ಪಬ್ಲಿಕ್ ಅಲರ್ಟ್
ಮೈಸೂರು: ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಬೆದರಿಕೆ ಹಾಕುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಬಸವಗೌಡ ಯತ್ನಾಳ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದಿರುತ್ತಾರೆ. ಪ್ರತಿಕೃತಿಯನ್ನು ಸುಡಲು ಯತ್ನಿಸಿದಾಗ ಪೊಲೀಸರು ತಡೆದರು. ಕಾಂಗ್ರೆಸ್ ನಗರ ವಕ್ತಾರ ರಾಜೇಶ್ ಮಾತನಾಡಿ, ಸಚಿವರು ಆರ್‌ಎಸ್‌ಎಸ್ ನಿಷೇಧ ಮಾಡುವಂತೆ ಹೇಳಿಲ್ಲ. ಅವರ ಹೇಳಿಕೆಯನ್ನು ತಿರುಚಲಾಗಿದೆ. ಆರ್‌ಎಸ್‌ಎಸ್ ಸಂಘಟನೆ ಉದ್ಯಾನವನ, ಸರ್ಕಾರಿ ಶಾಲಾ-ಕಾಲೇಜು, ಸರ್ಕಾರಿ ಮೈದಾನಗಳು, ಪುರಾತತ್ವ ಇಲಾಖೆ ಮೈದಾನಗಳಲ್ಲಿ ಬೈಟಿಕ್, ಸಂಘ, ಸಭೆಗಳನ್ನು ನಡೆಸಲು ಸರ್ಕಾರ ಅನುಮತಿ ನೀಡಬಾರದೆಂದು ಪತ್ರ ಬರೆದಿದ್ದರು.
ಆರ್‌ಎಸ್‌ಎಸ್ ತತ್ವದಲ್ಲಿ ಸಂವಿಧಾನಕ್ಕೆ ಅವಕಾಶವಿಲ್ಲ. ಆರ್‌ಎಸ್‌ಎಸ್‌ನಲ್ಲಿ ಮಹಿಳೆಯರಿಗೆ ಅವಕಾಶವಿಲ್ಲ. ಸ್ವತಂತ ಪೂರ್ವದಲ್ಲಿ ಮಹಿಳೆಯರಿಗೆ ವಿದ್ಯಾಭ್ಯಾಸ ನೀಡಲು ನಿರಾಕರಣೆ ಸನಾತನ ಧರ್ಮದ ಹೆಸರಿನಲ್ಲಿ ಮನು ಸಂಸ್ಕೃತಿಯ ಮೂಲಕ ಶೋಷಣೆ ಮಾಡಲಾಗಿತ್ತು. ಹಿಂದೂ-ಮುಸ್ಲಿಂ ನಡುವೆ ಕೋಮು ಭಾವನೆ ಉಂಟುಮಾಡುವುದೇ ಇವರ ತತ್ವ ಸಿದ್ಧಾಂತ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.
ಶಾಲಾ-ಕಾಲೇಜು ಆವರಣದಲ್ಲಿ ಬೈಠಕ್‌ಗಳು ನಡೆದಾಗ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಬಾಲ್ಯದಲ್ಲಿಯೇ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಧರ್ಮ ಧರ್ಮಗಳ ನಡುವೆ ಆಸಮಾನತೆ, ದ್ವೇಷ. ಕೋಮು ಭಾವನೆ ಬಿತ್ತುವ ಬೈಠಕ್‌ಗಳಾಗಿರುತ್ತದೆ. ಹೀಗಾಗಿ ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ಗೆ ಅನುಮತಿ ನೀಡಬಾರದೆಂದು ಪ್ರಿಯಾಂಕ ಖರ್ಗೆಯವರು ಒತ್ತಾಯಿಸಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದರು. ಅಖಿಲ ಕರ್ನಾಟಕ ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳ ಬಳಗದ ಅಧ್ಯಕ್ಷ ಸಿ.ನರೇಂದ್ರ, ಕಾಂಗ್ರೆಸ್ ಮುಖಂಡರಾದ ರಹೀಂ, ಮೋಹನ್ ಸೇರಿ ಅನೇಕರು ಭಾಗವಹಿಸಿದ್ದರು.
