ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ — ಕೆ.ಜೆ. ಜಾರ್ಜ್

ಮೈಸೂರು ಸೆ. 27 (ಕರ್ನಾಟಕ ವಾರ್ತೆ):- ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಹಾಗೂ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳ ಲಾಭದಾಯಕ ನಿರ್ವಹಣೆಗೆ ಸರ್ಕಾರ ಬದ್ಧವಾಗಿದೆ ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರು ಹೇಳಿದರು.

ಇಂದು ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಮೈಸೂರು ಅರಮನೆ ಆವರಣದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರವು ಪ್ರವಾಸೋದ್ಯಮ ಕ್ಷೇತ್ರಗಳ ಮೂಲಭೂತ ಸೌಕರ್ಯಗಳನ್ನು ಉದ್ಯಮ ಎಂದು ಘೋಷಿಸಿದ್ದು, ಹೊಸ ಪ್ರವಾಸೋದ್ಯಮ ನೀತಿಯನ್ನು ಪ್ರಕಟಿಸಲಾಗಿದೆ. ಇದರಿಂದಾಗಿ ಹೂಡಿಕೆದಾರರಿಗೆ ದೀರ್ಘಾವಧಿಯ ಹೂಡಿಕೆಗೆ ಹಾಗೂ ಹೆಚ್ಚಿನ ಸೌಲಭ್ಯಗಳಿಗೆ ಅವಕಾಶ ಸಿಗಲಿದೆ ಎಂದು ಹೇಳಿದರು.

ಇತ್ತೀಚೆಗೆ ದುಬೈಗೆ ಭೇಟಿ ನೀಡಿದ್ದಾಗ ಭಾರತೀಯರು ಕರ್ನಾಟಕದ ಪ್ರವಾಸೋದ್ಯಮದಲ್ಲಿ ಹೂಡಿಕೆ ಮಾಡಲು ತೀವ್ರ ಆಸಕ್ತಿ ತೋರಿಸಿದ್ದಾರೆ. ಅವರಿಗೆ ‘ರೆಡ್ ಕಾರ್ಪೆಟ್’ ಸ್ವಾಗತ ನೀಡಿ, ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.

ದಸರಾ ವೀಕ್ಷಣೆಗೆ ಆಗಮಿಸುವ ವಿದೇಶಿ ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ಪ್ರತ್ಯೇಕ ಆಸನ ಹಾಗೂ ಗೌರವಪೂರ್ವಕ ಸೌಲಭ್ಯಗಳನ್ನು ಕಲ್ಪಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಕರಾವಳಿ, ಮಲೆನಾಡು, ಹಂಪಿ, ಬಾದಾಮಿ, ಬಿಜಾಪುರ, ಕೊಡಗು, ಚಿಕ್ಕಮಗಳೂರು ಮತ್ತು ಯುನೆಸ್ಕೋ ಗುರುತಿಸಿರುವ ಪರಂಪರೆ ತಾಣಗಳನ್ನು ಆದ್ಯತೆಯ ಮೇರೆಗೆ ಅಭಿವೃದ್ಧಿಪಡಿಸಲಾಗುತ್ತಿದೆ. ಕರ್ನಾಟಕವು ದೇವರ ಜನರಿರುವ ನಾಡು ಎಂದು ಅವರು ಎಂದು ಹೇಳಿದರು.

ಬರಗಾಲದ ವಾತಾವರಣವಿದ್ದರೂ ನಾಡಹಬ್ಬವನ್ನು ದೇವರಿಗೆ ಪ್ರೀತಿಯಾಗುವಂತೆ ಭಕ್ತಿಯಿಂದ ಆಚರಿಸಿದರೆ ಮುಂಬರುವ ದಿನಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹೇಳಿದರು.

ನರಸಿಂಹರಾಜ ಕ್ಷೇತ್ರ ಶಾಸಕರಾದ ತನ್ವೀರ್ ಸೇಠ್ ಅವರು ಮಾತನಾಡಿ ಮೈಸೂರು ಪ್ರವಾಸೋದ್ಯಮವನ್ನು ಉತ್ತೇಜಿಸಲು ಕೇವಲ ದಸರಾ ನವರಾತ್ರಿಯ ಸಮಯದಲ್ಲಷ್ಟೇ ಅಲ್ಲದೆ, ವರ್ಷದ 365 ದಿನಗಳ ಕಾಲ ನಿಗದಿತ ಸಮಯದಲ್ಲಿ ಕನಿಷ್ಠ ಅರ್ಧ ಗಂಟೆಯಾದರೂ ಅರಮನೆಗೆ ದೀಪಾಲಂಕಾರ ಮಾಡುವ ವ್ಯವಸ್ಥೆ ಜಾರಿಗೆ ಬರಬೇಕು. ಇದರಿಂದ ಪ್ರವಾಸಿಗರು ರಾತ್ರಿ ವೇಳೆ ಮೈಸೂರಿನಲ್ಲಿ ತಂಗಲು ಪ್ರೇರೇಪಣೆಯಾಗುತ್ತದೆ ಎಂದು ಮನವಿ ಮಾಡಿದರು.

ದಕ್ಷಿಣ ಕರ್ನಾಟಕದ ಮೈಸೂರು, ಕೊಡಗು, ಚಾಮರಾಜನಗರ, ಹಾಸನ ಹಾಗೂ ಮಂಡ್ಯ ಹೀಗೆ ಐದು ಜಿಲ್ಲೆಗಳನ್ನು ಒಳಗೊಂಡ ‘ಪ್ರವಾಸೋದ್ಯಮ ಸರ್ಕ್ಯೂಟ್ ರೂಪಿಸಬೇಕು. ಇದರಿಂದ ಪ್ರವಾಸಿಗರಿಗೆ ಸೂಕ್ತ ಮಾರ್ಗದರ್ಶನ ಸಿಗಲಿದ್ದು, ಈ ಭಾಗದ ದೇವಸ್ಥಾನಗಳು, ಅಭಯಾರಣ್ಯಗಳು, ಮೃಗಾಲಯ ಹಾಗೂ ಕೆ.ಆರ್.ಎಸ್ ನಂತಹ ಪ್ರಮುಖ ಪ್ರವಾಸಿ ತಾಣಗಳನ್ನು ಸುಲಭವಾಗಿ ವೀಕ್ಷಿಸಲು ನೆರವಾಗುತ್ತದೆ ಎಂದರು.

ಮೈಸೂರಿನ ಸಾಂಪ್ರದಾಯಿಕ ಟಾಂಗಾ ಸವಾರಿಗೆ ಹೆಚ್ಚಿನ ಉತ್ತೇಜನ ನೀಡಿ, ಪ್ರವಾಸಿಗರನ್ನು ಸುಗಮವಾಗಿ ನಗರ ಪರ್ಯಟನೆ ಮಾಡಿಸಲು ನೆಟ್‌ವರ್ಕಿಂಗ್ ವ್ಯವಸ್ಥೆ ರೂಪಿಸಬೇಕಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹೆಚ್.ಡಿ. ಕೋಟೆ ಶಾಸಕರು ಹಾಗೂ ಅರಣ್ಯ ವಸತಿ ನಿಗಮದ ಅಧ್ಯಕ್ಷ ಅನಿಲ್ ಚಿಕ್ಕಮಾದು, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಅಯೂಬ್ ಖಾನ್, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಡಾ. ವಿ. ರಾಮ್ ಪ್ರಸಾತ್ ಮನೋಹ‌ರ್, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ.ಜಿ, ಪೊಲೀಸ್ ಕಮಿಷನ‌ರ್ ಸೀಮಾ ಲಾಟ್ಕರ್,ಮಹಾನಗರ ಪಾಲಿಕೆಯ ಆಯುಕ್ತೆ ಎಂ. ಕೆ. ಸವಿತಾ, ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ಮತ್ತು ಹೋಟೆಲ್ ಮಾಲೀಕರ ಸಂಘ, ಚೇಂಬರ್ ಆಫ್ ಕಾಮರ್ಸ್ ಪ್ರತಿನಿಧಿಗಳು, ಪ್ರವಾಸೋದ್ಯಮದ ನೇರಪಾಲುದಾರರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Share This Article
Leave a Comment