ವೃತ್ತಿ ಯಾವುದಾದರೇನು ನಾವೆಲ್ಲರೂ ವಿಶ್ವಕರ್ಮರೆಂಬ ಭಾವ ಇರಲಿ: ತನ್ವೀರ್ ಸೇಠ್

Pratheek
2 Min Read

ಪಬ್ಲಿಕ್ ಅಲರ್ಟ್


ಮೈಸೂರು: ನಮ್ಮ ವೃತ್ತಿ ಏನೇ ಇರಬಹುದು. ಆದರೆ, ನಾವೆಲ್ಲರೂ ವಿಶ್ವಕರ್ಮರು ಎಂಬ ಭಾವ ಎಲ್ಲರಲ್ಲೂ ಇರಬೇಕು ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ಹಾಗೂ ವಿಶ್ವಕರ್ಮ ಜಯಂತ್ಯೋತ್ಸವ ಸಮಿತಿ ಸಹಯೋಗದೊಂದಿಗೆ ನಗರದ ಕರ್ನಾಟಕ ಕಲಾಮಂದಿರದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸಿ, ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ನಾರಾಯಣ ಗುರು ಅವರು ಹೇಳಿದಂತೆ, ಭಗವಂತನ ರೂಪಗಳು ಬೇರೆ ಬೇರೆ ಇರಬಹುದು. ಆದರೆ ಎಲ್ಲರಿಗೂ ಮೂಲ ದೇವ ಒಬ್ಬನೇ ಆಗಿದ್ದಾನೆ. ಹಾಗೇಯೇ ನಮ್ಮೆಲ್ಲರ ಕಸುಬುಗಳು ಬೇರೆ ಬೇರೆ ಇದ್ದರೂ ಸಹ ನಮ್ಮೆಲ್ಲರ ಅಸ್ತಿತ್ವ ಕಾಪಾಡಿಕೊಳ್ಳಲು ಎಲ್ಲರೂ ಒಂದಾಗುವ ಅವಶ್ಯಕತೆ ಇದೆ ಎಂದು ತಿಳಿಸಿದರು.
ಯಾವುದೇ ಒಂದು ಆಚಾರ ವಿಚಾರ ಅಷ್ಟೇ ಅಲ್ಲದೇ ಅನಾದಿ ಕಾಲದಿಂದಲೂ ವಸ್ತು ವಿಚಾರಕ್ಕೆ ರೂಪ ಕೊಡುವ ಶಕ್ತಿ ವಿಶ್ವಕರ್ಮ ಜನಾಂಗಕ್ಕೆ ದೊರೆತಿರುವ ವರವಾಗಿದ್ದು, ಪ್ರಸ್ತುತ ಅಭಿವೃದ್ಧಿ ವಿಚಾರವಾಗಿ ಎಲ್ಲೆಡೆ ಮೆಷಿನ್ ಗಳು ಬರುತ್ತಿದ್ದು, ನಮ್ಮ ಅಸ್ತಿತ್ವ ಕಾಪಾಡಿಕೊಳ್ಳಲು ಕಷ್ಟ ಸಾಧ್ಯವಾಗುತ್ತಿದೆ. ಆದರೆ ಇದನ್ನು ಅಲ್ಲಗಳೆಯದೇ ನಮ್ಮ ಮೂಲ ಕಸುಬನ್ನು ಕಾಪಾಡಿಕೊಂಡು ಬರುವ ಹಿತಾಸಕ್ತಿ ನಮ್ಮಲ್ಲಿರಬೇಕಾಗಿದೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಇರ್ವಿನ್ ರಸ್ತೆಯಲ್ಲಿರುವ ಕಾಳಿಕಾಂಬ ದೇವಸ್ಥಾನದಿಂದ ಹೊರಟು ಕೆ.ಟಿ.ಸ್ತ್ರೀಟ್, ಅಶೋಕ ರಸ್ತೆ ಮೂಲಕ ದೊಡ್ಡ ಗಡಿಯಾರ, ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಿoದ ಕೆ.ಆರ್.ವೃತ್ತ, ಡಿ. ದೇವರಾಜ ಅರಸು ರಸ್ತೆ, ಮೆಟ್ರೋಪೋಲ್ ರಸ್ತೆ ಮೂಲಕ ಹುಣಸೂರು ರಸ್ತೆಯಲ್ಲಿರುವ ಕಲಾಮಂದಿರಕ್ಕೆ ವಿಶ್ವಕರ್ಮ ಜಯಂತಿಯ ಮೆರವಣಿಗೆ ಸಾಗಿತು.
ಕಾರ್ಯಕ್ರಮದಲ್ಲಿ ಹಾಸನದ ಅರೆಮಾದನಹಳ್ಳಿ ವಿಶ್ವ ಬ್ರಾಹ್ಮಣರ ಮಹಾ ಸಂಸ್ಥಾನ ಮಠದ ಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಡಿ.ತಿಮ್ಮಯ್ಯ, ಶಿಲ್ಪಿ ಅರುಣ್ ಯೋಗಿರಾಜ್, ವಸ್ತು ಪ್ರದರ್ಶನ ಪ್ರಾಧಿಕಾರದ ನಿರ್ದೇಶಕ ಹೇಮಂತ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್, ವಿಶ್ವಕರ್ಮ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷ ಹುಚ್ಚಪ್ಪ, ಪದಾಧಿಕಾರಿಗಳಾದ ಸಿ.ಟಿ.ಆಚಾರ್, ರೇವಣ್ಣ, ಎ.ಎನ್.ಸ್ವಾಮಿ, ಜಯಕುಮಾರ್, ಎನ್.ಚಂದ್ರು, ನಿಂಗಾಚಾರ್, ಜಯರಾಮಾಚಾರ್ ಸೇರಿ ಇತರರು ಪಾಲ್ಗೊಂಡಿದ್ದರು.

Share This Article
Leave a Comment