ಪಬ್ಲಿಕ್ ಅಲರ್ಟ್
ಮೈಸೂರು: ಚಾಮುಂಡಿ ಬೆಟ್ಟದ ವಿಚಾರದಲ್ಲಿ ಉಂಟಾಗಿರುವ ಪರ-ವಿರೋಧದ ಚರ್ಚೆ ಹಾಗೂ ಅದರ ಹೋರಾಟಕ್ಕೆ ಪೊಲೀಸರು ಬ್ರೇಕ್ ಹಾಕಿದರಲ್ಲದೆ, ಪ್ರತಿಭಟನೆಗೆ ಮುಂದಾದ ಆರ್‌ಎಸ್‌ಎಸ್ ಹಾಗೂ ದಲಿತ ಸಂಘಟನೆಗಳ ಕಾರ್ಯಕ್ರರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್‌ರನ್ನು ಆಹ್ವಾನಿಸಿರುವುದನ್ನು ವಿರೋಧಿಸಿ ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ ಕರೆ ನೀಡಿದ್ದ ಚಾಮುಂಡಿ ಬೆಟ್ಟ ಚಲೋ ಯಾತ್ರೆ ಬೆಂಬಲಿಸಿ ಆಗಮಿಸಿದ ಶಾಸಕ ಟಿ.ಎಸ್. ಶ್ರೀವತ್ಸ ಸಹಿತ ನೂರಕ್ಕೂ ಹೆಚ್ಚು ಬಿಜೆಪಿ ಮುಖಂಡರು ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರನ್ನು ಮುಂಜಾಗ್ರತಾ ಕ್ರಮವಗಿ ಪೊಲೀಸರು ಬಂಧಿಸಿದರು. ಈ ವೇಳೆ ಪೊಲೀಸರು ಮತ್ತು ಯಾತ್ರೆಗೆ ಹೊರಟವರ ನಡುವೆ ಮಾತಿನ ಚಕಮಕಿ ನಡೆದು ಗೊಂದಲ ನಿರ್ಮಾಣವಾಯಿತು.
ನಗರ ಪೊಲೀಸ್ ಆಯುಕ್ತರು ಅನುಮತಿ ನಿರಾಕರಿಸಿದ್ದರೂ ಮಂಗಳವಾರ ಮುಂಜಾನೆ ನೂರಾರು ಸಂಖ್ಯೆಯಲ್ಲಿ ಹಿಂದೂಪರ ಸಂಘಟನೆ ಮುಖಂಡರು ಮತ್ತು ಕಾರ್ಯಕರ್ತರು ಹಾಗೂ ಬಿಜೆಪಿಗರು ಕುರುಬಾರಹಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಚಾಮುಂಡಿಬೆಟ್ಟಕ್ಕೆ ಕಾಲ್ನಡಿಗೆ ಮೂಲಕ ಯಾತ್ರೆ ಆರಂಭಿಸಲು ಮುಂದಾದರು. ಈ ವೇಳೆ ಚಾಮುಂಡಿ ಬೆಟ್ಟ ಚಲೋ ನಡೆಸಲು ಯತ್ನಿಸಿದವರನ್ನು ಪೊಲೀಸರು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬ್ಯಾರಿಕೇಡ್ ಹಾಕಿ ತಡೆಯೊಡ್ಡಿದರು.
ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಸಂಸದ ಪ್ರತಾಪ್ ಸಿಂಹ, ಬಿಜೆಪಿ ಮುಖಂಡರು ಹಾಗೂ ಹಿಂದೂ ಜಾಗರಣ ವೇದಿಕೆಯ ಸದಸ್ಯರುಗಳನ್ನು ಪೊಲೀಸರು ವಶಕ್ಕೆ ಪಡೆದರು. ಪೊಲೀಸರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಟಿ.ಎಸ್. ಶ್ರೀವತ್ಸ, ನಿಷೇದಾಜ್ಞೆ ಸೇರಿದಂತೆ ಯಾವುದೇ ಸೆಕ್ಷನ್ ಹಾಕದಿದ್ದರೂ ರಸ್ತೆ ಬದಿಯಲ್ಲಿದ್ದವರನ್ನು ಏಕೆ ಬಂಧಿಸುತ್ತಿದ್ದೀರಿ ಎಂದು ಪೊಲೀಸರ ವಿರುದ್ಧ ಕಿಡಿಕಾರಿದರು.
ಈ ವೇಳೆ ಮಾತನಾಡಿದ ನಗರಾಧ್ಯಕ್ಷ ಎಲ್.ನಾಗೇಂದ್ರ ಎಲ್ಲರಿಗೂ ಹೋರಾಟ ಮಾಡುವ ಹಕ್ಕಿದೆ. ಸರ್ಕಾರ ನಮ್ಮ ಹೋರಾಟ ಹತ್ತಿಕ್ಕುತ್ತಿರುವುದು ಖಂಡನೀಯ. ಈ ಧೋರಣೆಯಿಂದ ಸರ್ಕಾರ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ಸರ್ಕಾರದ ಒತ್ತಡದ ಮೇಲೆ ಪೊಲೀಸರು ನಡೆಸುಕೊಳ್ಳುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಾಜಿ ಸಂಸದ ಪ್ರತಾಪ್‌ಸಿಂಹ ಅವರನ್ನೂ ಕೂಡ ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾತಾಂತ್ರಿಕವಾಗಿ ನಡೆಯುವ ಪಾದಯಾತ್ರೆಯನ್ನು ಮಾಡಲು ಬಿಡದೆ ಕಾರ್ಯಕರ್ತರನ್ನು ಬೆನ್ನಟ್ಟಿ ಬಂಧಿಸುತ್ತಿರುವ ಪೊಲೀಸರ ಕ್ರಮ ಖಂಡನೀಯ ಎಂದು ಕಿಡಿಕಾರಿದರು.
ದಲಿತ ಮಹಾಸಭಾಗೂ ತಡೆ: ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದನ್ನು ಸ್ವಾಗತಿಸಿ ದಲಿತ ಮಹಾಸಭಾ ವತಿಯಿಂದ ಹಮ್ಮಿಕೊಂಡಿದ್ದ ಚಾಮುಡಿ ಬೆಟ್ಟ ಚಲೋಗೆ ಪೊಲೀಸರು ತಡೆಯೊಡ್ಡಿ, ಪ್ರತಿಭಟನಾಕಾರರನ್ನು ವಾಪಾಸ್ ಕಳಿಸಿದರು. ಈ ವೇಳೆ ಪೊಲೀಸರು ದಲಿತ ಮಹಾಸಭಾದ ಎಸ್.ರಾಜೇಶ್, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ನೇತೃತ್ವದಲ್ಲಿ ಬಂದ ಹತ್ತಾರು ಮಂದಿಯನ್ನು ತಡೆದು ನಿಲ್ಲಿಸಿ, ಅವರುಗಳ ಮನವೊಲಿಸಿ ಸ್ಥಳದಿಂದ ವಾಪಸ್ ಕಳುಹಿಸಿದರು.
ಆಲನಹಳ್ಳಿ ಠಾಣೆಯ ಮುಂಭಾಗ ಹಿಂದೂ ಕಾರ್ಯಕರ್ತರು ಭಜನೆ ಹಾಡಿದರು. ಜತೆಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಚಾಮುಂಡಿಬೆಟ್ಟ ಚಲೋ ಕಾರ್ಯಕ್ರಮಕ್ಕೆ ಸ್ಥಳೀಯ ಹಿಂದೂ ಕಾರ್ಯಕರ್ತರ ಜತೆಗೆ ಮಂಗಳೂರು ಹಾಗೂ ಮಡಿಕೇರಿಯ ಹಿಂದೂ ಕಾರ್ಯಕರ್ತರು ಸಾಥ್ ನೀಡಿದ್ದುದು ವಿಶೇಷ. ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ಚಾಮುಂಡಿಬೆಟ್ಟದಲ್ಲಿ ಸಾಕಷ್ಟು ಬಿಗಿ ಬಂದೋಬಸ್ತ್ ಮಾಡಲಾಗಿತ್ತು.



ಪೊಲೀಸರ ಕ್ರಮ ಖಂಡನೀಯ: ಮಾಜಿ ಸಂಸದ ಪ್ರತಾಪಸಿಂಹ
ಪ್ರಜಾತಾಂತ್ರಿಕವಾಗಿ ನಡೆಯುವ ಪಾದಯಾತ್ರೆಯನ್ನು ಮಾಡಲು ಬಿಡದೆ ಕಾರ್ಯಕರ್ತರನ್ನು ಬೆನ್ನಟ್ಟಿ ಬಂಧಿಸುತ್ತಿರುವ ಪೊಲೀಸರ ಕ್ರಮ ಖಂಡನೀಯ ಎಂದು ಮಾಜಿ ಸಂಸದ ಪ್ರತಾಪಸಿಂಹ ಕಿಡಿಕಾರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸಾರ್ ಅಹಮದ್ ದಸರಾ ಉದ್ಘಾಟಿಸಲಿಲ್ಲವೇ ಎನ್ನುತ್ತಾರೆ. ನಿಸಾರ್ ಅಹಮದ್ ಅವರ ಸಾಹಿತ್ಯದ ಬಗ್ಗೆ ಗೊತ್ತಿದ್ದರೆ ಸಿದ್ದರಾಮಯ್ಯ ಹೀಗೆ ಮಾತನಾಡುತ್ತಿರಲಿಲ್ಲ. ನಿತ್ಯೋತ್ಸವ, ಬೆಣ್ಣೆಕದ್ದ ನಮ್ಮ ಕೃಷ್ಣ ಸೇರಿದಂತೆ ಹಲವು ಕವಿತೆಗಳನ್ನು ಬರೆದವರು ಅವರು. ಅವರನ್ನು ಯಾರು ವಿರೋಧಿಸುತ್ತಾರೆ ಎಂದರು.
ನಾಡಹಬ್ಬ ದಸರಾ ಸೆಕ್ಯುಲರ್ ಕಾರ್ಯಕ್ರಮವಲ್ಲ. ಇದು ಹಿಂದೂಗಳ ಧಾರ್ಮಿಕ ಕಾರ್ಯಕ್ರಮ. ನಮ್ಮ ಭುವನೇಶ್ವರಿ ಬಗ್ಗೆ ಲಘುವಾಗಿ ಮಾತನಾಡಿದ್ದ ಬಾನು ಮುಷ್ತಾಕ್ ಅವರು, ಕನಿಷ್ಠ ಕ್ಷಮೆ ಕೇಳುವುದನ್ನೂ ಮಾಡಿಲ್ಲ. ಹೀಗಿರುವಾಗ ಅವರು ದಸರಾ ಉದ್ಘಾಟಿಸಲು ಹೇಗೆ ಸಾಧ್ಯ. ಸಿದ್ದರಾಮಯ್ಯ ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕುತ್ತಿದ್ದಾರೆ. ಅವರು ಬಳ್ಳಾರಿಗೆ ಪಾದಯಾತ್ರೆ ಹೋದಾಗ, ಅಹಿಂದ ಸಮಾವೇಶಗಳಾದಾಗ ನಾವು ತಡೆದಿದ್ದೇವಾ? ಕಾನೂನಿನ ಅರಿವಿದ್ದು, ಕನ್ನಡಿಗರಾಗಿ ಬಾನು ಮುಷ್ತಾಕ್ ಅವರನ್ನು ಕರೆದು ಬುದ್ಧಿವಾದ ಹೇಳಿದ್ದರೆ ನಾವು ಪ್ರತಿಭಟನೆ ಮಾಡುತ್ತಿರಲಿಲ್ಲ ಎಂದರು.
ಮುಖ್ಯಮಂತ್ರಿಯಾಗಿ ಮೊದಲನೇ ಅವಧಿಯಲ್ಲಿ ನಿದ್ದೆ ಮಾಡಿದಿರಿ, ಈಗ ಹಿಂದೂ ವಿರೋಧಿ ನಿಲುವು ತಾಳುತ್ತಿದ್ದೀರಿ. ಮದ್ದೂರಿನ ಗಲಭೆಯಲ್ಲಿ ಪೆÇಲೀಸರು 21 ಜನರನ್ನು ಬಂಧಿಸಿದ್ದಾರೆ. ಮುಲ್ಲಾನ ಮೇಲೆ ಕೇಸ್ ಹಾಕಬೇಕು ಎಂದಿದ್ದೇವೆ. ಸಿಸಿಟಿವಿ ಫುಟೇಜ್ ನೋಡಿ ಬಂಧಿಸುತ್ತೇವೆ ಎಂದಿದ್ದಾರೆ. ನಾವು ಕಾದು ನೋಡುತ್ತೇವೆ ಎಂದರು.
ಪತ್ರಕರ್ತನ ಮಾತಿಗೆ ಸಿಡಿಮಿಡಿ: ಪತ್ರಕರ್ತರೊಬ್ಬರ ಬಿಜೆಪಿಯಿಂದ ಹೊರ ದಬ್ಬಿಸಿಕೊಂಡು ಮತ್ತೆ ಸೇರಿಕೊಳ್ಳಲು ಪ್ರತಾಪಸಿಂಹ ಈ ರೀತಿ ಮಾಡುತ್ತಿದ್ದಾರೆಂಬ ಆರೋಪ ಕುರಿತ ಪ್ರಶ್ನೆಗೆ ಸಿಡಿಮಿಡಿಗೊಂಡ ಪ್ರತಾಪಸಿಂಹ ಇಂತಹ ಪ್ರಶ್ನೆಗೆ ಪ್ರತಿಕ್ರಯಿಸಲ್ಲ ಎಂದು ನಿರಾಕರಿಸಿದರು.
