ಬಲಗೈ, ಬಲಗೈ ಮದ್ಯೆ ಒಡಕು ಮೂಡಿಸುವ ಯತ್ನ ಖಂಡನೀಯ

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ಒಳಮೀಸಲಾತಿ ಕುರಿತ ನ್ಯಾ.ನಾಗಮೋಹನ ದಾಸ್ ವರದಿಯನ್ನು ಪರಿಷ್ಕರಿಸಿ ಎಡಗೈ ಮತ್ತು ಬಲಗೈ ಸಮುದಾಯಕ್ಕೆ ಸರ್ಕಾರವು ಸಮಾನವಾಗಿ ಮೀಸಲಾತಿ ಹಂಚಿರುವುದನ್ನು ಸ್ವಾಗತಿಸದೇ ಸಮುದಾಯಗಳ ನಡುವೆ ಒಡಕು ಮೂಡಿಸಲು ಕೆಲವರು ಪ್ರಯತ್ನಿಸುತ್ತಿರುವುದು ಖಂಡನೀಯ ಎಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ವಕೀಲರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ತಿಮ್ಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆ ಅಧ್ಯಕ್ಷ ಅರುಣ್ ಕುಮಾರ್ ಅವರು ಈಚೆಗೆ ದುಂಡುಮೇಜಿನ ಸಭೆ ಆಯೋಜಿಸಿ ಹೊಲೆಯ ಸಮುದಾಯದವರು ಸರ್ಕಾರದ ಮೇಲೆ ಒತ್ತಡ ಹೇರಿ ಶೇ 6 ಮೀಸಲಾತಿ ಪಡೆದಿದ್ದಾರೆ. ಇದು ಅಕ್ರಮವಾಗಿದ್ದು ತಾಕತ್ತಿದ್ದರೆ ನ್ಯಾಯಾಲಯಕ್ಕೆ ಹೋಗಬೇಕಿತ್ತು ಎಂದು ಪ್ರಶ್ನಿಸಿದ್ದಾರೆ. ಇಂಥ ಮಾತುಗಳು ಸಮುದಾಯದಲ್ಲಿ ಭಿನ್ನಾಭಿಪ್ರಾಯ ಮೂಡಿಸಿ ಕೋಮುದ್ವೇಷಕ್ಕೆ ಕಾರಣವಾಗುತ್ತವೆ. ಬಿಜೆಪಿಯಲ್ಲಿ ರಾಜಕೀಯ ಲಾಭ ಪಡೆಯಲು ಇಂಥ ಹೇಳಿಕೆಯನ್ನು ಅವರು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ವರದಿಯು ಅವೈಜ್ಞಾನಿಕವಾಗಿದೆ ಎನ್ನುವುದನ್ನು ಇಬ್ಬರೂ ಸೇರಿ ವಿರೋಧಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಪಡೆಯಲು ಪ್ರಯತ್ನಿಸಬೇಕು. ಅದನ್ನು ಬಿಟ್ಟು ಅಣ್ಣ ತಮ್ಮಂದಿರಂತೆ ಇರಬೇಕಾದ ಸಮುದಾಯದ ನಡುವೆ ಬಿರುಕು ಮೂಡಿಸಬಾರದು. ಈ ಗೊಂದಲಗಳನ್ನು ಎರಡು ಸಮುದಾಯದ ನಾಯಕರು ಪರಿಹರಿಸಿ ಒಮ್ಮತಕ್ಕೆ ಬರಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಪುಟ್ಟಸ್ವಾಮಿ,  ಚಂದ್ರಶೇಖರ, ಪದಾಧಿಕಾರಿಗಳಾದ ಉಮೇಶ್, ವಿಷ್ಣುವರ್ಧನ, ಸೋಮರಾಜ, ಶಿವಮೂರ್ತಿ, ಶ್ರೀನಿವಾಸ ಇದ್ದರು.

Share This Article
Leave a Comment