ಪಬ್ಲಿಕ್ ಅಲರ್ಟ್ ನ್ಯೂಸ್:-ಇದೇ ಭಾನುವಾರ ಆಗಸ್ಟ್ 02 ರಂದು ರಾಜ್ಯಾದ್ಯಂತ ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ಗಳ ನೇಮಕಾತಿಗಾಗಿ
ಸರ್ಕಾರದಿಂದ ಲಿಖಿತ ಪರೀಕ್ಷೆ ನಡೆಸಲಾಗುತ್ತಿದೆ .ಈ ಪರೀಕ್ಷೆಗೆ ಹಾಜರಾಗುತ್ತಿರುವ ಉದ್ಯೋಗಾಕಾಂಕ್ಷಿಗಳ *ಉಪಯೋಗಕ್ಕಾಗಿ ಈವರೆವಿಗೂ ಮೈಸೂರಿನ ನಗರ ಕೇಂದ್ರ ಗ್ರಂಥಾಲಯ ಪೀಪಲ್ಸ್ ಪಾರ್ಕ್ ಗ್ರಂಥಾಲಯ ಹಾಗೂ ಬೆಂಗಳೂರಿನ ಜ್ಞಾನಗಂಗೋತ್ರಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಹಯೋಗದೊಂದಿಗೆ ಉಚಿತವಾಗಿ 07 ಅಣಕು ಪರೀಕ್ಷೆಗಳನ್ನು ನಡೆಸಲಾಗಿ, ಇಂದು 08 ನೇ ಸಮಗ್ರ ಅಣುಕು ಪರೀಕ್ಷೆಯನ್ನು ಉದ್ಯೋಗಾಕಾಂಕ್ಷಿಗಳ ಲಾಭಕ್ಕಾಗಿ ನಗರ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ನಡೆಸಲಾಯಿತು. ಸದರಿ ಅಣಕು ಪರೀಕ್ಷೆಗೆ ಸುಮಾರು 150 ಉದ್ಯೋಗಾಕಾಂಕ್ಷಿಗಳು ಹಾಜರಾಗಿದ್ದರು. ಪರೀಕ್ಷೆ ಮುಕ್ತಾಯಗೊಂಡ ನಂತರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶ್ರೀ ನಿತೀಶ್ ಪಾಟೀಲ್ ಭಾ.ಆ.ಸೇ. ಪ್ರಾದೇಶಿಕ ಆಯುಕ್ತರು/ಆಡಳಿತಾಧಿಕಾರಿಗಳು, ಮೈಸೂರು ಮಹಾನಗರ ಪಾಲಿಕೆ ಹಾಗೂ ಅಧ್ಯಕ್ಷರು ನಗರ ಗ್ರಂಥಾಲಯ ಪ್ರಾಧಿಕಾರ, ಮೈಸೂರು ರವರು ಮಾತನಾಡುತ್ತಾ ಉದ್ಯೋಗಾಕಾಂಕ್ಷಿಗಳು ಶಿಸ್ತಿನಿಂದ ಪರೀಕ್ಷೆ ಎದುರಿಸಿದ್ದನ್ನು ಪ್ರಶಂಸಿಸಿದರು. ಅಂತಿಮ ಅಣುಕು ಪರೀಕ್ಷೆಯು ಇಷ್ಟು ಶಿಸ್ತಿನಿಂದ ನಡೆಯುವುದೇ ಎಂದು ಸೋಜಿಗಪಟ್ಟರು. ಮುಂದುವರೆದು, ಶ್ರಮ, ಶಿಸ್ತು ಮತ್ತು ಪ್ರಾಮಾಣಿಕತೆ ವ್ಯಕ್ತಿಯೊಬ್ಬರ ಜೀವನವನ್ನು ರೂಪಿಸಲು ಬಹು ಅಗತ್ಯ. ಉದ್ಯೋಗಾಕಾಂಕ್ಷಿಗಳು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುವಾಗ ಉತ್ತಮ ಸ್ನೇಹಿತ ವೃಂದವನ್ನು ಹೊಂದಿರಬೇಕು. ಹಾಗೆಯೇ ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ನಡೆಯುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಅಭ್ಯಾಸ ಮಾಡಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ರೈಲ್ವೆ ಇಲಾಖೆ ಮತ್ತು ಇತರೆ ಕೇಂದ್ರ ಸರ್ಕಾರಿ ಹುದ್ದೆಗಳಲ್ಲಿ ಹೆಚ್ಚು ಕನ್ನಡಿಗರು ಬರದಿರುವುದು ವಿಷಾದನೀಯ ಎಂದರು. ಅಣಕು ಪರೀಕ್ಷೆಗಳು ಅಭ್ಯರ್ಥಿಯ ಮನೋಸ್ಥೈರ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ನಗರ ಕೇಂದ್ರ ಗ್ರಂಥಾಲಯ ನಡೆಸಿರುವ 08 ಅಣುಕು ಪರೀಕ್ಷೆಗಳು ಉದ್ಯೋಗಾಕಾಂಕ್ಷಿಗಳಲ್ಲಿ ಸಾಕಷ್ಟು ವಿಶ್ವಾಸ ಮೂಡಿಸಿರಲು ಸಾಧ್ಯ ಎಂದರು. ಇಡೀ ರಾಜ್ಯದಲ್ಲಿ ಇಂತಹ ಅಣಕು ಪರೀಕ್ಷೆ ನಡೆಯುತ್ತಿರುವುದು ಮೈಸೂರು ನಗರ ಕೇಂದ್ರ ಗ್ರಂಥಾಲಯದಲ್ಲಿ ಮಾತ್ರ. ಇದಕ್ಕೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿರುವ ನಗರ ಕೇಂದ್ರ ಗ್ರಂಥಾಲಯದ ಅಧಿಕಾರಿಗಳ ಶ್ರಮ ಪ್ರಶಂಸನೀಯ ಎಂದರು. ಹಾಗೆಯೇ ಈ ಕಾರ್ಯದಲ್ಲಿ ನಗರ ಕೇಂದ್ರ ಗ್ರಂಥಾಲಯಕ್ಕೆ ಬೆಂಬಲ ನೀಡಿರುವ ಶ್ರೀ ರಮೇಶ್ ನರಸಯ್ಯ ಮತ್ತು ಬೆಂಗಳೂರಿನ ಜ್ಞಾನಗಂಗೋತ್ರಿ ಸ್ಪರ್ಧಾತ್ಮಕ ತರಬೇತಿ ಕೇಂದ್ರದ ಕಾರ್ಯವನ್ನು ಸಹ ಶ್ಲಾಘಿಸಿದರು. ಸಮಾರಂಭದಲ್ಲಿ ಮಾತನಾಡಿದ ಉಪನಿರ್ದೇಶಕರಾದ ಶ್ರೀ ಮಂಜುನಾಥ್ ಬಿ ರವರು ನಗರ ಕೇಂದ್ರ ಗ್ರಂಥಾಲಯದಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ಗ್ರಾಮ ಸಹಾಯಕ ಅಧಿಕಾರಿ ಪರೀಕ್ಷೆ, ಗ್ರಾಮ ಲೆಕ್ಕಾಧಿಕಾರಿ ಪರೀಕ್ಷೆ, ಪೋಲೀಸ್ ಸಬ್ ಇನ್ಸ್ ಪೆಕ್ಟರ ಪರೀಕ್ಷೆ ಮುಂತಾದವುಗಳಿಗೂ ಸಹ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದರು. ನಗರ ಕೇಂದ್ರ ಗ್ರಂಥಾಲಯ ನಡೆಸಿದ ಅಣಕು ಪರೀಕ್ಷೆಗಳ ಮಾದರಿಯಲ್ಲೇ ಪರೀಕ್ಷೆಗಳನ್ನು ನಡೆಸಲು ಹಿಂದುಳಿದ ವರ್ಗಗಳ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ರವರು ಕೋರಿರುವುದಾಗಿ ಹೇಳಿದರು. ಇದುವರೆಗೂ ನಡೆದ ಎಲ್ಲಾ ಅಣಕು ಪರೀಕ್ಷೆಗಳಿಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಮಾರ್ಗದರ್ಶನಕ್ಕೆ ಮಾನ್ಯ ಪ್ರಾಧಿಕಾರದ ಅಧ್ಯಕ್ಷರು ಸಂಪೂರ್ಣ ಬೆಂಬಲ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. ಸಮಾರಂಭದ ಮತ್ತೋರ್ವ ಅತಿಥಿಯಾದ ಬೆಂಗಳೂರಿನ ಜ್ಞಾನಗಂಗೋತ್ರಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಶೈಕ್ಷಣಿಕ ನಿರ್ದೇಶಕರಾದ ವೈ.ವಿ. ಗಾಯತ್ರಿ ರವರು ಮೈಸೂರು ನಗರ ಕೇಂದ್ರ ಗ್ರಂಥಾಲಯದಲ್ಲಿ ಮುಂಬರುವ ದಿನಗಳಲ್ಲಿ ನಡೆಸುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ತರಬೇತಿಗೆ ಉಚಿತವಾಗಿ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ಭರವಸೆ ಕೊಟ್ಟರು. ಇದುವರೆಗೂ ನಡೆಸಿರುವ ಎಲ್ಲಾ ಅಣಕು ಪರೀಕ್ಷೆಗಳು
ಯಶಸ್ವಿಯಾಗಿದ್ದು, ಈ ಪರೀಕ್ಷೆಗಳಿಗೆ ಹಾಜರಾದ ಎಲ್ಲಾ ಉದ್ಯೋಗಾಕಾಂಕ್ಷಿಗಳು ಅಂತಿಮ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು. ಕೊನೆ ಕ್ಷಣದಲ್ಲಿ ಅಭ್ಯರ್ಥಿಗಳಿಗೆ ಕೆಲವು ಕಿವಿಮಾತುಗಳನ್ನು ಸಹ ಹೇಳಿದರು ಕಾರ್ಯಕ್ರಮದ ಪ್ರಾರಂಭದಲ್ಲಿ ಎಲ್ಲರನ್ನು ಸ್ವಾಗತಿಸಿದ ನಗರ ಗ್ರಂಥಾಲಯ ಪ್ರಾಧಿಕಾರದ ಸದಸ್ಯರು ಹಾಗೂ ಸದರಿ ಅಣುಕು ಪರೀಕ್ಷೆ ಮತ್ತು ತರಬೇತಿ ಕೇಂದ್ರದ ಮುಖ್ಯಸ್ಥರಾದ ಶ್ರೀ ರಮೇಶ್ ನರಸಯ್ಯ ರವರು ಇದುವರೆಗೂ ನಡೆಸಲಾದ 07 ಅಣುಕು ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡುತ್ತಾ, ಪ್ರತಿ ಪರೀಕ್ಷೆಗೂ ಉದ್ಘಾಟಕರಾಗಿ ಆಗಮಿಸಿದ್ದ ಹಿರಿಯ ಪೋಲೀಸ್ ಅಧಿಕಾರಿಗಳು ಮತ್ತು ಇನ್ನಿತರ ಇಲಾಖೆ ಅಧಿಕಾರಿಗಳು ನೀಡಿದ ಅನುಭವದ ನುಡಿಗಳು ಅಭ್ಯರ್ಥಿಗಳ ಜೀವನದಲ್ಲಿ ಯಶಸ್ಸು ಪಡೆಯಲು ಸಹಾಯವಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಜ್ಞಾನ ಗಂಗೋತ್ರಿ ಸ್ಪರ್ಧಾತ್ಮಕ ತರಬೇತಿ ಕೇಂದ್ರದ ಆಡಳಿತ ಅಧಿಕಾರಿಯಾದ ಶ್ರೀ ಮೋಹನ್ ರವರು ಉಪಸ್ಥಿತರಿದ್ದರು. ಮೈಸೂರಿನ ಟೆರೆಷಿಯನ್ ಕಾಲೇಜಿನ ಬೋಧಕ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲು ಆಗಮಿಸಿದ್ದು ಮೈಸೂರು ಜಿಲ್ಲಾ ಕೇಂದ್ರ ಗ್ರಂಥಾಲಯ ಹಾಗೂ ನಗರ ಕೇಂದ್ರ ಗ್ರಂಥಾಲಯದ ಅಧಿಕಾರಿಗಳು/ಸಿಬ್ಬಂದಿಗಳು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿ, ಅಣುಕು ಪರೀಕ್ಷೆಗಳು ಸುಸೂತ್ರವಾಗಿ ನಡೆಯಲು ಸಹಕರಿಸಿದರು. ವಿದ್ಯಾರ್ಥಿಗಳಿಗೆ ಹಾಗೂ ಸ್ವಯಂ ಸೇವಕರಿಗೆ/ಸಿಬ್ಬಂದಿಗಳಿಗೆ ನಗರ ಕೇಂದ್ರ ಗ್ರಂಥಾಲಯದ ವತಿಯಿಂದ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
