ಕೆಎಸ್‌ಜಿಎ ಹಾಗೂ ಎವಿಎಸ್‌ಎಸ್ ಸಹಯೋಗದಲ್ಲಿ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭ

latha prabhukumar
3 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಕೆಎಸ್‌ಜಿಎ ಹಾಗೂ ಎವಿಎಸ್‌ಎಸ್ ಸಹಯೋಗದಲ್ಲಿ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭ

ಬಿಲ್ಡಿಂಗ್ ಫಂಡ್‌ಗೆ ನನ್ನ ಅನುದಾನದಲ್ಲಿ ೨೫ ಸಾವಿರ ರೂ.: ಶಾಸಕ ಕೆ.ಹರೀಶ್‌ಗೌಡ

ಮೈಸೂರು: ಕೆಎಸ್‌ಜಿಎ ಹಾಗೂ ಎವಿಎಸ್‌ಎಸ್ ಬಿಲ್ಡಿಂಗ್ ಫಂಡ್‌ಗೆ ನನ್ನ ಅನುದಾನದಲ್ಲಿ ೨೫ ಲಕ್ಷ ರೂ. ನೀಡುವೆ ಎಂದು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಹರೀಶ್‌ಗೌಡ ಹೇಳಿದರು.
ದಿ.ಕರ್ನಾಟಕ ಎಸ್‌ಸಿ/ ಎಸ್‌ಟಿ ಗ್ರ್ಯಾಜುಯೇಟ್ ಅಸೋಷಿಯೇಷನ್ ಎವಿಎಸ್‌ಎಸ್ ಸಹಯೋಗದೊಂದಿಗೆ ಸರಸ್ವತಿಪುರಂನ ಕಾಮಾಕ್ಷಿ ಆಸ್ಪತ್ರೆ ಎದುರು ಏರ್ಪಡಿಸಿದ್ದ ತರಬೇತಿ ಕೇಂದ್ರದ (ಕೋಚಿಂಗ್ ಸೆಂಟರ್) ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಕೆಎಸ್‌ಜಿಎ ಹಾಗೂ ಎವಿಎಸ್‌ಎಸ್ ಸಹಯೋಗದಲ್ಲಿ ಇಂದು ಉದ್ಘಾಟನೆಗೊಂಡಿರುವ ತರಬೇತಿ ಕೇಂದ್ರ ಕೇವಲ ಎಸ್‌ಸಿ/ ಎಸ್‌ಟಿ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗದೆ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಇದರಿಂದ ಅನುಕೂಲವಾಗಲಿ ಎಂದರು. ವಿದ್ಯಾರ್ಥಿಗಳು ಕೂಡ ಇಂತಹ ತರಬೇತಿ ಕೇಂದ್ರಗಳಲ್ಲಿ ಭಾಗವಹಿಸಿ ಅಲ್ಲಿ ಕೊಡುವ ತರಬೇತಿಯನ್ನು ಸದ್ಭಳಕೆ ಮಾಡಿಕೊಂಡು ತಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿರುವ ಎವಿಎಸ್‌ಎಸ್ ಸಂಸ್ಥೆಯ ಕಾರ್ಯವೈಖರಿ ಶ್ಲಾಘನೀಯವಾಗಿದ್ದು, ಇಂತಹ ಸಂಸ್ಥೆಗೆ ನನ್ನ ಸಹಕಾರ ಯಾವಾಗಲೂ ಇರುತ್ತದೆ ಎಂದು ಶಾಸಕ ಕೆ.ಹರೀಗೌಡ ಭರವಸೆ ನೀಡಿದರು.
ದಿ.ಎಸ್‌ಸಿ/ಎಸ್‌ಟಿ ಗ್ರ್ಯಾಜುಯೇಟ್ ಅಸೋಷಿಯೇಷನ್‌ನ ಅಧ್ಯಕ್ಷರಾದ ಎಂ.ಸುರೇಶ್ ಅವರು ಮಾತನಾಡಿ, ಎವಿಎಸ್‌ಎಸ್‌ನವರು ನಮ್ಮ ಕೆಎಸ್‌ಜಿಎ ಸಹಯೋಗದಲ್ಲಿ ಪಿಯುಸಿ ಹಾಗೂ ಪದವಿ ನಂತರದ ವಿದ್ಯಾರ್ಥಿಗಳಿಗೆ ಉದ್ಯೋಗಕ್ಕಾಗಿ ವಿವಿಧ ತರಬೇತಿ ನೀಡಲು ತರಬೇತಿ ಕೇಂದ್ರ (ಕೋಚಿಂಗ್ ಸೆಂಟರ್) ಆರಂಭಿಸಿರುವುದು ನಿಜಕ್ಕೂ ಶ್ಲಾಘನೀಯ. ಈ ಕೇಂದ್ರದಲ್ಲಿ ಎಸ್‌ಸಿ/ ಎಸ್‌ಟಿ ಹಾಗೂ ಇನ್ನಿತರ ಒಬಿಸಿ ವಿದ್ಯಾರ್ಥಿಗಳಿಗೂ ಕೂಡ ತರಬೇತಿ ಕೇಂದ್ರದಲ್ಲಿ ಅವಕಾಶ ನೀಡಲಾಗಿದೆ. ನಿಸ್ವಾರ್ಥ ಭಾವನೆಯಿಂದ ಈ ತರಬೇತಿ ಕೇಂದ್ರವನ್ನು ತೆರೆದಿದ್ದೇವೆ. . ಈ ಸಂಸ್ಥೆಯಲ್ಲಿ ಕೆಎಎಸ್, ಯುಪಿಎಸ್‌ಸಿ, ಆರ್‌ಆರ್‌ಬಿ, ಎಸ್‌ಎಸ್‌ಸಿ, ಬ್ಯಾಂಕಿಂಗ್, ಪೊಲೀಸ್, ಪಿಎಸ್‌ಐ ನೇಮಕಾತಿಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನುರಿತ ತಜ್ಞರು, ಉಪನ್ಯಾಸಕರಿಂದ ತರಬೇತಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಸಂಸ್ಥೆಯನ್ನು ಇನ್ನೂ ಉತ್ತಮ ಮಟ್ಟಕ್ಕೆ ಕೊಂಡೊಯ್ಯಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಧಮ್ಮ ಸಾನಿಧ್ಯ ವಹಿಸಿದ್ದ ಟಿ.ನರಸೀಪುರ ನಳಂದ ಬುದ್ಧ ವಿಹಾರದ ಭಂತೆ ಬೋದಿರತ್ನ ಅವರು ಮಾತನಾಡಿ, ಕೆಎಸ್‌ಜಿಎ ಹಾಗೂ ಎವಿಎಸ್‌ಎಸ್ ನಂತಹ ಸಂಸ್ಥೆಗಳಿಂದ ಯಾವಾಗಲೂ ಸಮಾಜಮುಖಿ ಕಾರ್ಯಕ್ರಮಗಳು ನಡೆಯುತ್ತಿರಬೇಕು. ಆಗ ಸಂಸ್ಥೆಗಳಿಗೂ ಕೂಡ ಸಾರ್ವಜನಿಕರಿಂದ ಉತ್ತಮ ಶ್ಲಾಘನೆ ಬರುತ್ತದೆ. ಸಂಸ್ಥೆಯ ಎಲ್ಲಾ ನಿರ್ದೇಶಕರೂ ಕೂಡ ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಎವಿಎಸ್‌ಎಸ್ ಉತ್ತಮವಾದ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಸಂಸ್ಥೆಯ ಜೊತೆ ನಾನು ಸದಾ ಇರುತ್ತೇನೆ. ಇದರ ಬೆಳವಣಿಗೆಗೆ ನನ್ನ ಬೆಂಬಲ ಇದ್ದೇ ಇರುತ್ತದೆ. ಈ ಸಂಸ್ಥೆ ರಾಜ್ಯದಲ್ಲಿ ಮತ್ತಷ್ಟು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ ಎಂದು ನಾನು ಆಶಿಸುತ್ತೇನೆ ಎಂದರು.
ಎವಿಎಸ್‌ಎಸ್ ಅಧ್ಯಕ್ಷರಾದ ತುಂಬಲರಾಮಣ್ಣ ಅವರು ಮಾತನಾಡಿ, ನಮ್ಮ ತರಬೇತಿ ಕೇಂದ್ರ ಎಸ್‌ಸಿ/ ಎಸ್‌ಟಿ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಓಬಿಸಿ ಅವರಿಗೂ ಕೂಡ ಇಲ್ಲಿ ವಿವಿಧ ಉದ್ಯೋಗಗಳಿಗೆ ತರಬೇತಿ ನೀಡಲಾಗುತ್ತದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಸಂಸ್ಥೆಯ ತರಬೇತಿ ಕೇಂದ್ರಗಳನ್ನು ವಿಸ್ತರಿಸಬೇಕು ಎಂಬ ಚಿಂತನೆಯಲ್ಲಿ ಇದ್ದೇವೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದು ಮನವಿ ಮಾಡಿದರು.
ಎಸ್‌ಸಿ/ ಎಸ್‌ಟಿ. ಗ್ಯಾಜುಯೇಟ್ ಅಸೋಷಿಯೇಷನ್ ಉಪಾಧ್ಯಕ್ಷರಾದ ಪ್ರಕಾಶ್ ಪಿ. ಅವರು ತರಬೇತಿ ಕೆಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಿಎಸ್‌ಪಿ ರಾಜ್ಯಾಧ್ಯಕ್ಷರಾದ ಕೃಷ್ಣಮೂರ್ತಿ, ಹಿರಿಯ ದಲಿತ ಹೋರಾಟಗಾರರಾದ ಬಂಗವಾದಿ ನಾರಾಯಣಪ್ಪ, ಅಂಬೇಡ್ಕರ್‌ವಾದಿ ಚಿಂತಕರು ಮುಡಾದ ಮುಖ್ಯ ಲೆಕ್ಕಾಧಿಕಾರಿಗಳಾದ ಮಹದೇವನಾಯ್ಕ ಎವಿಎಸ್‌ಎಸ್‌ನ ನಿರ್ದೇಶಕರು, ಸದಸ್ಯರು ಹಾಗೂ ಎಸ್‌ಸಿ/ ಎಸ್‌ಟಿ. ಗ್ಯಾಜುಯೇಟ್ ಅಸೋಷಿಯೇಷನ್‌ನ ಪದಾಧಿಕಾರಿಗಳು ಹಾಜರಿದ್ದರು.

Share This Article
Leave a Comment