ಪಬ್ಲಿಕ್ ಅಲರ್ಟ್
ಮೈಸೂರು: ಸುಪ್ರೀಂ ಕೋಟ್೯ ಮುಖ್ಯ ನ್ಯಾಯಾಧೀಶ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ ರಾಕೇಶ್ ಕಿಶೋರ್ ಅವರ ಹುಚ್ಚಾಟಕ್ಕೆ ಈಗಿನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಹಿಂದುತ್ವ ವಾದಿಗಳೇ ಕಾರಣವಾಗಿದ್ದು ಕೂಡಲೇ ಕೇಂದ್ರ ಸರ್ಕಾರವನ್ನು ವಜಾಗೊಳಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಸಿದ್ಧಾರ್ಥ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಕಾರರು, ಕೇಂದ್ರ ಸರ್ಕಾರ, ಹಿಂದುತ್ವವಾದಿಗಳು ಮತ್ತು ವಕೀಲ ರಾಕೇಶ್ ಕಿಶೋರ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಮಾತನಾಡಿ, ಸಾರ್ವಭೌಮ ಪ್ರಜಾತಂತ್ರ ಒಕ್ಕೂಟ ವ್ಯವಸ್ಥೆಯಡಿಯಲ್ಲಿ ಸಂವಿಧಾನದ ಆಶಯಗಳನ್ನು ಸಂರಕ್ಷಿಸುವ ಮಹತ್ತರವಾದ ಜವಾಬ್ದಾರಿಯನ್ನು ಹೊತ್ತಿರುವ ಪ್ರಜಾಪ್ರಭುತ್ವದ ಪ್ರಮುಖ ಅಂಗವಾದ ಸರ್ವಶ್ರೇಷ್ಠ ನ್ಯಾಯಾಲಯವನ್ನು ಅಗೌರವಿಸುವ ಸನಾತನಿ ವಕೀಲನೊಬ್ಬನ ನಡೆ ಅತ್ಯಂತ ಖಂಡನೀಯ ಎಂದು ಹೇಳಿದರು.
ನ್ಯಾಯಾಧೀಶರತ್ತ ಶೂ ತೂರಿರುವುದು ಅಕ್ಷಮ್ಯ ಅಪರಾಧವಾಗಿದೆ. ಈ ಸಂದರ್ಭದಲ್ಲಿ ತನ್ನ ರಕ್ಷಣೆಗಾಗಿ ಸನಾತನ ಎಂಬ ಪದ ಬಳಕೆಮಾಡಿಕೊಂಡು ಧರ್ಮದ ಲೇಪಹಚ್ಚಿ ಈ ರೀತಿಯ ಕೃತ್ಯ ಎಸಗಿದ್ದಾನೆ. ಪಶ್ಚತಾಪ ಪಡುವ ಬದಲಿಗೆ ಸದರಿ ಕೃತ್ಯಕ್ಕೆ ದೇವರ ಪ್ರೇರೇಪಣೆ ಇದೆ ಎಂದು ಹೇಳಿರುವುದು ಸಂವಿಧಾನಕ್ಕೆ ಮಾಡಿರುವ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನ್ಯಾಯಾಲಯದ ಘನತೆಗೆ ಧಕ್ಕೆ ತಂದಿರುವ ವಕೀಲ ರಾಕೇಶ್ ಕಿಶೋರ್ ರವರ ಅಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಇವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಇವರ ಪರವಾಗಿರುವವರನ್ನು ದೇಶದ್ರೋಹಿಗಳೆಂದು ಪರಿಗಣಿಸಿ ದೇಶದ ಐಕ್ಯತೆ, ಅಭಿವೃದ್ಧಿ, ಭದ್ರತೆಯನ್ನು ಕಾಪಾಡುವ ದೃಷ್ಟಿಯಿಂದ ಸರ್ವಾಧಿಕಾರ ನಡೆಸುತ್ತಿರುವ ಕೇಂದ್ರ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಬಳಿಕ ತಮ್ಮ ಹಕ್ಕೊತ್ತಾಯ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ನೀಡಿದರು. ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಶಂಭುಲಿಂಗಸ್ವಾಮಿ, ಆಲಗೂಡು ಶಿವಕುಮಾರ್, ಹೆಗ್ಗನೂರು ನಿಂಗರಾಜು, ಬಿ.ಡಿ.ಶಿವಬುದ್ಧಿ, ಎಡದೊರೆ ಮಹದೇವಯ್ಯ, ರಾಜು ಕುಕ್ಕೂರು, ಕೆ.ವಿ.ದೇವೇಂದ್ರ, ಮಂಜು ಶಂಕರಪುರ, ಕಲ್ಲಹಳ್ಳಿ ಕುಮಾರ್, ಮಹದೇವಮ್ಮ, ಗೌರಮ್ಮ, ರಾಮಕೃಷ್ಣ ಅತ್ತಿಕುಪ್ಪೆ, ಯಡದೊರೆ ಮಹದೇವಯ್ಯ, ಕೆ.ವಿ.ದೇವೇಂದ್ರ, ಮಂಜು ಶಂಕರಪುರ, ಮಹೇಶ್ ಗಟ್ಟವಾಡಿ, ಮಹದೇವಮ್ಮ, ತಿಮ್ಮೇಗೌಡ, ಕಿರಂಗೂರು ಸ್ವಾಮಿ ಸೇರಿ ಹಲವರು ಭಾಗವಹಿಸಿದ್ದರು.
ಕೋಟ್:
ಸಿಜೆಐ ಅವರ ಮೇಲೆ ಶೂ ಎಸೆಯಲು ಯತ್ನಿಸಿರುವುದು ಸಂವಿಧಾನಕ್ಕೆ ಮಾಡಿದ ಅಪಮಾನ. ವಕೀಲ ರಾಕೇಶ್ ಕಿಶೋರ್ ಹಿಂದೆ ಆರ್.ಎಸ್.ಎಸ್ ಕೈವಾಡವಿದೆ. ಈತತನ್ನು ಬಂಧಿಸಬೇಕಿದ್ದ ಕೇಂದ್ರ ಸರ್ಕಾರ ಆತನ ಬೆಂಬಲಕ್ಕೆ ನಿಂತಿದೆ. ಅದಕ್ಕಾಗಿ ಕೇಂದ್ರ ಸರ್ಕಾರವನ್ನು ವಜಾಗೊಳಿಸಿ ಕೂಡಲೇ ರಾಕೇಶ್ ಕಿಶೋರ್ ಎಂಬಾತನನ್ನು ಬಂಧಿಸಬೇಕು.
-ಆಲಗೂಡು ಶಿವಕುಮಾರ್,
ಜಿಲ್ಲಾ ಸಂಚಾಲಕ, ದಸಂಸ.
