ಅಂಬೇಡ್ಕರ್ ಸಮುದಾಯ ಭವನಕ್ಕೆ ಗುದ್ದಲಿಪೂಜೆ

Pratheek
1 Min Read

ಪಬ್ಲಿಕ್ ಅಲರ್ಟ್

ಮೈಸೂರು: ನಾಡನಹಳ್ಳಿ ರಾಜಕೀಯವಾಗಿ ಪ್ರಬುದ್ಧ ಜನರನ್ನು ಒಳಗೊಂಡಿರುವ ಗ್ರಾಮವಾಗಿದ್ದು, ಗ್ರಾಮಕ್ಕೆ ಅವಶ್ಯಕತೆ ಇರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದರು. 
ಮೈಸೂರಿನ ನಾಡನಹಳ್ಳಿ ಗ್ರಾಮದಲ್ಲಿ ಇಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಸಚಿವರು ಮಾತನಾಡಿದರು. ಗ್ರಾಮದಲ್ಲಿ ಗ್ರಂಥಾಲಯ, ಆಟದ ಮೈದಾನ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿಗೆ ಮನವಿ ಮಾಡಿದ್ದಾರೆ. ಈ ಸಂಬಂಧ ಅಧಿಕಾರಿಗಳಿಗೆ ಸೂಚನೆ ನೀಡಿ ಹಂತಹಂತವಾಗಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.

ನಾನು ಪ್ರತಿಮೆಯಲ್ಲಿಲ್ಲ, ಸಂವಿಧಾನ ಮತ್ತು ಪುಸ್ತಕಗಳಲ್ಲಿದ್ದೇನೆ ಎಂದು ಅಂಬೇಡ್ಕರ್ ಅವರೇ ಹೇಳಿದ್ದಾರೆ. ಆದರೂ ಅವರ ಗೌರವದ ಸಂಕೇತವಾಗಿ ಪ್ರತಿಮೆಗಳನ್ನು ನಿರ್ಮಿಸುತ್ತಿದ್ದೇವೆ. ನಮ್ಮ ಜನರು ಬಾಬಾಸಾಹೇಬರ ಮಾತನ್ನು ಅರ್ಥ ಮಾಡಿಕೊಂಡು ಶಿಕ್ಷಣ ಪಡೆದು, ಪುಸ್ತಕಗಳನ್ನು ಅಧ್ಯಯನ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಶಾಸಕರಾದ ಜಿ.ಟಿ.ದೇವೇಗೌಡ ಮಾತನಾಡಿ, ಈ ಗ್ರಾಮವು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟು ಮೇಲ್ದರ್ಜೆಗೇರಿದೆ. ಆದರೂ ಇಲ್ಲಿನ ಗ್ರಾಮಸ್ಥರಿಗೆ ಕೆಲವು ತೊಂದರೆ ಉಂಟಾಗುತ್ತಿದೆ. ಗ್ರಾಮದ ನಿರಾಶ್ರಿತರಿಗೆ ಆಶ್ರಯ ಯೋಜನೆಯಡಿ ನಿವೇಶನ ವಿತರಿಸಲು ಸಚಿವರೊಂದಿಗೆ ಮಾತನಾಡಿ ಕ್ರಮವಹಿಸಲಾಗುವುದು ಎಂದರು. 
ಈ ಸಂದರ್ಭದಲ್ಲಿ ನಾಡಹಳ್ಳಿ ಗ್ರಾಮದ ಎಂ.ಪ್ರಸಾದ್, ಸಿದ್ದಯ್ಯ, ಎಂ.ಕುಮಾರ್, ಎಸ್.ಸಂತೋಷ್ ಕುಮಾರ್, ಮಾಹಲಿಂಗಸ್ವಾಮಿ, ಮಧುಸೂದನ್, ಎಂ.ಹರೀಶ ಸೇರಿ ಇತರರು ಉಪಸ್ಥಿತರಿದ್ದರು.

Share This Article
Leave a Comment