ವ್ಯಸನ-ಖಿನ್ನತೆ ಸಾಧನೆಗೆ ದಾರಿಯಲ್ಲ, ಸೋಲನ್ನು ಮೆಟ್ಟಿ ನಿಂತು ಯಶಸ್ಸು ಸಾಧಿಸಿ : ಮಧುಕರ್ ದೇಶಪಾಂಡೆ

latha prabhukumar
5 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ವ್ಯಸನ-ಖಿನ್ನತೆ ಸಾಧನೆಗೆ ದಾರಿಯಲ್ಲ, ಸೋಲನ್ನು ಮೆಟ್ಟಿ ನಿಂತು ಯಶಸ್ಸು ಸಾಧಿಸಿ : ಮಧುಕರ್ ದೇಶಪಾಂಡೆ

ಮೈಸೂರು ಆಗಸ್ಟ್ (ಕರ್ನಾಟಕ ವಾರ್ತೆ) ವ್ಯಸನಕ್ಕೆ ಒಳಗಾಗುವುದು, ಕಿನ್ನತೆಗೆ ಒಳಗಾಗುವುದು ಸಾಧನೆಗೆ ದಾರಿಯಲ್ಲ. ನಿಮ್ಮ ವೈಯಕ್ತಿಕ ಸಾಧನೆ ಮತ್ತು ಯಶಸ್ಸು ಮುಖ್ಯವೇ ಹೊರತು ಯಾರು ದಾರಿ ತಪ್ಪಬಾರದು. ಸೋಲು ಸಹಜ, ಅದರಿಂದ ಕುಗ್ಗದೆ ಅದನ್ನು ಮೆಟ್ಟಿ ನಿಲ್ಲುವುದನ್ನು ಕಲಿಯಬೇಕು. ಕಾಲೇಜು ಹಂತದಲ್ಲಿ ಎಲ್ಲಾ ಚಟುವಟಿಕೆಗಳು, ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಅನುಭವ ಹೆಚ್ಚುತ್ತದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ವಕೀಲರಾದ ಮಧುಕರ್ ದೇಶಪಾಂಡೆ ಅವರು ಹೇಳಿದರು

ಇಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯಾಂಗ ಇಲಾಖೆ, ವಕೀಲರ ಸಂಘ, ಮಹಾರಾಣಿ ಮಹಿಳಾ ಕಲಾ ಕಾಲೇಜನ ಮನೋವಿಜ್ಞಾನ ವಿಭಾಗ, ವಿದ್ಯಾರ್ಥಿ ಆಪ್ತ ಸಲಹಾ ಸಮಿತಿ, ಮಾದಕ ವಸ್ತು ವಿರೋಧಿ ಜಾಗೃತಿ ಸಮಿತಿ, Heartfulness institute ಮತ್ತು ಮಹಾರಾಜ ಸರ್ಕಾರಿ ಪದವಿ ಪೂರ್ವ ಕಾಲೇಜು, ಮೈಸೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು (ಪೋಕ್ಕೊ ಕಾಯ್ದೆ, ಮಾದಕ ದ್ರವ್ಯ ದುರ್ಬಳಕೆ ತಡೆಗಟ್ಟುವುದು ಮತ್ತು ANTHRAGGING) ಮಹಾರಾಣಿ ಮಹಿಳಾ ಕಲ ಕಾಲೇಜು ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಮಾದಕ ದ್ರವ್ಯಗಳು ಮತ್ತು ರಾಸಾಯನಿಕ ಪದಾರ್ಥಗಳು ಸುಲಭವಾಗಿ ಸಿಗುತ್ತಿದ್ದು, ಇವುಗಳ ಬಗ್ಗೆ ಅತ್ಯಂತ ಎಚ್ಚರಿಕೆ ವಹಿಸಬೇಕು. ಎಷ್ಟೇ ಆರೋಗ್ಯವಂತರಾಗಿದ್ದರೂ, ಯಾವುದೇ ಸಂದರ್ಭದಲ್ಲಿ ಅಪರಿಚಿತರು ನೀಡುವ ವಸ್ತುಗಳನ್ನು ಅಥವಾ ಪಾನೀಯಗಳನ್ನು ಸೇವಿಸದೆ ಸದಾ ಜಾಗರೂಕರಾಗಿರಬೇಕು. ಡಿಜಿಟಲ್ ಯುಗದಲ್ಲಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಅತಿ ಬಳಕೆಯಿಂದ ಉಂಟಾಗುವ ವ್ಯಸನ, ಅದರಿಂದ ಹೊರಬರಲು ಇರುವ ಮಾರ್ಗಗಳು ಹಾಗೂ ವ್ಯಸನಿಗಳ ಬಗ್ಗೆ ಸಮಾಜದಲ್ಲಿ ಇರಬೇಕಾದ ಸಕಾರಾತ್ಮಕ ಮನೋಭಾವದ  ವಿಚಾರಗ ಳನ್ನು ತಿಳಿಸಿದರು.

ಮೊಬೈಲ್ ಮತ್ತು ಅಂತರ್ಜಾಲದ ಅತಿಯಾದ ಬಳಕೆಯಿಂದ ದೂರವಿರುವುದು ಮತ್ತು ನಮ್ಮ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಎಷ್ಟು ಮುಖ್ಯ. ಮಾದಕ ವಸ್ತು ಅಥವಾ ಡಿಜಿಟಲ್ ವ್ಯಸನಕ್ಕೆ ಒಳಗಾದವರು ಹುಟ್ಟಿನಿಂದ ಕೆಟ್ಟವರಲ್ಲ. ಒತ್ತಡ, ಕಿನ್ನತೆ ಅಥವಾ ಸಂದರ್ಭಗಳ ಕಾರಣದಿಂದ ಅವರು ಆ ಹಾದಿಗೆ ಜಾರಿರಬಹುದು. ಅವರನ್ನು ಕೀಳಾಗಿ ಕಾಣದೆ, ಅವರೊಂದಿಗೆ ಮಾತನಾಡಿ, ಕೌನ್ಸಿಲಿಂಗ್ ಮತ್ತು ವೈದ್ಯಕೀಯ ನೆರವಿನ ಮೂಲಕ ಅವರನ್ನು ಮುಖ್ಯವಾಹಿನಿಗೆ ತರಬೇಕು. ಕಾನೂನಿನಲ್ಲೂ ಇಂತಹ ವ್ಯಸನಿಗಳಿಗೆ ಶಿಕ್ಷೆಗಿಂತ ಹೆಚ್ಚಾಗಿ ಪುನರ್ವಸತಿ ಮತ್ತು ಚಿಕತ್ಸೆಗೆ ಅವಕಾಶವಿದೆ ಎಂದು ಹೇಳಿದರು.

ಸಾಮಾಜಿಕ ಜಾಲತಾಣಗಳು ಮತ್ತು ನೀಲಿ ಚಿತ್ರಗಳ ವೀಕ್ಷಣೆಯ ಅತಿ ಬಳಕೆಯು ಆಧುನಿಕ ಯುವಜನತೆಯಲ್ಲಿ ಹೊಸ ರೀತಿಯ ವ್ಯಸನವಾಗಿ ಪರಿಣಮಿಸುತ್ತಿದ್ದು, ಇದು ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರಲಿದೆ. ಅತಿ ಹೆಚ್ಚು ಜನಸಂಖ್ಯೆ ಮತ್ತು ಯುವಜನತೆಯನ್ನು ಹೊಂದಿರುವ ಭಾರತದಲ್ಲಿ ಇಂಟರ್ನೆಟ್ ಹಾಗೂ ಸ್ಮಾರ್ಟ್‌ಫೋನ್ ಬಳಕೆ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಡಿಜಿಟಲ್ ಜಾಗರೂಕತೆ ಮುಖ್ಯ. ಒತ್ತಡ ಮತ್ತು ಕಿನ್ನತೆಯಿಂದ ಹೊರಬರಲು ಉತ್ತಮ ಆಹಾರ ವ್ಯಾಯಾಮ,  ಸ್ನೇಹಿತರ ಒಡನಾಟ ಹಾಗೂ ಹಿರಿಯರ ಸಲಹೆಯೊಂದಿಗೆ ಆರೋಗ್ಯಕರ ಜೀವನ ರೂಢಿಸಿಕೊಳ್ಳುವುದು ಅಗತ್ಯ ಎಂದು ಹೇಳಿದರು.

ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯ -1 ಜಿಲ್ಲಾ ನ್ಯಾಯಾಧೀಶರಾದ ಆನಂದ್ ಪಿ ಹೊಗಡೆ ಅವರು ಮಾತನಾಡಿ ಮೈಸೂರು ನ್ಯಾಯಾಲಯದಲ್ಲಿ ಪ್ರಸ್ತುತ ಬರೋಬ್ಬರಿ 600 ಕ್ಕೂ ಅಧಿಕ ಪೋಕ್ಸೊ ಪ್ರಕರಣಗಳು ವಿಚಾರಣೆಗಾಗಿ ಬಾಕಿ ಉಳಿದಿದ್ದು, ಪೋಕ್ಸೊ ಕಾಯ್ದೆಯಡಿ ಬರುವ ಪ್ರಕರಣಗಳನ್ನು ಮುಖ್ಯವಾಗಿ ಮೂರು ವಿಭಾಗಗಳಾಗಿ ವರ್ಗೀಕರಿಸಬಹುದು ಬಾಲ್ಯವಿವಾಹಗಳು,  ಲೈಂಗಿಕ ಒಡನಾಟ,  ಅಪರಾಧ ಪ್ರಕರಣಗಳು.  ಕೆಲವು ಪ್ರಕರಣಗಳಲ್ಲಿ ಅತ್ಯಂತ ಆಘಾತಕಾರಿ ಸಂಗತಿಗಳೆಂದರೆ, ಸ್ವತಃ ತಂದೆಯೇ ತನ್ನ ಸ್ವಂತ ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿ, ಮಗು ಜನ್ಮ ಪಡೆದಿರುವ ಅಮಾನವೀಯ ಘಟನೆಗಳು ವರದಿಯಾಗಿವೆ. ಇದು ನಮ್ಮ ಸಂಸ್ಕೃತಿ ಮತ್ತು ಕಾನೂನಿನ ಬಗ್ಗೆ ಇರುವ ಗೌರವ ಎಲ್ಲಿಗೆ ತಲುಪಿದೆ ಎಂಬ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿದೆ ಎಂದರು.

ಅಂಕಿಅಂಶಗಳು ಮತ್ತು ನ್ಯಾಯಾಲಯದ ಅನುಭವದ ಪ್ರಕಾರ,ವಿಕಲಚೇತನ ಮಕ್ಕಳು, ಸಾಮಾಜಿಕ ಹಾಗೂ ಆರ್ಥಿಕವಾಗಿ ತೀರಾ ಹಿಂದುಳಿದ ವರ್ಗದ ಮಕ್ಕಳು, ತಾಯಂದಿರು ಕೆಲಸಕ್ಕೆ ಹೋದಾಗ ಹಿರಿಯರ ಸೂಕ್ತ ಮೇಲ್ವಿಚಾರಣೆ ಇಲ್ಲದ ಮಕ್ಕಳು, ಕುಟುಂಬದಲ್ಲಿ ನಿತ್ಯ ಕಲಹಗಳು ನಡೆದು, ಮನೆಯ ವಾತಾವರಣ ಹದಗೆಟ್ಟಿರುವ ಕುಟುಂಬಗಳ ಮಕ್ಕಳು ಮೇಲೆ  ಲೈಂಗಿಕ ದೌರ್ಜನ್ಯಕ್ಕೆ ಹೆಚ್ಚು ಒಳಗಾಗುವ ಸಾಧ್ಯತೆ  ಇರುತ್ತದೆ ಎಂದರು.

  ಲಿಂಗ ತಟಸ್ಥ ಕಾಯ್ದೆಯು ಕೇವಲ ಹೆಣ್ಣುಮಕ್ಕಳಿಗೆ ಮಾತ್ರವಲ್ಲ, 18 ವರ್ಷದ ಕೆಳಗಿನ ಗಂಡುಮಕ್ಕಳಿಗೂ ಅನ್ವಯಿಸುತ್ತದೆ. ಮೈಸೂರು ನ್ಯಾಯಾಲಯದ ಬಾಕಿ ಪ್ರಕರಣಗಳಲ್ಲಿ ಸುಮಾರು 6 ಪ್ರಕರಣಗಳಲ್ಲಿ ಗಂಡುಮಕ್ಕಳೇ ಸಂತ್ರಸ್ತರಾಗಿದ್ದಾರೆ. ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳದ ಗಂಭೀರತೆಗೆ ತಕ್ಕಂತೆ ಕಠಿಣ ಶಿಕ್ಷೆ ಹಾಗೂ ವರದಿ ಮಾಡದಿರುವುದೂ ಕೂಡ ಅಪರಾಧ ಎಂದು ಕಾಯ್ದೆ ಸ್ಪಷ್ಟಪಡಿಸುತ್ತದೆ. ಸಮ್ಮತಿಯ (Consent) ಪ್ರಶ್ನೆ ಮತ್ತು ಕಾನೂನು ಕೆಲವು ಸಂದರ್ಭಗಳಲ್ಲಿ ಅಪ್ರಾಪ್ತ ಬಾಲಕಿಯರ ಸಮ್ಮತಿ ಇದ್ದರೂ ಅಥವಾ ಅವರೇ ಪ್ರೇರೇಪಿಸಿ ಹುಡುಗನೊಂದಿಗೆ ಹೋದರೂ ಕಾನೂನಿನ ದೃಷ್ಟಿಯಲ್ಲಿ ಅದು ಅಪರಾಧವೇ ಆಗುತ್ತದೆ. ಸಮ್ಮತಿಯಿದ್ದರೂ ಕಾನೂನುಬದ್ಧವಾಗಿ ಅದು ಒಪ್ಪಿತವಾಗುವುದಿಲ್ಲ ಹಾಗೂ ತಂದೆ-ತಾಯಿ ಅಥವಾ ಪೋಷಕರ ದೂರಿನ ಮೇರೆಗೆ ಇದು ಪೋಕ್ಸೊ ಪ್ರಕರಣವಾಗಿ ಪರಿವರ್ತನೆಗೊಳ್ಳುತ್ತದೆ ಎಂದರು.

ಕುಟುಂಬದ ಸದಸ್ಯರು, ಸಂಬಂಧಿಕರು, ಸ್ನೇಹಿತರು ಮತ್ತು ನೆರೆಹೊರೆಯವರಿಗೆ ಒಳ್ಳೆಯ ಸ್ಪರ್ಶ  ಹಾಗೂ ಕೆಟ್ಟ ಸ್ಪರ್ಶದ  ಬಗ್ಗೆ ಮುಕ್ತವಾಗಿ ತಿಳಿಹೇಳಬೇಕು. ಅನೇಕ ಮಕ್ಕಳು ಮುಜುಗರದಿಂದ ಅಥವಾ ಭಯದಿಂದ ವಿಷಯವನ್ನು ಹೊರಹಾಕುವುದಿಲ್ಲ. ಹೀಗಾಗಿ, ಸಮಾಜದಲ್ಲಿ ಈ ಕುರಿತು ವ್ಯಾಪಕ ಜಾಗೃತಿ ಮೂಡಿಸುವ ಮೂಲಕ ಮಕ್ಕಳನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದರು.

ಅಪರಾಧ ನಡೆಯುತ್ತಿರುವುದು ಅಥವಾ ನಡೆದಿರುವುದು ಯಾರಿಗೇ ಗಮನಕ್ಕೆ ಬಂದರೂ ಮನೆಯಲ್ಲಿ, ಹೊರಗಡೆ, ಅಥವಾ ಇನ್ಯಾವುದೇ ಸ್ಥಳದಲ್ಲಿ, ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು ಕಾನೂನುಬದ್ಧ ಕಡ್ಡಾಯ ಕರ್ತವ್ಯ. ಮಾಹಿತಿ ಮುಚ್ಚಿಡುವುದು ಅಥವಾ ತಡ ಮಾಡುವುದು ಪೋಕ್ಸೊ ಕಾಯ್ದೆಯಡಿ ಅಪರಾಧವಾಗಿದೆ ಎಂದು ಹೇಳಿದರು

ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಂ ಎಸ್ ಅನಿತಾ ಅವರು ಮಾತನಾಡಿ ಈ ಕಾರ್ಯಕ್ರಮದ ಮೂಲ ಉದ್ದೇಶವು ವಿದ್ಯಾರ್ಥಿಗಳನ್ನು ನಕಾರಾತ್ಮಕ ಮಾನಸಿಕ ಸ್ಥಿತಿಯಿಂದ ಹೊರತರುವುದಾಗಿದೆ. ಅನ್ಯಾಯ ಅಥವಾ ದೌರ್ಜನ್ಯಗಳು ಸಂಭವಿಸಿದಾಗ ಧೈರ್ಯದಿಂದ ಮುನ್ನುಗ್ಗಲು ನಮ್ಮ ದೇಶದ ಕಾನೂನುಗಳು ಹೇಗೆ ರಕ್ಷಣೆ ನೀಡುತ್ತವೆ ಎಂಬ ಅರಿವು ಇರಬೇಕು.ಅತ್ಯುತ್ತಮ ಜೀವನವನ್ನು ನಡೆಸಲು ನಾವೆಲ್ಲರೂ ಸರಳ ಮಾರ್ಗಗಳನ್ನು ಅನುಸರಿಸಬೇಕು ಎಂದು ಹೇಳಿದರು.

ಪ್ರತಿಯೊಬ್ಬರೂ ಶುದ್ಧ ಹೃದಯವಂತರಾಗಿ ಬಾಳಿದಾಗ ಮಾತ್ರ ಅನ್ಯಾಯ, ದೌರ್ಜನ್ಯ ಮತ್ತು ಅತ್ಯಾಚಾರ ಮುಕ್ತ ಸಮಾಜವನ್ನು ನಿರ್ಮಿಸಲು ಸಾಧ್ಯ. ಇಂದಿನ ಯುವಜನತೆ ಸರಿಯಾದ ಸಮಯದಲ್ಲಿ, ಸರಿಯಾದ ವ್ಯಕ್ತಿಯನ್ನು ಪ್ರೀತಿಸುವುದನ್ನು ಕಲಿಯಬೇಕು. ಭಾವನಾತ್ಮಕ ನಿರ್ಧಾರಗಳು ಅಥವಾ ಕ್ರಶ್ ಗೆ ಒಳಗಾಗಿ ಖಿನ್ನತೆಗೆ ಒಳಗಾಗಬಾರದು. ಖಿನ್ನತೆಯಿಂದ ಏಕಾಂಗಿತನ ಹೆಚ್ಚಿ, ಸಮಾಜದಿಂದ ವಿಮುಖರಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದಕ್ಕೆ ಪರ್ಯಾಯವಾಗಿ ವಿದ್ಯಾರ್ಥಿಗಳು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನಾಗರಾಜು ಸಿದ್ದಪ್ಪ ಅಂಕಸದೊಡ್ಡಿ, ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ವಕೀಲರಾದ ಸಂತೋಷ್ ನಾಗರಾಳೆ, ಮೈಸೂರು ವಕೀಲ ಸಂಘದ ಅಧ್ಯಕ್ಷರಾದ ಎಸ್ ಲೋಕೇಶ್, ಪ್ರಾದೇಶಿಕ ಫೆಲಿಸಿಟೇಟರ್, ಹಾರ್ಟ್‌ಫುಲ್‌ನೆಸ್ ಸಂಸ್ಥೆಯ ಕೆ ಮಧುಸೂದನ್ ಮಾದಕ ವಸ್ತು ವಿರೋಧ ಜಾಗೃತ ಸಮಿತಿಯ ಪ್ರೊ. ಸರಿತಾ ಕೆ, ಮನೋವಿಭಾಗದ ಮುಖ್ಯಸ್ಥರು ಮತ್ತು ರಾಗಿಂಗ್ ವಿರೋಧಿ ಸಮಿತಿಯ ಡಾ. ವಾಣಿ ಆರ್ ಬಲ್ಲಾಳ್ ಮತ್ತಿತರರು ಉಪಸ್ಥಿತರಿದ್ದರು.

Share This Article
Leave a Comment