ಪಬ್ಲಿಕ್ ಅಲರ್ಟ್
ಮೈಸೂರು: ಹಿರಿಯ ನಾಗರಿಕರ ಮಂಡಳಿ ಹಾಗೂ ಹಿರಿಯ ನಾಗರಿಕರ ವಿಶ್ವಸ್ಥ ಮಂಡಳಿಯ ಕಟ್ಟಡ ಮತ್ತಿತರ ಅಭಿವೃದ್ಧಿ ಕಾರ್ಯಕ್ರಮಕ್ಕೆ ತಮ್ಮ ನಿಧಿಯಿಂದ ಪ್ರತಿವರ್ಷ ಐದು ಲಕ್ಷ ರು. ಅನುದಾನ ನೀಡುವುದಾಗಿ ವಿಧಾನ ಪರಿಷತ್ ಸದಸ್ಯ ಮಧು ಜಿ. ಮಾದೇಗೌಡ ವಾಗ್ದಾನ ಮಾಡಿದರು.
ನಗರದ ಜಯಲಕ್ಷ್ಮಿಪುರಂನಲ್ಲಿರುವ ಸರಸ್ವತಿ ಸಮುದಾಯ ಭವನದಲ್ಲಿ ಹಿರಿಯ ನಾಗರಿಕರ ಮಂಡಳಿ ಮತ್ತು ಹಿರಿಯ ನಾಗರಿಕರ ವಿಶ್ವಸ್ಥ ಮಂಡಳಿಯು ಬುಧವಾರ ಏರ್ಪಡಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿರಿಯ ನಾಗರಿಕರ ದಿನವನ್ನು ಎಲ್ಲರೂ ಸೇರಿ ಆಚರಣೆ ಮಾಡುತ್ತಿದ್ದೇವೆ. ನೀವು ಸರ್ಕಾರಿ ಲೆಕ್ಕದಲ್ಲಿ ಮಾತ್ರ ನಿವೃತ್ತಿ. ಸಾಯುವವರೆಗೂ ಕಾಯಕದಲ್ಲಿ ತೊಡಗಿರಬೇಕು. ಹಿರಿಯರು ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬೇಕು ಎಂದರೆ ಚಟುವಟಿಕೆಗಳಲ್ಲಿ ತೊಡಗಿರಬೇಕು. ಹೊಸ ಆಲೋಚನೆಗಳನ್ನು ರೂಢಿಸಿಕೊಂಡು ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಬೇಕು ಎಂದರು.
ಹಿರಿಯರು ದೊಡ್ಡ ಗ್ರಂಥಾಲಯ ಇದ್ದಂತೆ. ನಿಮಗಿರುವ ಅನುಭವದ ಮುಂದೆ ಯುವ ಪೀಳಿಗೆಯ ಸಮವಲ್ಲ. ಆದರೆ, ನಿಮ್ಮ ಜ್ಞಾನ ಮತ್ತು ಅನುಭವವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಕಾರ್ಯ ಮಾಡಬೇಕು. ನಮ್ಮ ದೇಶ ಇಲ್ಲಿಯವರೆಗೂ ಬೆಳೆದು ಬಂದಿದೆ ಎಂದರೆ ಅದಕ್ಕೆಲ್ಲಾ ನೀವು ನೀಡಿರುವ ಕೊಡುಗೆಯೇ ಕಾರಣ. ಹಿರಿಯರ ಜೊತೆಗೆ ಯುವಕರು ನಿಲ್ಲುತ್ತಾರೆ. ಆಗಾಗಿ ಯುವಕರನ್ನು ಬೆಳೆಸುವ ಕೆಲಸಗಳು ನಿಮ್ಮಿಂದಾಗಲಿ ಎಂದರು.
ಮಂಡಳಿ ವತಿಯಿಂದ ನೀಡಿರುವ ಬೇಡಿಕೆಯನ್ನು ಈಡೇರಿಸುವೆ. ಉಳಿದಿರುವ ನನ್ನ ಮೂರೂವರೆ ವರ್ಷಗಳ ಅವಧಿಯಲ್ಲಿ ಪ್ರತೀ ವರ್ಷ ಐದು ಲಕ್ಷ ರೂ.ಕೊಡುವ ಪ್ರಯತ್ನ ಮಾಡುತ್ತೇನೆ. ನಿಮ್ಮ ಜೊತೆಗೆ ಸದಾ ಇರುತ್ತೇನೆ ಎಂದರು.
ಉದ್ಯಮಿ ಎಂ. ಜಗನ್ನಾಥ ಶೆಣೈ ಮಾತನಾಡಿ, ವಯಸ್ಸಾಗಿದೆ ಎಂದು ಮನೆಯಲ್ಲಿ ಕೂರಬಾರದು, ಯಾವುದಾದರೂ ಒಂದು ಚಟುವಟಿಕೆಗಳಲ್ಲಿ ತೊಡಗಿಕೊಂಡು ಸೇವೆ ಸಲ್ಲಿಸಬೇಕು. ನಿವೃತ್ತಿ ನಂತರವೂ ಮುಂದಿನ ಪೀಳಿಗೆಗಾಗಿ ಕೆಲಸ ಮಾಡಬೇಕು. ಮಾರ್ಗದರ್ಶನ ನೀಡಬೇಕು. ಇವತ್ತಿನ ಮಕ್ಕಳಲ್ಲಿ ಶಿಸ್ತು ಎಂಬುದು ಕಡಿಮೆಯಾಗಿದೆ. ಹಾಗಾಗಿ ಹಿರಿಯರಾದ ನಾವುಗಳು ಮಕ್ಕಳಿಗೆ ಹೇಳಿಕೊಡಬೇಕು. ಆಗಾಗ ಒಳ್ಳೆಯ ವಿಚಾರಗಳನ್ನು ಹೇಳಿಕೊಡಬೇಕು. ಯಾವುದೇ ರೀತಿಯಲ್ಲೂ ಸೇವೆ ಮಾಡಿದರು ಅದು ದೇಶ ಸೇವೆಯೇ ಆಗಿರುತ್ತದೆ. ಈ ಸಮಾಜ ನಮ್ಮನ್ನು ಓದಿಸಿದೆ, ಬೆಳೆಸಿದೆ ಆಗಾಗಿ ಸಮಾಜಕ್ಕೆ ನಾವೇನಾದರೂ ನೀಡಬೇಕು. ಒಳ್ಳೆಯ ನಾಗರಿಕರನ್ನಾಗಿ ಮಾಡಬೇಕು. ನಮ್ಮ ಮನಸ್ಸು ಚೆನ್ನಾಗಿದ್ದರೆ ಮಾತ್ರವೇ ನಮ್ಮ ಆಯಸ್ಸು ಹೆಚ್ಚಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಪಿ. ವೆಂಕಟರಾಮಯ್ಯ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಉಪ ನಿರ್ದೇಶಕ ಮ.ಗು. ಸದಾನಂದಯ್ಯ ಅವರನ್ನು ಸನ್ಮಾನಿಸಲಾಯಿತು.
ಹಿರಿಯ ನಾಗರಿಕರ ವಿಶ್ವಸ್ಥ ಮಂಡಳಿ ಅಧ್ಯಕ್ಷ ಎಸ್.ವಿ. ಗೌಡಪ್ಪ, ಹಿರಿಯ ನಾಗರಿಕರ ಮಂಡಳಿ ಅಧ್ಯಕ್ಷ ಡಾ.ಎಚ್.ಎಂ. ನಾಗರಾಜು, ಕಾರ್ಯದರ್ಶಿ ಕೆ.ಎಸ್. ಕೃಷ್ಞ, ಕೆ.ವಿ. ರಾಮನಾಥ್ ಇದ್ದರು. ಆರ್ ಮಾನಸಿ ಕಾರ್ಯಕ್ರಮ ನಿರೂಪಿಸಿದರು. ಶಶಿಕಲಾ ಚಂದ್ರಶೇಖರ್, ವನಜಾಕ್ಷಿ, ಪ್ರಕಾಶ್ ಪ್ರಾರ್ಥಿಸಿದರು. ಕಾರ್ಯದರ್ಶಿ ರಾಮಚಂದ್ರೇಗೌಡ ಪ್ರಾಸ್ತಾವಿಕ ಭಾಷಣ ಮಾಡಿದರು. ಪಿ.ಎನ್. ಶ್ರೀಧರ್ ಸ್ವಾಗತಿಸಿದರು. ಕೆ.ಎಸ್. ಕೃಷ್ಣ ಅತಿಥಿಗಳನ್ನು, ಕೆ.ವಿ. ರಾಮನಾಥ್ ಸನ್ಮಾನಿತರನ್ನು ಪರಿಚಯಿಸಿದರು.
