ಪಬ್ಲಿಕ್ ಅಲರ್ಟ್ ನ್ಯೂಸ್:-ಮೈಸೂರಿನಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಚಿತ್ರನಗರಿ: ವಿಕಾಸಸೌಧದಲ್ಲಿ ಪ್ರಗತಿ ಪರಿಶೀಲನಾ ಸಭೆ
ಬೆಂಗಳೂರು, ಸೆಪ್ಟೆಂಬರ್ 08 (ಕರ್ನಾಟಕ ವಾರ್ತೆ): ಮೈಸೂರಿನಲ್ಲಿ ಸಾರ್ವಜನಿಕ-ಖಾಸಗಿ ಪಾಲುದಾರಿಕೆ (PPP) ಮಾದರಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಂತಾರಾಷ್ಟ್ರೀಯ ದರ್ಜೆಯ ಚಿತ್ರನಗರಿ ಯೋಜನೆಯ ಪ್ರಗತಿ ಕುರಿತು ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಇಂದು ವಿಕಾಸಸೌಧದ ಸಭಾಂಗಣದಲ್ಲಿ ಸಂಬಂಧಿಸಿದ ಉನ್ನತಾಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು.
ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಪ್ರವಾಸೋದ್ಯಮದ ಪ್ರಮುಖ ತಾಣವಾಗಿರುವ ಮೈಸೂರಿನಲ್ಲಿ ಈ ಮಹತ್ವಾಕಾಂಕ್ಷೆಯ ಚಿತ್ರನಗರಿ ಯೋಜನೆಯು ನಗರದ ಸಾಂಸ್ಕೃತಿಕ ಮತ್ತು ಆರ್ಥಿಕ ಬೆಳವಣಿಗೆಗೆ ಹೊಸ ವೇಗ ನೀಡಲಿದೆ. ಈ ಉದ್ದೇಶಿತ ಚಿತ್ರನಗರಿಯನ್ನು ಕೇವಲ ಚಿತ್ರೀಕರಣಕ್ಕೆ ಸೀಮಿತಗೊಳಿಸದೆ, ದೇಶದಲ್ಲೇ ಅತ್ಯುತ್ತಮಮಟ್ಟದ ಅತ್ಯಾಧುನಿಕ ಸ್ಟುಡಿಯೋಗಳು, ತಾಂತ್ರಿಕ ಮೂಲಸೌಕರ್ಯ, ಪೋಸ್ಟ್-ಪ್ರೊಡಕ್ಷನ್ ಸೌಲಭ್ಯಗಳು ಹಾಗೂ ಚಲನಚಿತ್ರ ಕ್ಷೇತ್ರಕ್ಕೆ ಅಗತ್ಯವಿರುವ ಸಮಗ್ರ ವ್ಯವಸ್ಥೆಗಳನ್ನು ಒಳಗೊಂಡಂತೆ ರೂಪಿಸುವ ಕುರಿತು ಸಭೆಯಲ್ಲಿ ವಿವರವಾದ ಚರ್ಚೆ ನಡೆಯಿತು.
ಸಭೆಯ ಮುಖ್ಯ ಮುಖ್ಯಾಂಶಗಳು:
ಕಾಲಮಿತಿ ಹಾಗೂ ಪ್ರಗತಿ: ಯೋಜನೆಯ ಅನುಷ್ಠಾನದಲ್ಲಿ ಯಾವುದೇ ವಿಳಂಬವಾಗದಂತೆ ಪ್ರತಿ ಹಂತದ ಕಾರ್ಯಯೋಜನೆ, ಪ್ರಗತಿ ಹಾಗೂ ಎದುರಾಗಬಹುದಾದ ಸವಾಲುಗಳ ಕುರಿತು ನಿರಂತರವಾಗಿ ಮಾಹಿತಿ ಒದಗಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು.
ಗುಣಮಟ್ಟಕ್ಕೆ ಆದ್ಯತೆ:
ಸಾರ್ವಜನಿಕ ಹಿತಾಸಕ್ತಿ ಹಾಗೂ ಮೈಸೂರಿನ ಪ್ರವಾಸೋದ್ಯಮ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು, ಯೋಜನೆಯನ್ನು ಪರಿಣಾಮಕಾರಿಯಾಗಿ ಹಾಗೂ ಗುಣಮಟ್ಟದೊಂದಿಗೆ ಸಾಕಾರಗೊಳಿಸಲು ನಿರ್ದೇಶನ ನೀಡಲಾಯಿತು.
ಸಮಗ್ರ ಸೌಲಭ್ಯ:
ಅಂತಾರಾಷ್ಟ್ರೀಯ ಮಟ್ಟದ ತಾಂತ್ರಿಕತೆ ಮತ್ತು ಪೋಸ್ಟ್-ಪ್ರೊಡಕ್ಷನ್ ಸಾಮರ್ಥ್ಯವನ್ನು ಮೈಸೂರಿನಲ್ಲಿಯೇ ಒದಗಿಸುವ ನಿಟ್ಟಿನಲ್ಲಿ ಯೋಜನೆಗೆ ಚಾಲನೆ ನೀಡಲಾಗಿದೆ.
ಈ ಪರಿಶೀಲನಾ ಸಭೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿಗಳಾದ ಜೆ. ಮಂಜುನಾಥ್, ಮೈಸೂರು ಜಿಲ್ಲಾಧಿಕಾರಿ ಲಕ್ಷೀಕಾಂತರೆಡ್ಡಿ (ಆನ್ ಲೈನ್ ಮೂಲಕ) , ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಜೆಸಿಂತಾ, ಜಂಟಿ ನಿರ್ದೇಶಕ ಮಂಜುನಾಥ ಡೊಳ್ಳಿನ್ ಸೇರಿದಂತೆ ಇಲಾಖೆಯ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
